ಸಿ.ಟಿ. ರವಿ ಟೀಕೆಗಳಿಗೆ ತಿರುಗೇಟು
ಬೆಂಗಳೂರು : ನಾನು ಹಿಂದೂ, ನಮ್ಮಪ್ಪ-ಅವ್ವನೂ ಹಿಂದೂ. ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂ ಆಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಹಿಂದೂ ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಸಿ.ಟಿ. ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ ಕೊಟ್ಟಿದ್ದೆವಾ? ಕೇವಲ ಶೇ.5ರಷ್ಟು ಮುಸ್ಲಿಂರಿಗೆ ಕೊಟ್ಟಿದ್ದೆವು. ಶೇ. 95 ರಷ್ಟು ಹಿಂದುಗಳಿಗೆ ಕೊಡಲಾಗಿತ್ತು. ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ 2017ರಲ್ಲಿ ಹೇಳಿದ್ದರು. ಆದರೆ, ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ಹೇಳಿದರು.
ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ಅಸ್ಸಾಂನಲ್ಲಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದು ಹೇಳಿದರು.