ನಿಷ್ಕ್ರಿಯ ಜನಪ್ರತಿನಿಧಿಗಳಿಗೆ ತರಾಟೆ
ಬೈಗುಳ ಕೇಳಿಸಿಕೊಂಡೇ ಚುನಾವಣೆ ಗೆಲ್ಲಬೇಕೆಂದು ಪಾಠ
ಮಂಗಳೂರು : ಬಿಜೆಪಿ ಕೋರ್ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರಿನ ಕಾರ್ಯಕ್ರಮ ಮುಗಿಸಿಕೊಂಡು ಮಂಗಳೂರಿಗೆ ಬಂದ ಶಾ ರಾತ್ರಿ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳ ಶಾಸಕರು ಮತ್ತು ಸಂಸದರ ಹಾಗೂ ಪದಾಧಿಕಾರುಗಳ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನಿಷ್ಕ್ರಿಯ ಶಾಸಕರನ್ನು ಮತ್ತು ಸಂಸದರನ್ನು ಸರಿಯಾಗಿ ಜಾಡಿಸಿದ್ದಾರೆ. ಒಂದು ಹಂತದಲ್ಲಿ ಪಕ್ಷಕ್ಕಾಗಿ ದುಡಿಯಲು ಸಾಧ್ಯವಾಗದಿದ್ದರೆ ಹೇಳಿಬಿಡಿ ನಮ್ಮ ಕಾರ್ಯಕರ್ತರಿದ್ದಾರೆ ಅವರಿಗೆ ಹೇಳುತ್ತೇನೆ ಎಂದು ತಾಕೀತು ಮಾಡಿದ್ದಾರೆ.
ಕರಾವಳಿ ಮತ್ತು ಮಲೆನಾಡು ಬಿಜೆಪಿಯ ಭದ್ರಕೋಟೆ. ಇದನ್ನು ಯಾವ ಕಾರಣಕ್ಕೂ ಪಕ್ಷ ಕಳೆದುಕೊಳ್ಳಲು ಸಿದ್ಧವಿಲ್ಲ. ಶಾಸಕ, ಸಂಸದ ಸ್ಥಾನದ ಜವಾಬ್ದಾರಿ ನಿಭಾಯಿಸುವುದರೊಂದಿಗೆ ಚುನಾವಣೆಯಲ್ಲಿ ಗೆಲ್ಲುವ ಕೆಲವನ್ನೂ ಮಾಡಬೇಕಿದೆ. ಈಗಲೂ ಜನ ಮೋದಿ ಮುಖ ಮತ್ತು ಕಮಲದ ಚಿಹ್ನೆ ನೋಡಿಕೊಂಡು ಮತ ಹಾಕುವ ಪರಿಸ್ಥಿತಿ ಇದೆ ಎಂದಾದರೆ ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ವಿರೋಧಿಗಳು ತೆಗಳುವುದು, ಬೈಯ್ಯುವುದು ಸಾಮಾನ್ಯ. ಇವುಗಳನ್ನು ಕೇಳಿಸಿಕೊಂಡೇ ಚುನಾವಣೆಯಲ್ಲಿ ಗೆದ್ದು ತೋರಿಸಬೇಕು. ಘಾಲಿ ಖಾವೊ ಚುನಾವ್ ಜಿತಾವೊ ಎಂದು ಅಮಿತ್ ಶಾ ಪಾಠ ಮಾಡಿದ್ದಾರೆ.
ಪಕ್ಷದೊಳಿಗೆ ಇರುವ ಟಿಕೆಟ್ ಫೈಟ್‌ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಾ ಪಕ್ಷ ನಿಮ್ಮ ಕೆಲಸವನ್ನು ನೋಡಿ ಟಿಕೆಟ್ ಕೊಡುತ್ತದೆ ಹೊರತು ಫೈಟ್ ಅನ್ನು ಅಲ್ಲ. ಯಾರಿಗೆ ಟಿಕೆಟ್ ಕೊಡಬೇಕೆಂದು ಪಕ್ಷಕ್ಕೆ ಗೊತ್ತಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು. ಇದು ಸಾಧ್ಯವಾಗದಿದ್ದರೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಪಕ್ಷ ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸುಮಾರು ಅರ್ಧ ತಾಸು ನಡೆದ ಸಭೆಯಲ್ಲಿ ಶಾಸಕರಾಗಲಿ, ಸಂಸದರಾಗಲಿ ತುಟಿ ಪಿಟಕ್ ಎಂದಿಲ್ಲ, ಮಾತನಾಡಿದ್ದೆಲ್ಲ ಪದಾಧಿಕಾರಿಗಳು. ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಶಾ ಮುಖ್ಯ ವಿಷಯಗಳನ್ನು ನೋಟ್ ಮಾಡಿಟ್ಟುಕೊಂಡಿದ್ದಾರೆ.
ವಿರೋಧಿಗಳ ಮನ ಗೆಲ್ಲುವುದಕ್ಕೆ ಕೆಲವು ಟಿಪ್ಸ್‌ಗಳನ್ನು ಕೊಟ್ಟಿರುವ ಶಾ ಎಲ್ಲ ಮೋರ್ಚಾಗಳನ್ನು ಸೇರಿಸಿ ಆರು ತಂಡಗಳನ್ನು ಮಾಡಿಕೊಂಡು ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಪ್ರತಿಯೊಬ್ಬರ ಮನೆಗೂ ಭೇಟಿ ನೀಡಲು ಸಲಹೆ ಮಾಡಿದ್ದಾರೆ. ವಿರೋಧಿಗಳ, ತೆಗಳುವವರ, ಟೀಕಿಸುವವರ ಮನೆಗೂ ಭೇಟಿ ನೀಡಬೇಕೆಂದು ಹೇಳಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ಪಕ್ಷದೊಳಗೆ ಟಿಕೆಟ್ ಫೈಟ್, ಗೊಂದಲಗಳಿರಬಾರದು ಎಂದು ತಾಕೀತು ಮಾಡಿದ್ದಾರೆ.