ಈಶ್ವರಮಂಗಲ : ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಅಮಿತ್ ಶಾ ಅವರು ಕ್ಷೇತ್ರದ ಆಂಜನೇಯನಿಗೆ ನವರತ್ನ ಸಹಿತ ರಜತ ಗಧೆ ಅರ್ಪಿಸಿದರು.
ಕೇರಳದ ಕಣ್ಣೂರಿನಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಗಜಾನನ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಬಳಿಕ ಪಂಚಮುಖಿ ಆಂಜನೇಯನ ದರ್ಶನ ಪಡೆದು ನವರತ್ನ ಸಹಿತ ರಜತ ಗಧೆ ಅರ್ಪಿಸಿದರು.
ಪಂಚಮುಖಿ ಆಂಜನೇಯ ಸನ್ನಿಧಿಯಲ್ಲಿ ವಿಶೇಷವಾಗಿ ನೀಡುವ ಪಂಚಮುಖಿ ಆಂಜನೇಯ ರಕ್ಷೆಯನ್ನು ಕ್ಷೇತ್ರದ ಅರ್ಚಕ ರಾಜೇಶ್ ಗಾಂವ್ಕರ್ ಅಮಿತ್ ಶಾ ಅವರ ಕೈಗೆ ಕಟ್ಟಿದರು. ಬಳಿಕ ಶಾಲು ಹೊದಿಸಿ, ಮಲ್ಲಿಗೆ ಹಾರ ಹಾಕಿ, ಪ್ರಸಾದ ನೀಡಿ ಗೌರವಿಸಲಾಯಿತು. ನಂತರ ಪ್ರದಕ್ಷಿಣೆ ಹಾಕಿ ಅಮರ ಗಿರಿಯತ್ತ ತೆರಳಿದರು.
ಅಮರಗಿರಿ ಉದ್ಘಾಟನೆ :
ಕ್ಷೇತ್ರದ ಅಮರಗಿರಿಯ ಹಚ್ಚಹಸಿರಿನ ನಡುವೆ ನಿರ್ಮಾಣವಾದ ಅಮರ ಯೋಧರ ನೆನಪಿನ ಅಮರಗಿರಿಯನ್ನು ಕೇಂದ್ರ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದರು. ದೇಶದಲ್ಲೇ ಪ್ರಪ್ರಥಮ ಬಾರಿಗೆ ಅಷ್ಠ ಭುಜಾಕೃತಿಯ ಅಮರ ಜ್ಯೋತಿ ಮಂದಿರವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು. ಬಳಿಕ ಅಮರಗಿರಿಯ ಶಿಲಾಫಲಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಒಳಪ್ರವೇಶಿಸಿ ಮುಂದೆ ಸಿಗುವ ಏಕಶಿಲೆಯಲ್ಲಿ ನಿರ್ಮಾಣವಾದ ವೀರಾಗ್ರಣಿ ಕೈಯ ಆಕೃತಿ ಮತ್ತು ಕೈಯಲ್ಲಿದ್ದ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಆಗಮನದ ಸವಿನೆನಪಿಗಾಗಿ ಹಸ್ತಾಕ್ಷರ :
ಅಮರಗಿರಿಗೆ ಆಗಮಿಸಿದ ನೆನಪಿಗಾಗಿ ಅಮಿತ್ ಶಾ ಅವರು ಸಂವಿಧಾನದ ಮೂಲಪ್ರತಿಯಲ್ಲಿ ತಮ್ಮ ಹಸ್ತಾಕ್ಷರವನ್ನು ನಮೂದಿಸಿ ಕ್ಷೇತ್ರಕ್ಕೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಶ್ರೀ ಪ್ರತಿಷ್ಠಾನದ ಧರ್ಮದರ್ಶಿ ಶಿವರಾಮ್ ಪಿ. ಅವರು ಅಮಿತ್ ಶಾ ಅವರಿಗೆ ರಾಮನ ಪ್ರತಿಮೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಚಿವರ ಜತೆ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು, ಧರ್ಮ ಪ್ರತಿಷ್ಠಾನದ ಟ್ರಸ್ಟೀ ರಘುರಾಜ್ ಭಟ್, ವಕೀಲರಾದ ವಿಘ್ನೇಶ್, ರಾಜಶೇಖರ್, ಪವನ್ ಚಂದ್ರ, ಶಾಂತಿಭೂಷಣ್, ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ವಕೀಲ ಮಹೇಶ್ ಕಜೆ, ಶಿಕ್ಷಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಗಾನ ವೈಭವ : ಕಾರ್ಯಕ್ರಮದ ಮೊದಲು ಯಕ್ಷಗಾನದ ಮೇರು ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ ಕಕ್ಕೆಪದವು ಅವರಿಂದ ಗಾನ ವೈಭವ ಕಾರ್ಯಕ್ರಮ ನಡೆಯಿತು.