ಪುತ್ತೂರು: ಅಮಿತ್ ಶಾ ಎಂಬ ರಾಜಕೀಯ ಚಾಣಕ್ಯ ಮುತ್ತಿನ ನಗರಿ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸಾಲು ಸಾಲು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಜೊತೆಗೆ, ಮುಂಬರುವ ಚುನಾವಣೆಗೆ ಭರ್ಜರಿ ಮುನ್ನುಡಿಯನ್ನೇ ಬರೆದಿದ್ದಾರೆ.
ಪುತ್ತೂರು ಬಿಜೆಪಿಯ ಭದ್ರ ಕೋಟೆ. ಹಲವಾರು ನಾಯಕರ ಪರಿಶ್ರಮದ ಫಲವಾಗಿ, ಬಿಜೆಪಿ ಪುತ್ತೂರಿನಲ್ಲಿ ಭದ್ರವಾಗಿ ತಳವೂರಿದೆ. ಇದಕ್ಕೆ ಸಾಥ್ ನೀಡುವಂತೆ ಅಮಿತ್ ಶಾ ಅವರು ಭೇಟಿ ನೀಡಿ, ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಶಾ ಭೇಟಿಯ ಬಳಿಕ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಬಿಜೆಪಿ ಪಾಳಯದಲ್ಲಿ ಹೊಸತನ ಮತ್ತೆ ವಿಜೃಂಭಿಸತೊಡಗಿದೆ. ಇದು ಮುಂಬರುವ ಚುನಾವಣೆಯಲ್ಲಿ ಪ್ರತಿಧ್ವನಿಸುವುದು ನಿಚ್ಚಳ.
ಪುತ್ತೂರಿನ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ, ದೇಶದ ಪ್ರಥಮ ಸಹಕಾರ ಸಚಿವ ಅಮಿತ್ ಶಾ ಪಾಲ್ಗೊಂಡರು. ಇದು ಸಹಕಾರ ಸಂಸ್ಥೆಯೊಂದರ ಕಾರ್ಯಕ್ರಮವೇ ಆದರೂ, ಘೋಷಣೆಗಳಿಗೂ ವೇದಿಕೆ ಸಾಕ್ಷಿಯಾಯಿತು. ಮುಂದಿನ ಅವಧಿಯಲ್ಲೂ ಬಿಜೆಪಿಗೆ ಅವಕಾಶ ನೀಡಿ ಎಂದು ಅಮಿತ್ ಶಾ ಕೇಳಿಕೊಂಡಿದ್ದು, ಜನರ ಪ್ರತಿಕ್ರಿಯೆ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮುಂದಿನ ಚುನಾವಣೆಗೆ ದಿಕ್ಸೂಚಿ:
ಅಮಿತ್ ಶಾ ಆಗಮನ ಆಡಳಿತಾರೂಢ ಪಕ್ಷದ ವಿರೋಧಿಗಳಲ್ಲಿ ನಡುಕ ಹುಟ್ಟಿಸಿದೆ ಎನ್ನುವ ಮಾತು ಕೇಳಿಬರುತ್ತಿವೆ. ಕಾರಣ, ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಮೋದಿ – ಶಾ ಜೋಡಿ, ಪುತ್ತೂರಿನಲ್ಲಿ ಏನು ಮೋಡಿ ಮಾಡಲಿದೆಯೋ ಎಂಬ ಕಾತರ. ಬಿಜೆಪಿಯೊಳಗೆ ಏನೇ ಭಿನ್ನಮತಗಳಿದ್ದರೂ, ಚುನಾವಣೆ ಘೋಷಣೆ ಆಗುತ್ತಿದ್ದಂತೆ ಎಲ್ಲರೂ ಒಗ್ಗಟ್ಟು. ಈ ಒಗ್ಗಟ್ಟಿಗೆ ಶಾ ಬಲ ಜೊತೆಗೂಡಿದರೆ ಹೇಗಾದೀತು ಎಂಬ ಭಯ ವಿರೋಧಿಗಳಲ್ಲಿ ಸಹಜವಾಗಿಯೇ ಇದೆ.
ಬಿಜೆಪಿಯೊಳಗಿನ ಭಿನ್ನಾಬಿಪ್ರಾಯ ನಗಣ್ಯ :
ಬಿಜೆಪಿಯೊಳಗಿನ ಭಿನ್ನಾಬಿಪ್ರಾಯ ಏನಿದ್ದರೂ ನಿನ್ನೆ ನಡೆದ ಕಾರ್ಯಕ್ರಮದೆದುರು ನಗಣ್ಯ. ಏಕೆಂದರೆ ಪಕ್ಷದ ಸಚಿವರು, ನಾಯಕರು, ಪ್ರಮುಖರಿಂದ ಹಿಡಿದು ಕಾರ್ಯಕರ್ತರ ತನಕ ಬಿಜೆಪಿ ಪಕ್ಷದಲ್ಲಿ ನಾವೆಲ್ಲರೂ ಒಂದೇ ಎಂಬುದನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತೋರಿಸಿಕೊಟ್ಟಿದ್ದಾರೆ.
ಶಿಸ್ತುಬದ್ಧ ಕಾರ್ಯಕ್ರಮಕ್ಕೆ ಮೆಚ್ಚುಗೆ :
ನಿನ್ನೆ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ ಶಿಸ್ತುಬದ್ಧ ಕಾರ್ಯಕ್ರಮವಾಗಿ ಮೂಡಿ ಬಂದಿರುವುದರ ಹಿಂದೆ ಬಿಜೆಪಿ ಪಕ್ಷ ಹಾಗೂ ಸಂಘಟಕರ ಶ್ರಮ ಎದ್ದು ಕಾಣುತ್ತಿದೆ. ವಿಶೇಷವೆಂದರೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ತಾವು ಕುಳಿತಲ್ಲಿಗೇ ಕ್ಯಾಂಪ್ಕೋ ಚಾಕಲೇಟ್, ಮಜ್ಜಿಗೆ, ನೀರು ಮುಂತಾದವುಗಳನ್ನು ಹಂಚುತ್ತಿದ್ದುದು ಒಂದು ಶಿಸ್ತುಬದ್ಧ ಕಾರ್ಯಕ್ರಮಕ್ಕೆ ಕೈಗನ್ನಡಿಯಂತಿತ್ತು ಎನ್ನುವ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.