ಪುತ್ತೂರು : ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಕೇಂದ್ರ ಗೃಹ ಸಚಿವ, ದೇಶದ ಪ್ರಥಮ ಸಹಕಾರ ಸಚಿವ ಅಮಿತ್ ಶಾ ಅವರ ಭಾಗವಹಿಸುವಿಕೆಯೊಂದಿಗೆ ಇಲ್ಲಿಯ ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ, ಸಹಕಾರ ಸಚಿವ ಅಮಿತಾ ಶಾ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಬೇಕು. ರಾಜ್ಯವನ್ನು ಎಟಿಎಂ ಆಗಿ ಮಾಡಿ ಭ್ರಷ್ಟಾಚಾರ ಮಾಡುತ್ತಿರುವ ಕಾಂಗ್ರೆಸ್ ಸರಕಾರ ಬೇಕಾ ಎಂದು ನೆರೆದಿದ್ದವರನ್ನು ಪ್ರಶ್ನಿಸಿದ ಅವರು, ಮೋದಿಯವರ ಆತ್ಮನಿರ್ಭರ ದೇಶದಲ್ಲಿ ಯಶಸ್ವಿಯಾಗಿ ಸಾಕಾರಗೊಳ್ಳುತ್ತಿದೆ. ಕಿಸಾನ್ ಸಮ್ಮಾನ್ ಮೂಲಕ ದೇಶದ ಬಡ ರೈತರ ಖಾತೆಗೆ ಹಣ ನೇರವಾಗಿ ಹಣ ಜಮಾ ಮಾಡುವ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು ಹೇಳಿದರು.
ಬಡವರ ಕಲ್ಯಾಣ ಯೋಜನೆಯಡಿ ಮನೆ ಬಾಗಿಲಿಗೆ ನೀರು, ವಿದ್ಯುತ್, ಗ್ಯಾಸ್, ಶೌಚಾಲಯ, ವಿಮೆ ಸಹಿತ , ದೀನ್ ದಯಾಳ್ ಅಂತ್ಯೋದಯ ಮುಂತಾದ ಮೂಲಭೂತ ಸೌಕರ್ಯಗಳನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ನೀಡುವಲ್ಲಿ ಯಶಸ್ವಿಯಾಗಿದೆ.
ಇದೀಗ ಕ್ಯಾಂಪ್ಕೋ ಸಂಸ್ಥೆಯ ಮತ್ತಷ್ಟು ಅಭಿವೃದ್ಧಿ ನಿಟ್ಟಿನಲ್ಲಿ ಕಲ್ಪ ತೆಂಗಿನ ಎಣ್ಣೆ, ಭದ್ರಾವತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಗೋದಾಮಿಗೆ, ಕ್ಯಾಂಪ್ಕೋ ಎಗ್ರಿಮಾಲ್ಗೆ ಶಿಲಾನ್ಯಾಸ ನೆರವೇರಿಸುವ ಭಾಗ್ಯ ನನಗೆ ದೊರೆತಿದೆ. ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.
ಕ್ಯಾಂಪ್ಕೋ ಅಗ್ರಿ ಮಾಲ್ ಶಂಕುಸ್ಥಾಪನೆ, ಭದ್ರಾವತಿ ಉಗ್ರಾಣ ಉದ್ಘಾಟನೆ
ಭಾರತ ಮಾತೆ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ವಿ. ಸುಬ್ರಾಯ ಭಟ್ ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು. ಡಿಜಿಟಲ್ ಲಾಂಚ್ ಮೂಲಕ ಪುತ್ತೂರಿನ ಕ್ಯಾಂಪ್ಕೋ ಅಗ್ರಿ ಮಾಲ್‍ಗೆ ಶಂಕುಸ್ಥಾಪನೆ, ತೆಂಗಿನಕಾಯಿ ಯೋಜನೆ ಕೊಬ್ಬರಿ ಎಣ್ಣೆ ಕಲ್ಪ ಪ್ರಾರಂಭ, ಭದ್ರಾವತಿ ಕ್ಯಾಂಪ್ಕೊ ಉಗ್ರಾಣ ಉದ್ಘಾಟನೆಯನ್ನು ನಡೆಸಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಇಂಧನ ಸಚಿವ ಸುನಿಲ್ ಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಅಂಗಾರ ಎಸ್., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನಗರಸಭೆ ಕೆ. ಜೀವಂಧರ್ ಜೈನ್ ಉಪಸ್ಥಿತರಿದ್ದರು.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್. ಎಂ. ಕೃಷ್ಣಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.
ಸಾಗರೋಪಾದಿಯಲ್ಲಿದ್ದ ಜನರು:
ಅಮಿತ್ ಶಾ ಅವರ ಕಾರ್ಯಕ್ರಮಕ್ಕಾಗಿ ಜಿಲ್ಲೆಯ ನಾನಾ ಭಾಗಗಳಿಂದ ಜನರು, ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು. ಸಾಗರೋಪಾದಿಯಲ್ಲಿದ್ದ ಜನರು, ಘೋಷಣೆಗಳಿಗೆ ಧ್ವನಿ ನೀಡಿದರು.
ಮಜ್ಜಿಗೆ, ಚಾಕೊಲೇಟ್:
ಆಗಮಿಸಿದ್ದ ಎಲ್ಲರಿಗೂ ಮಜ್ಜಿಗೆ ಹಾಗೂ ಚಾಕೊಲೇಟ್‍ಗಳನ್ನು ಕ್ಯಾಂಪ್ಕೋ ವಿತರಿಸಿ, ಜನರ ದಾಹ ತಣಿಸಿತು. ಬಿಸಿಲಿನ ಝಳವನ್ನು ಲೆಕ್ಕಿಸದೇ ಆಗಮಿಸಿದ ಜನರು ಕುಳಿತಲ್ಲಿದ್ದ ತೆರಳಿದ ಸ್ವಯಂಸೇವಕರು ಮಜ್ಜಿಗೆ, ನೀರು, ಚಾಕೊಲೇಟ್ ನೀಡಿದರು.