ಲಂಚದ ಪ್ರಕರಣವನ್ನು ಸಿಬಿಐಗೊಪ್ಪಿಸಲು ಆಗ್ರಹ
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ಮೊಹಮ್ಮದ್ ಕಬೀರ್ ಕಿರುಕುಳದ ಆರೋಪ ಮಾಡಿದ್ದಾರೆ. ಶಶಿಕುಮಾರ್ ಮತ್ತು ಇಬ್ಬರು ಪೊಲೀಸರ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಡ್ರಗ್ಸ್ ಮತ್ತು ಮರಳು ಮಾಫಿಯಾದವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಕಮಿಷನರ್ ಹಾಗೂ ಉಲ್ಲಾಳ ಠಾಣೆಯ ಇನ್ಸ್ ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದಾಗಿನಿಂದಲೂ ತನಗೆ ಕಿರುಕುಳ ನೀಡಲಾಗುತ್ತಿದೆ.ಆರೋಪಿಗಳೇ ತನಿಖಾಧಿಕಾರಿಗಳೂ ಆಗಿರುವುದರಿಂದ ನ್ಯಾಯ ಸಿಗುವ ನಿರೀಕ್ಷೆ ಇಲ್ಲ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಎಂದು ಕೆಆರ್‌ಎಸ್ ರಾಜಕೀಯ ಪಕ್ಷದ ಸದಸ್ಯರೂ ಆಗಿರುವ ಕಬೀರ್ ಹೇಳಿದ್ದಾರೆ.
ವಿಚಾರಣೆಗೆ ಬರುವಂತೆ ಪೊಲೀಸ್ ಇಲಾಖೆಯಿಂದ ಪದೇ ಪದೆ ಕರೆಗಳು ಬರುತ್ತಿವೆ. ತನ್ನ ಕುಟುಂಬಕ್ಕೂ ಕಿರುಕುಳ ನೀಡಲಾಗುತ್ತಿದೆ. ಲೋಕಾಯುಕ್ತ ಸ್ವತಂತ್ರ ತನಿಖೆ ನಡೆಸುವ ಬದಲು, ದೂರಿನಲ್ಲಿ ಆರೋಪಿಗಳೆಂದು ಉಲ್ಲೇಖಿಸಿರುವವರಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿ ವರದಿ ಸಲ್ಲಿಸಲು ತಿಳಿಸಿದೆ ಎಂದರು.
ಈ ಪ್ರಕರಣದಿಂದ ಬಚಾವ್ ಆಗಲು ಆರೋಪಿತ ಪೊಲೀಸರು ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆ ಇದೆ. ಪೊಲೀಸರನ್ನು ಆಗಾಗ ನನ್ನ ಮನೆಗೆ ಕಳುಹಿಸಲಾಗುತ್ತಿದೆ. ನೋಟಿಸ್ ಮೇಲೆ ನೋಟಿಸ್ ನೀಡಲಾಗುತ್ತಿದೆ. ನಗರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿನ ಭ್ರಷ್ಟಾಚಾರಕ್ಕೆ ನಗರ ಪೊಲೀಸ್ ಆಯುಕ್ತರೇ ನೇರ ಹೊಣೆ ಎಂದಿದ್ದಾರೆ.
ಉಲ್ಲಾಳ ಪೊಲೀಸ್ ಠಾಣೆಯ ಕಳೆದ 18 ತಿಂಗಳ ಅವಧಿಯ ಸಿಸಿಟಿವಿ ದೃಶ್ಯಾವಳಿ ಒದಗಿಸಬೇಕೆಂದು ಒತ್ತಾಯಿಸಿದ್ದೇನೆ. ಆದರೆ ಇಲ್ಲಿಯವರೆಗೂ ಅದನ್ನು ನೀಡಿಲ್ಲ ಎಂದು ತಿಳಿಸಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.