ಬೃಹತ್ ಕೃಷಿಯಂತ್ರ ಮೇಳಕ್ಕೆ ಅಂತಿಮ ಸಿದ್ಧತೆ | ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾಹಿತಿ

ಪುತ್ತೂರು : ಕಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇವರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ ಫೆಬ್ರವರಿ 10ರಿಂದ 12ರವರೆಗೆ 5ನೇ ಬೃಹತ್‌ ಕೃಷಿಯಂತ್ರ ಮೇಳ 2023 ಮತ್ತು ಕನಸಿನ ಮನೆ ಪ್ರದರ್ಶನಕ್ಕೆ ಎಲ್ಲಾ ಸಿದ್ಧತೆಗಳು ಮುಕ್ತಾಯದ ಹಂತದಲ್ಲಿವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 11 ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಸನ್ಮಾನ್ಯ ಶೋಭಾ ಕರಂದ್ಲಾಜೆಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ, ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಗಳಾಗಿರುವರು ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಪಾರಂಪರಿಕ ಮಾದರಿ ಗ್ರಾಮದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ. ಸುಬ್ರಮಣ್ಯ ಯಡಪಡಿತ್ತಾಯ ನೆರವೇರಿಸುವರು. ಕೃಷಿಯಂತ್ರಗಳ ಮಳಿಗೆಗಳನ್ನು ಐಸಿಎಆರ್ ಸಿಪಿಸಿಆರ್‌ಐ ಕಾಸರಗೋಡು ಇದರ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್ ಉದ್ಘಾಟಿಸುತ್ತಾರೆ. ಕನಸಿನ ಮನೆ ವಿಭಾಗದ ಮಳಿಗೆಗಳ ಉದ್ಘಾಟನೆಯನ್ನು ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್‌ ನೆರವೇರಿಸುವರು ಎಂದರು.































 
 

ಪ್ರಸಕ್ತ ಸನ್ನಿವೇಶಕ್ಕೆ ಅವಶ್ಯವಾಗುವ ರೀತಿಯಲ್ಲಿ ಎರಡು ಗೋಷ್ಠಿಗಳನ್ನು ನಡೆಸಲಾಗುತ್ತದೆ. ಫೆಬ್ರವರಿ 11ರಂದು ಬೆಳಿಗ್ಗೆ 11 ಗಂಟೆಗೆ ಅಡಿಕೆ ಬೆಳೆ ನಿರ್ವಹಣೆ ಮತ್ತು ರೋಗಗಳ ಹತೋಟಿ: ಈ ವಿಷಯದ ಬಗ್ಗೆ ಐಸಿಎಆರ್ ಸಿಪಿಸಿಆರ್‌ಐ ಕಾಸರಗೋಡು ಇಲ್ಲಿನ ಬೆಳೆ ಸಂರಕ್ಷಣೆ ವಿಭಾಗ ಮುಖ್ಯಸ್ಥ ಡಾ.ವಿನಾಯಕ ಹೆಗ್ಡೆ ಮಾಹಿತಿಯನ್ನು ನೀಡಲಿದ್ದಾರೆ. ಫೆಬ್ರವರಿ 12ರಂದು ಬೆಳಿಗ್ಗೆ 11 ಗಂಟೆಗೆ, ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧಿಯ ಸಸ್ಯಗಳು ಈ ವಿಚಾರವಾಗಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕಾರ್ಕಳ ಇದರ ಸಂಚಾಲಕ ಡಾ.ಸತ್ಯನಾರಾಯಣ ಭಟ್ ಕಾರ್ಕಳ ಇವರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, 10ರಂದು ಮಧ್ಯಾಹ್ನ 3ರಿಂದ ವಿವೇಕಾನಂದ ವಿದ್ಯಾಸಂಸ್ಥೆಗಳ ಉಪನ್ಯಾಸಕರಿಂದ ಯಕ್ಷಗಾನ, ಸಂಜೆ 5ಗಂಟೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಇಶಾ ಸುಲೋಚನ ಅವರಿಂದ ನೃತ್ಯ ಹಾಗೂ ಸಂಜೆ 6ರಿಂದ ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. 11ರಂದು ಸಂಜೆ 5ರಿಂದ ವಿವೇಕಾನಂದ ಸಿಬಿಎಸ್‌ಸಿ ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿದೇಶ ವೈಭವ ಕಾರ್ಯಕ್ರಮ ನಡೆಯಲಿದೆ. 12ರಂದು ಮಧ್ಯಾಹ್ನ 3.30ರಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವಿವೇಕ ವೈಭವ ನಡೆಯಲಿದೆ. ಸಂಜೆ ಪೂರ್ಣಿಮಾ ರೈ ಮತ್ತು ಬಳಗದವರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

140 ಮಳಿಗೆಗಳು:

ಇಲ್ಲಿ ಯಂತ್ರ ಮೇಳಕ್ಕೆ ಸಂಬಂಧಿಸಿದಂತೆ 140 ಮಳಿಗೆಗಳು ಮತ್ತು ಕನಸಿನ ಮನೆಗೆ ಸಂಬಂಧಪಟ್ಟ 83 ಮಳೆಗೆಗಳಿರುತ್ತವೆ. ಇದಲ್ಲದೆ 10 ಆಟೋಮೊಬೈಲ್, 4  ನರ್ಸರಿ, 20ರ ಮಳಿಗೆಗಳು ಮತ್ತು 20 ವ್ಯಾಪಾರ ಮಳಿಗೆಗಳಿರುತ್ತದೆ. ಕ್ಯಾಂಪ್ಕೋ ಸಂಸ್ಥೆಯು ನಡೆದು ಬಂದ ದಾರಿಯನ್ನು ಪ್ರತಿಬಿಂಬಿಸುವ ವಿಶೇಷ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಕೃಷಿ ಇಲಾಖೆ ಹಾಗೂ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ಇದರ ಆಶ್ರಯದಲ್ಲಿ 20 ಸಾವಯವ ಸಿರಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಮತ್ತು ವಿಚಾರ ಸಂಕಿರಣಗಳೂ ನಡೆಯುತ್ತವೆ. ಬ್ಯಾಂಕ್ ಸಾಲಸೌಲಭ್ಯಗಳ ಮಾಹಿತಿಗೆ ಬ್ಯಾಂಕಿಂಗ್‌ ಮಳಿಗೆಗಳನ್ನೂ ತೆರೆಯಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು ಇಲ್ಲಿರುತ್ತವೆ. ವೀಕ್ಷಕರಿಗೆ ಅನುಕೂಲವಾಗುವಂತೆ ಮಳಿಗೆಗಳನ್ನು ವಿಶೇಷ ರೀತಿಯಲ್ಲಿ ವಿದ್ಯಾಸಗೊಳಿಸಲಾಗಿದೆ. ಪ್ರಾತ್ಯಕ್ಷಿಕೆಗೆ ಬೇಕಾಗಿ ಕನಿಷ್ಟ 35 ಅಡಿ ಎತ್ತರದ ಅಡಿಕೆ ಮರಗಳನ್ನು ನೆಡಲಾಗುತ್ತದೆ ಎಂದು ವಿವರಿಸಿದರು.

ಪಾರ್ಕಿಂಗ್ ವ್ಯವಸ್ಥೆ:

ಪ್ರದರ್ಶನ ಪ್ರದೇಶದ ಸುತ್ತ ಮುತ್ತ ಒಟ್ಟು 8 ಮೈದಾನಗಳನ್ನು ವಾಹನ ನಿಲುಗಡೆಗಾಗಿ ಗುರುತಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲದೆ ಸುಮಾರು 800 ಚತುಶ್ಚಕ್ರ ಹಾಗೂ ದೊಡ್ಡ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರಕ್ಷಕ ಇಲಾಖೆಯ ಜತೆಯಲ್ಲಿ ಸುಮಾರು 150 ವಿದ್ಯಾರ್ಥಿ ಸ್ವಯಂಸೇವಕರು ಮತ್ತು ಸಿಬ್ಬಂದಿಗಳು ಇದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ. ಮೂರು ದಿನಗಳ ಈ ಬೃಹತ್ ಪ್ರದರ್ಶನದ ಸಂಪುರ್ಣ ಪ್ರಯೋಜನವನ್ನು ಎಲ್ಲಾ ಕೃಷಿ ಬಂಧುಗಳು ವಿನಂತಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ದಯಾನಂದ ಹೆಗ್ಡೆ, ರಾಘವೇಂದ್ರ ಭಟ್‍ ಕೆದಿಲ, ಕೃಷ್ಣಪ್ರಸಾದ್ ಮಡ್ತಿಲ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಎಚ್‍.ಎಂ., ವಿವೇಕಾನಂದ ಇಂಜಿನಿಯರಿಂಗ್‍ ಕಾಲೇಜು ಸಂಚಾಲಕ ಸುಬ್ರಹ್ಮಣ್ಯ ಭಟ್‍, ಕೃಷಿ ಯಂತ್ರಮೇಳದ ಸಂಯೋಜಕ ರವಿಕೃಷ್ಣ ಕಲ್ಲಾಜೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top