ಆದರೆ ಕ್ಷಮಿಸುವುದು ಅಷ್ಟು ಸುಲಭ ಅಲ್ಲ
ಕನ್ನಡದ ವರನಟ ಡಾ| ರಾಜಕುಮಾರ್ ಅಭಿನಯಿಸಿದ 200ನೇ ಚಿತ್ರ ದೇವತಾ ಮನುಷ್ಯ 1988ರಲ್ಲಿ ಬಿಡುಗಡೆ ಆಗಿತ್ತು. ಅದು ಜಾರ್ಜ್ ಇಲಿಯಟ್ ಅವರ ಕಾದಂಬರಿ ಆಧಾರಿತ ಸಿನೆಮಾ. ಅದರ ಕತೆಯನ್ನು ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುತ್ತೇನೆ.
ಒಬ್ಬ ಸಾಮಾನ್ಯ ಡ್ರೈವರ್ ಆಗಿದ್ದ ರಾಜಕುಮಾರ್ ವಿಲನ್‌ಗಳ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಿಯತಮೆಯನ್ನು ಕಳೆದುಕೊಳ್ಳುತ್ತಾನೆ. ತಾನು ಮಾಡದ ತಪ್ಪಿನ ಆಪಾದನೆ ಹೊತ್ತು ಜೈಲಿಗೆ ಹೋಗುತ್ತಾನೆ. ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ತಕ್ಷಣ ಆ ವಿಲನ್‌ಗಳನ್ನು ಕೊಲೆ ಮಾಡಲು ಕತ್ತಿ ಹಿಡಿದು ಆಕ್ರೋಶದಿಂದ ಹೊರಡುತ್ತಾನೆ. ಆಗ ದಾರಿಯಲ್ಲಿ ಒಂದು ಪೊದೆಯಲ್ಲಿ ಒಂದು ಅನಾಥವಾದ ಹೆಣ್ಣು ಮಗು ಅಳುವ ಶಬ್ದ ಕೇಳುತ್ತದೆ.
ಆ ಮಗುವಿನ ಮುಖ ನೋಡಿದ ತಕ್ಷಣ ರಾಜ್ ತನ್ನ ಆಕ್ರೋಶ, ದ್ವೇಷ ಎಲ್ಲವನ್ನೂ ಮರೆಯುತ್ತಾನೆ. ಅದುವರೆಗೆ ಆತನ ಬದುಕಿಗೆ ಒಂದು ಡೆಸ್ಟಿನಿ ಇರಲಿಲ್ಲ. ಆ ಮುದ್ದು ಮಗು ಆತನ ಡೆಸ್ಟಿನಿ ಆಗುತ್ತದೆ. ಅಲ್ಲಿಗೆ ಆತನು ಆ ಮಗುವನ್ನು ಸಾಕುವ ನಿರ್ಧಾರಕ್ಕೆ ಬರುತ್ತಾನೆ. ಒಳ್ಳೆಯ ಅಪ್ಪ ಆಗುತ್ತಾನೆ. ಮುಂದೆ ಅವನ ಜೀವನದಲ್ಲಿ ತನ್ನ ಭೂತಕಾಲದ ಕಹಿ ಎಲ್ಲವನ್ನೂ ಮರೆತು ದೇವತಾ ಮನುಷ್ಯ ಆಗುತ್ತಾನೆ.
ಬಾಹುಬಲಿ ದ ಗ್ರೇಟ್ ಆದದ್ದು ಹೇಗೆ?
ಸಾಮ್ರಾಜ್ಯಕ್ಕಾಗಿ ಭರತ ಮತ್ತು ಬಾಹುಬಲಿಯರ ನಡುವೆ ಯುದ್ಧ ಆಗುತ್ತದೆ. ಅಣ್ಣ ತಮ್ಮನ ನಡುವೆ ಘನಘೋರವಾದ ಯುದ್ದ ನಡೆದು ಭರತ ಸೋಲುತ್ತಾನೆ. ಬಾಹುಬಲಿ ಗೆಲ್ಲುತ್ತಾನೆ. ಆ ಕ್ಷಣಕ್ಕೆ ಬಾಹುಬಲಿ ವಿರಕ್ತಿ ತಾಳುತ್ತಾನೆ. ಒಂದು ತುಂಡು ಭೂಮಿಗಾಗಿ ಅಣ್ಣನ ಜೊತೆಗೆ ಹೋರಾಟ ಮಾಡಿದೆನಲ್ಲ ಎಂದು ಮರುಕ ಪಡುತ್ತಾನೆ. ತನ್ನನ್ನು ತಾನು ಕ್ಷಮಿಸಿ, ಗೆದ್ದ ರಾಜ್ಯವನ್ನು ಅಣ್ಣನಿಗೆ ಹಿಂದಿರುಗಿಸಿ ಗಾಢವಾದ ತಪಸ್ಸು ಮಾಡಲು ಹೊರಡುತ್ತಾನೆ. ದೇವರೇ ಆಗಿಬಿಡುತ್ತಾನೆ.
ಭುಜಂಗಯ್ಯ ದೇವರಾದದ್ದು ಹೇಗೆ?
ಕೃಷ್ಣ ಆಲನಹಳ್ಳಿ ಅವರ ಧಾರಾವಾಹಿ ಭುಜಂಗಯ್ಯನ ದಶಾವತಾರದ ಮುಖ್ಯ ಪಾತ್ರ ಭುಜಂಗಯ್ಯ ತನ್ನ ಪ್ರೀತಿಯ ಮಗಳನ್ನು ಮಾನಭಂಗ ಮಾಡಿದ ಊರಿನ ಜಮೀನ್ದಾರನನ್ನು ಒಂದು ಕ್ಷಣ ಕ್ಷಮಿಸಿಬಿಡುತ್ತಾನೆ ಮತ್ತು ಹಾವು ಕಚ್ಚಿ ಸಾಯುವ ಹಂತದಲ್ಲಿ ಇದ್ದ ಅದೇ ಜಮೀನ್ದಾರನ ಪ್ರಾಣ ಉಳಿಸಲು ಧಾವಿಸುತ್ತಾನೆ. ಜಮೀನ್ದಾರನ ಕ್ರೌರ್ಯವನ್ನು ಕ್ಷಮಿಸಿದ ಒಬ್ಬ ಸಾಮಾನ್ಯ ವ್ಯಕ್ತಿ ಭುಜಂಗಯ್ಯ ಕೂಡ ದೇವರೇ ಆಗಿಬಿಡುತ್ತಾನೆ.
ಆ ಕ್ಷಣಕ್ಕೆ ಗ್ಲಾಡಿಸ್ ಕೂಡ ನನಗೆ ದೇವರಾದರು
1999ರಲ್ಲಿ ಬಿಹಾರದಲ್ಲಿ ಗ್ರಹಾಂ ಸ್ಟೈನ್ಸ್ ಎಂಬ ಕ್ರಿಶ್ಚಿಯನ್ ಧರ್ಮಗುರುವಿನ ಕೊಲೆಯನ್ನು ಮತಾಂಧರು ಮಾಡುತ್ತಾರೆ. ಆತನ ಮಕ್ಕಳನ್ನೂ ಬೆಂಕಿ ಹಾಕಿ ಸುಡುತ್ತಾರೆ. ಆ ಕ್ರೌರ್ಯವನ್ನು ಪ್ರತ್ಯಕ್ಷವಾಗಿ ನೋಡಿದ್ದ ಆ ಧರ್ಮಗುರುವಿನ ಪತ್ನಿ ಗ್ಲಾಡಿಸ್ ಒಂದಿಷ್ಟೂ ವಿಚಲಿತರಾಗದೆ ವಿಚಾರಣೆ ಮಾಡಲು ಪೊಲೀಸರು ಮನೆಗೆ ಬಂದಾಗ ಹೇಳಿದ ಮಾತು, ‘ನೀವು ನಿಮ್ಮ ಕರ್ತವ್ಯ ಮಾಡಿ. ನಾನು ಅಡ್ಡಿ ಬರುವುದಿಲ್ಲ. ನಾನು ಅವರನ್ನು ಕ್ಷಮಿಸಿಬಿಟ್ಟಿದ್ದೇನೆ. ಏಕೆಂದರೆ ನನ್ನ ಗಂಡ ಅರ್ಧದಲ್ಲಿ ಬಿಟ್ಟುಹೋದ ಕೆಲಸಗಳನ್ನು ಮುಗಿಸಲು ಬಾಕಿ ಇದೆ’ ನನಗೆ ಆ ಕ್ಷಣಕ್ಕೆ ಗ್ಲಾಡಿಸ್ ಕೂಡ ದೇವರಾಗಿ ಕಂಡರು.
ದ್ವೇಷದಿಂದ ಯಾರೂ ದೇವರು ಆಗುವುದಿಲ್ಲ
ನಮ್ಮ ಜೀವನದಲ್ಲಿ ಕೂಡ ನೂರಾರು ಮಂದಿ ನಮಗೆ ನೋವು ಕೊಟ್ಟಿರಬಹುದು. ಮೋಸ ಮಾಡಿರಬಹುದು. ನಮ್ಮ ಹೆಸರು ಕೆಡಿಸಲು ಪ್ರಯತ್ನ ಪಟ್ಟಿರಬಹುದು. ನಾವು ಮಾಡಿದ ಬೆಟ್ಟದಷ್ಟು ಉಪಕಾರವನ್ನು ಮರೆತು ಬೆನ್ನು ಹಾಕಿ ಹೋಗಿರಬಹುದು, ವಿಶ್ವಾಸ ದ್ರೋಹ ಮಾಡಿರಬಹುದು. ಬೆನ್ನಿಗೆ ಚೂರಿ ಹಾಕಿರಬಹುದು.
ಆದರೆ ಅವರನ್ನೆಲ್ಲ ದ್ವೇಷ ಮಾಡುತ್ತಾ ಕೂತರೆ ನಾವು ನಮ್ಮ ಹ್ಯಾಪಿನೆಸ್ ಕಳೆದುಕೊಳ್ಳುತ್ತೇವೆ. ನಮ್ಮ ನೆಮ್ಮದಿ, ನಿದ್ರೆ, ಆರೋಗ್ಯ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. ಒಂದೇ ಕ್ಷಣಕ್ಕೆ ಅವರನ್ನು ಕ್ಷಮಿಸಲು ನಿಮಗೆ ಕಷ್ಟ ಆಗಬಹುದು. ಕ್ಷಮೆ ಮತ್ತು ತಾಳ್ಮೆ ಎರಡು ಬಲಿಷ್ಟವಾದ ಮೈಂಡ್‌ಸೆಟ್‌ಗಳು. ಅದನ್ನು ಸಾಧಿಸುವುದು ಖಂಡಿತ ಸುಲಭ ಅಲ್ಲ.
ಅಂತವರನ್ನು ಕೂಡ ಕ್ಷಮಿಸುವುದಾ ಎಂದು ನನಗೆ ಹಲವರು ಕೇಳುತ್ತಾರೆ. ಅವರಿಗೆ ನಾನು ಕೊಡುವ ತಣ್ಣನೆಯ ಉತ್ತರ ಹೀಗಿದೆ.
ನಮಗೆ ಎರಡೇ ದಾರಿ ಇದೆ. ಒಂದು ಅವರನ್ನು ದ್ವೇಷ ಮಾಡುತ್ತಾ ಸೇಡು ತೀರಿಸಲು ಹೊರಡುವುದು. ಅಂದರೆ ನಾವು ಅವರದ್ದೇ ದಾರಿಯಲ್ಲಿ ನಡೆಯುವುದು ಎಂದರ್ಥ. ಆಗ ನಮಗೆ ಮತ್ತು ಅವರಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ.
ಇನ್ನೊಂದು ದಾರಿ ಎಂದರೆ ಎಲ್ಲವನ್ನೂ ದೇವರು ಅಥವಾ ಡೆಸ್ಟಿನಿಗೆ ಒಪ್ಪಿಸಿ ಅವರನ್ನು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ ಮುಂದುವರೆಯುವುದು. ಎಷ್ಟೋ ಬಾರಿ ದೇವರೇ, ನೀನೇ ಎಲ್ಲವನ್ನೂ ನೋಡಿಕೋ ಎಂಬ ನಿರ್ಲಿಪ್ತ ಸ್ಥಿತಿಯು ನಮ್ಮನ್ನು ದೇವರು ಮಾಡದಿದ್ದರೂ ನಮ್ಮ ಮಾನಸಿಕ ನೆಮ್ಮದಿಯನ್ನು ಉಳಿಸುತ್ತದೆ. ನಮ್ಮ ಹ್ಯಾಪಿನೆಸ್ ಸುರಕ್ಷಿತ ಆಗಿರುತ್ತದೆ. ನಿದ್ದೆ, ಆರೋಗ್ಯ ಎಲ್ಲವೂ ಸೆಕ್ಯೂರ್ ಆಗಿರುತ್ತದೆ. ಏನಿದ್ದರೂ ಆಯ್ಕೆ ನಮ್ಮದೇ ಆಗಿರುತ್ತದೆ.
ಕ್ಷಮಾ ಗುಣದಿಂದ ಜಗತ್ತನ್ನು ಗೆದ್ದ ಏಸು ಕ್ರಿಸ್ತರು ದೇವರಾದದ್ದು ಹಾಗೆ!
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.