ಪುತ್ತೂರು : ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ದಂತ ಚಿಕಿತ್ಸಾ ಶಿಬಿರ ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.
ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ, ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಳ್ಯ ಕೆ.ವಿ.ಜಿ. ಡೆಂಟಲ್ ಕಾಲೇಜು ಆಸ್ಪತ್ರೆ, ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ತಜ್ನ ವೈದ್ಯರಿಂದ ಪಟ್ಟೆ ವಿದ್ಯಾಸಂಸ್ಥೆಗಳು, ಶ್ರೀಕೃಷ್ಣ ಯುವಕ ಮಂಡಲ ಪಟ್ಟೆ, ವಾಲಿ ಫ್ರೆಂಡ್ಸ್ ಪಟ್ಟೆ ಹಾಗೂ ಧ. ಗ್ರಾ. ಯೋಜನೆ ಬಡಗನ್ನೂರು ಬಿ ಒಕ್ಕೂಟದ ಸಹಕಾರದೊಂದಿಗೆ ನಡೆದ ಶಿಬಿರವನ್ನು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ಬಿ. ನಾರಾಯಣ ಭಟ್ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಪಟ್ಟೆ ವಿದ್ಯಸಂಸ್ಥೆಗಳ ನಿರ್ದೇಶಕ ನಹುಷ ಮಾತನಾಡಿ, ಇಂದು ವಿವಿಧ ರೀತಿಯ ಆರೋಗ್ಯ ತಪಾಣೆಗಾಗಿ ನಗರದ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತದೆ. ಆದರೆ ಗ್ರಾಮೀಣ ಭಾಗಗಳಲ್ಲಿ ತಜ್ನರನ್ನು ಕರೆಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆಯ ಅವಕಾಶ ಕಲ್ಪಿಸಿಕೊಟ್ಟ ಸಂಘಟಕರ ಕಾರ್ಯ ಶ್ಲಾಘನೀಯ. ಇದು ಇತರ ಸಂಘ ಸಂಸ್ಥೆ, ಸಮಾಜದವರಿಗೂ ಮಾದರಿಯಾಗಬೇಕು ಎಂದರು.
ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉದಯ್ ಮಾತನಾಡಿ, ಹಲವು ಮಂದಿಗೆ ಆರೋಗ್ಯ ತಪಾಸಣೆ ಮಾಡುವುದೆಂದರೆ ಅಳುಕು ಇರುತ್ತದೆ. ಈ ಕಾರಣದಿಂದ ಆರೋಗ್ಯ ಸಮಸ್ಯೆ ಬಂದಾಗ ತಾವೇ ಮನೆ ಔಷಧಿಗಳನ್ನು ಸಿದ್ಧಮಾಡಿಕೊಳ್ಳುತ್ತಾರೆ. ಆದರೆ ತಜ್ನರ ಸಲಹೆಗಳನ್ನು ಪಡೆದು ಚಿಕಿತ್ಸೆ ಮಾಡಿಕೊಳ್ಳುವುದು ಅತಿ ಅಗತ್ಯ ಎಂದರು.
ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ, ನಿವೃತ್ತ ಸೈನಿಕ ಸುಬ್ಬಪ್ಪ ಪಟ್ಟೆ, ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಕೆ.ವಿ.ಜಿ. ದಂತ ವಿದ್ಯಾಲಯದ ಪ್ರೊಫೆಸರ್ ಡಾ. ಎಲ್. ಕೃಷ್ಣಪ್ರಸಾದ್. ಪಟ್ಟೆ ಶ್ರೀಕೃಷ್ಣ ಯುವಕಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಹಾಗೂ ತಂಡದವರು ಪ್ರಾರ್ಥಿಸಿದರು. ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ದಾಮೋದರ ಪಾಟಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಮಹೇಶ್ ಆಲಂಕಾರು ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 250 ಮಿಕ್ಕಿ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡು ವಿವಿಧ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.