ಕಾವು: ವಿಶ್ವಕರ್ಮರು ಬ್ರಾಹ್ಮಣರೇ, ಆದರೆ ಬ್ರಾಹ್ಮಣತ್ವದ ಆಚರಣೆಯಲ್ಲಿ ಹಿಂದುಳಿದಿದ್ದಾರೆ. ಯಜ್ಞೋಪವಿತವನ್ನು ಧರಿಸಿದ ವಿಶ್ವಕರ್ಮರು ಅದರ ಪಾವಿತ್ರತೆಯನ್ನು ಕಾಪಾಡಿಕೊಂಡು ಬರಬೇಕು ಅದಕ್ಕಾಗಿ ಸಚ್ಚಾರಿತ್ತ್ಯದ ಜೊತೆಗೆ ಆಚಾರ ವಿಚಾರಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು,ಕಿರಿಯರಿಗೂ ಆ ಸಂಸ್ಕಾರವನ್ನು ಕಲಿಸಿಕೊಡಬೇಕು ಆಗ ಮಾತ್ರ ನಿಜವಾದ ಬ್ರಾಹ್ಮಣರಾಗಲು ಸಾಧ್ಯ ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಹೇಳಿದರು.
ಅವರು ಶನಿವಾರ ಕಾವುನಲ್ಲಿ ನಡೆದ ವಿಶ್ವಕರ್ಮ ಸಮಾವೇಶದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ, ಜಲಚರ, ಭೂಚರ, ಅಮಲು ಪದಾರ್ಥಗಳ ಸೇವನೆಯುಳ್ಳವ ಬ್ರಾಹ್ಮಣನಾಗಲು ಸಾಧ್ಯವಿಲ್ಲ.ಪ್ರತಿದಿನ ಸಂಧ್ಯಾ ವಂದನೆ ಮತ್ತು ತಂದೆ ತಾಯಿಯ ಸೇವೆ ಮಾಡದಿದ್ದರೆ ಪುಣ್ಯ ಬಾರದಿದ್ದರೂ, ಪಾಪವಂತೂ ಕಟ್ಟಿಟ್ಟ ಬುತ್ತಿ ಎಂದು ಯುವಕ ಯುವತಿಯರಿಗೆ ಕಿವಿಮಾತು ಹೇಳಿದರು.
ಮಂಗಳೂರು ಶ್ರೀ ಕಾಳಿಕಾಂಬ ದೇವಸ್ಥಾನದ ಮೊಕ್ತೇಸರ ಲೋಕೇಶ್ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ, ಪ್ರತೀ ವರ್ಷ ದೇವಸ್ಥಾನಕ್ಕೆ ನಾವು ಕೊಡುವ ಶಿಸ್ತು ಕಾಣಿಕೆ,ಗುರುಕಾಣಿಕೆ ಮುಂತಾದ ನಿಗದಿತ ಮೊತ್ತವನ್ನು ನಾವೆಲ್ಲರೂ ಪಾವತಿಸಬೇಕು. ಮಾತ್ರವಲ್ಲ ಜಾತ್ರಾ ಮಹೋತ್ಸವದಲ್ಲೂ ಪಾಲ್ಗೊಳ್ಳಬೇಕು ಎಂದರು.
ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದ ಮೊಕ್ತೇಸರ ದಾಮೋದರ್ ಕಲ್ಪನೆ, ಪುರುಷೋತ್ತಮ ಆಚಾರ್ಯ ಪುತ್ತೂರು ಹಾಗು ವಿಶ್ವಕರ್ಮ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜನಾರ್ಧನ ಆಚಾರ್ಯ ಕಾಣಿಯೂರು ಶುಭ ಹಾರೈಸಿದರು.
ಕಾವು ಕೂಡುವಳಿಕೆಯ ಮೊಕ್ತೇಸರ ನಾರಾಯಣ ಆಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಕು.ಸಿಂಚನಾ,ಕು.ಪ್ರಜ್ಞಾ. ಆಶಾ ಪ್ರಾರ್ಥನೆ ಹಾಡಿದರು. ಕೂಡುವಳಿಕೆಯ ಕಾರ್ಯದರ್ಶಿ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಸ್ವಾಗತಿಸಿದರು.
























