ಆಯೋಗಕ್ಕೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್‌ರಿಂದ ಒತ್ತಾಯ
ಪುತ್ತೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಹಾಗೂ ಹಿಂದುಳಿದ ವರ್ಗಗಳ ವಿವಿಧ ಜಾತಿ ಜನಾಂಗಗಳಿಂದ ಸಲ್ಲಿಸಿರುವ ಮನವಿಗಳ ಕುರಿತ ಬಹಿರಂಗ ವಿಚಾರಣೆಯಲ್ಲಿ ಸರಕಾರದ ಮೀಸಲಾತಿ ನೀತಿಯಿಂದ ಒಕ್ಕಲಿಗ ಹಾಗೂ ಅದರ ಉಪಜಾತಿಗಳಿಗೆ ಶೇ.12 ಮೀಸಲಾತಿ ನೀಡುವಂತೆ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ಎ. ಆಯೋಗವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ದಿ.ದೇವರಾಜು ಅರಸು ಅಡಿಟೋರಿಯಮ್‌ನಲ್ಲಿ ನಡೆದ ವಿಚಾರಣೆ ವೇಳೆ ಕರ್ನಾಟಕ ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ ಒಕ್ಕಲಿಗ ಮತ್ತು 135 ಉಪಜಾತಿಗಳ ಜನಸಂಖ್ಯೆ ಶೇ.15 ರಷ್ಟು ಇದೆ. ಕರ್ನಾಟಕ ಒಕ್ಕಲಿಗ ಜಾತಿ ಹಾಗೂ ಉಪಜಾತಿಗಳ ಮೀಸಲಾತಿ ನೀಡಲು ಪ್ರವರ್ಗ 3 ಎ ನಲ್ಲಿ ಸೇರಿದೆ. ಆದರೆ ಇದರಲ್ಲಿ ಒಕ್ಕಲಿಗರು (90 ಉಪಜಾತಿಗಳು), ಕೊಡವರು ಹಾಗೂ ಬಲಿಜ (13)ಗಳನ್ನು ಸೇರಿಸಲಾಗಿದೆ ಎಂದು ವಿವರಿಸಿದ ಅವರು, ಪರಿಣಾಮ ಪ್ರವರ್ಗ 3 ರಲ್ಲಿ ಶೇ.4 ರಷ್ಟು ಅವಕಾಶವಿದ್ದರೂ ಒಕ್ಕಲಿಗರಿಗೆ ಶೇ.25 ರಷ್ಟು ಪ್ರಾತಿನಿಧ್ಯ ಸೀಮಿತವಾಗಿದೆ. ಕಾರಣ ಕೊಡವರು ಹಾಗೂ ಬಲಿಜರು 3ಎ ಯಲ್ಲಿ ಇರುವುದರಿಂದ ಅವರಿಗೂ ಅವಕಾಶವಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಒಕ್ಕಲಿಗರಿಗೆ ಸಾಕಷ್ಟು ಅನ್ಯಾಯ ನಡೆಯುತ್ತಿದೆ. ಸರಕಾರ ಇತ್ತೀಚಿನ ನಿರ್ಧಾರಗಳಿಂದ ಒಕ್ಕಲಿಗರಿಗೆ ಇಲ್ಲಿಯವರೆಗೆ ದೊರಕುತ್ತಿದ್ದ ಅವಕಾಶಗಳು ಕ್ಷೀಣಿಸಿದೆ. ಶೇ.೧೫ ರಷ್ಟು ಜನಸಂಖ್ಯೆ ಇರುವ ಒಕ್ಕಲಿಗರಿಗೆ ಶೇ.12 ಕ್ಕೆ ನಿಗಡಿಪಡಿಸುವುದೊಂದೇ ಪರಿಹಾರ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟಿನಲ್ಲಿ 1997 ರಲ್ಲಿ ಇಂದಿರಾ ಸಹಾನ ತೀರ್ಪಿನಲ್ಲಿ ಮೀಸಲಾತಿ ಶೇ.50 ರಷ್ಟು ಮೀರಬಾರದೆಂದು ಹೇಳಿತ್ತು. ಅದರಂತೆ ಕರ್ನಾಟಕ ಸರಕಾರ 1995 ರಿಂದ ಶೇ.50ರಷ್ಟು ಮಿತಿಯನ್ನು ಕಾಪಾಡಿತ್ತು, ಈಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ.6 ರಷ್ಟು ಹೆಚ್ಚಿರುವುದರಿಂದ ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಶೇ.೧೦ ರಷ್ಟು ನಿಗದಿಪಡಿಸಿರುವುದರಿಂದ ಮೀಸಲಾತಿ ಮಿತಿಯನ್ನು ಮೀರಲಾಗಿದೆ. ಇತ್ತೀಚಿನ ಸುಪ್ರಿಂ ಕೋರ್ಟ್‌ನಲ್ಲಿ ಶೇ.50 ಗಡಿ ದಾಟುವುದು ಅಸಂವಿಧಾನಿಕ ಅಲ್ಲ ಎಂದು ತಿಳಿಸಿರುವುದರಿಂದ ಪ್ರವರ್ಗ 3ಎನಲ್ಲಿ ಮೀಸಲಾತಿಯನ್ನು ಶೇ.4 ರಿಂದ 12ಕ್ಕೆ ಹೆಚ್ಚಿಸಬೇಕು. ಇದರಿಂದ ಒಕ್ಕಲಿಗರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮೇಲೆರಲು ಹಾಗೂ ಸಮಾಜಮುಖಿಯಾಗಿ ಬದುಕಲು ಅವಕಾಶವಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಆಯೋಗಕ್ಕೆ ಡಾ.ರೇಣುಕಾ ಪ್ರಸಾದ್ ತಿಳಿಸಿದ್ದಾರೆ.