ಕಾಂಗ್ರೆಸ್ ಸಿಡಿ ಬ್ಲಾಕ್ಮೇಲರ್ಗಳ ಪಕ್ಷ
ಬೆಂಗಳೂರು : ಸಿಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುವುದು ಕೆಟ್ಟ ಬೆಳವಣಿಗೆ. ರಾಜಕಾರಣಿಗಳನ್ನು ಟ್ರ್ಯಾಪ್, ಫ್ಯಾಬ್ರಿಕೇಟ್ ಮಾಡಲಾಗುತ್ತಿದೆ. ಇಂತಹದ್ದೊಂದು ವ್ಯವಸ್ಥಿತ ನೆಟ್ವರ್ಕ್ ಬೆಳೆದಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಮಾಡಿ, ಚುನಾಯಿತ ಪ್ರತಿನಿಧಿಗಳ ಬದುಕು ಹಾಳುಮಾಡ್ತಿದ್ದಾರೆ. ಇಂತಹ ಜಾಲಗಳನ್ನು ನಡೆಸುವ ನಾಯಕರ ಬಂಡವಾಳ ಬಯಲಾಗಬೇಕು. ಈ ಬಗ್ಗೆ ತನಿಖೆ ಅಗತ್ಯ ಇದೆ. ರಮೇಶ್ ಜಾರಕಿಹೋಳಿ ಧೈರ್ಯ ತೋರಿ ಈ ಬಗ್ಗೆ ದೂರು ನೀಡಿದ್ದಾರೆ. ಈಗ ಕಾಂಗ್ರೆಸ್ ನಾಯಕರಿಗೆ ಆತಂಕ ಸೃಷ್ಟಿಯಾಗ್ತಿದೆ. ಈ ಬಗ್ಗೆ ತನಿಖೆ ಆಗಲಿ ಅಂತ ಕಾಂಗ್ರೆಸ್ನ ಯಾವೊಬ್ಬ ನಾಯಕರೂ ಹೇಳುತ್ತಿಲ್ಲ ಎಂದು ಡಿ. ಕೆ. ಶಿವಕುಮಾರ್ ಅವರನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಟೀಕಿಸಿದ್ದಾರೆ.
ಶಿವಕುಮಾರ್ ಯಾರ ಯಾರ ಸಿಡಿ ಮಾಡ್ತಿದ್ದಾರೋ ನನಗೇನು ಗೊತ್ತು? ಇನ್ನು ಯಾವ ಯಾವ ಸಿನೆಮಾ ಇದೆ, ಟ್ರೈಲರ್ ಇದೆ, ಟೀಸರ್ ಇದೆ, ಯಾವಾಗ ಬಿಡುಗಡೆ ಆಗುತ್ತೆ ಅಂತ ಡಿ. ಕೆ. ಶಿವಕುಮಾರ್ ಕೇಳಬೇಕು,ಅವರು ಸಿಡಿ ಎಕ್ಸ್ಪರ್ಟ್ ಎಂದು ವ್ಯಂಗ್ಯವಾಡಿದ್ದಾರೆ.
ಸಿಡಿ ಪ್ರಕರಣ ಕುರಿತು ರಮೇಶ್ ಜಾರಕಿಹೋಳಿ ಅಮಿಶ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಬ್ಲಾಕ್ಮೇಲರ್ಗಳ ಪಕ್ಷ, ಸಿಡಿ ಪಕ್ಷ ಅಂತಾರೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಅದರಲ್ಲಿ ಪರಿಣಿತರು. ಎಲ್ಲರ ಸಿಡಿ ಮಾಡಿಸ್ತಿದ್ದಾರೆ ಅಂತ ರಮೇಶ್ ಜಾರಕಿಹೋಳಿ ಆರೋಪಿಸಿದ್ದಾರೆ. ಅವರ ಆರೋಪವನ್ನ ಎಲ್ಲರೂ ಒಪ್ಪುವಂತಹದ್ದು. ಇಂತಹ ಕೆಲಸಗಳಲ್ಲಿ ಡಿಕೆಶಿ ಹೆಸರುವಾಸಿಯಾಗಿದ್ದಾರೆ, ಕಾಂಗ್ರೆಸ್ನಲ್ಲಿ ಇಂತಹ ನಾಯಕರು ಮತ್ತಷ್ಟು ಜನ ಇದ್ದಾರೆ. ಇದರ ಬಗ್ಗೆ ರಮೇಶ್ ಜಾರಕಿಹೋಳಿ ದೂರು ನೀಡಿದ್ದಾರೆ. ಇದರ ಮೇಲೆ ತನಿಖೆ ಆದರೆ ಒಳ್ಳೆಯದು ಎಂದು ಹೇಳಿದ್ದಾರೆ.