ಅಸ್ತಂಗತರಾದ ಕಲಾತಪಸ್ವಿ ಕೆ. ವಿಶ್ವನಾಥ

ಶಂಕರಾಭರಣಂ, ಸಾಗರ್ ಸಂಗಮಂ, ಸ್ವಾತಿ ಮುತ್ಯಂ ಮೊದಲಾದ ಸ್ಮರಣೀಯ ಸಿನಿಮಾಗಳ ನಿರ್ದೇಶಕ

ಸೌಂಡ್ ಇಂಜಿನಿಯರ್ ಆಗಿ ವೃತ್ತಿ ಜೀವನದ ಆರಂಭ

ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದ (1930) ಕೆ. ವಿಶ್ವನಾಥ ಅವರು ಕೃಷ್ಣಾ ನದಿಯ ದಡದಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ವಿಜ್ಞಾನದಲ್ಲಿ ಪದವಿ ಪಡೆದ ನಂತರ ಅವರು ಸೌಂಡ್ ಇಂಜಿನಿಯರ್ ಆಗಿ ತೆಲುಗಲ್ಲಿ ತನ್ನ ವೃತ್ತಿ ಜೀವನ ಆರಂಭ ಮಾಡಿದರು. ಮುಂದೆ ಇನ್ನೊಬ್ಬ ಲೆಜೆಂಡ್ ಸಿನೆಮಾ ನಿರ್ದೇಶಕರಾದ ಕೆ. ಬಾಲಚಂದರ್ ಅವರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತ ಸಿನೆಮಾ ಭಾಷೆಯನ್ನು ಕಲಿತರು. 1965ರಲ್ಲಿ ‘ಆತ್ಮ ಗೌರವಂ’ ಎಂಬ ಸಿನೆಮಾ ನಿರ್ದೇಶನ ಮಾಡುತ್ತಾ ತನ್ನ ಮೊದಲ ಹೆಜ್ಜೆಯನ್ನು ಇಟ್ಟರು.

ಮುಂದೆ ಬಂದವು ಸೂಪರ್ ಹಿಟ್ ಸಿನೆಮಾಗಳು































 
 

ಅಲ್ಲಿಂದ ಮುಂದೆ ಅವರನ್ನು ತೆಲುಗು, ತಮಿಳು, ಹಿಂದಿ ಸಿನೆಮಾ ರಂಗಗಳಲ್ಲಿ ಹಿಡಿಯುವವರೇ ಇರಲಿಲ್ಲ. 60 ವರ್ಷಗಳಲ್ಲಿ 57 ಸ್ಮರಣೀಯ ಸಿನೆಮಾಗಳನ್ನು ಅವರು ನಿರ್ದೇಶನ ಮಾಡಿದರು. ಅವುಗಳಲ್ಲಿ ಶೇ.90 ಸಿನೆಮಾಗಳು ಭರ್ಜರಿ ಯಶಸ್ಸು ಕಂಡವು.
ಅದಕ್ಕೆ ಕಾರಣ ಅವರು ಆರಿಸಿಕೊಳ್ಳುತ್ತಿದ್ದ ಕಂಟೆಂಟ್. ಪ್ರತಿ ಬಾರಿಯೂ ಅವರು ಕ್ರಾಂತಿಕಾರಿ ಕಂಟೆಂಟ್ ಆಯ್ದುಕೊಂಡು ಬರುತ್ತಿದ್ದರು. ಕಲಾತ್ಮಕ ಎನ್ನಿಸಬಹುದಾದ ಒಂದು ಸ್ಕ್ರಿಪ್ಟ್ ಬರೆದು ಅದನ್ನು ಹೇಗೆ ಸೂಪರ್‌ಹಿಟ್ ಮಾಡಬಹುದು ಎನ್ನುವ ಕಲೆಯು ಅವರನ್ನು ಗೆಲ್ಲಿಸುತ್ತಾ ಹೋಯಿತು. ಅವರ ಫಿಲ್ಮ್‌ಗಳು ಆಫ್‌ಬೀಟ್ ಸಿನಿಮಾಗಳಾಗಿ ಜನಪ್ರಿಯ ಆದವು. ಎಲ್ಲಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಅವರ ಸಿನೆಮಾಗಳನ್ನು ಗೆಲ್ಲಿಸುತ್ತಿತ್ತು. ಎಸ್ಪಿ ಬಾಲು ಅವರು ವಿಶ್ವನಾಥ್ ಅವರ ಕಸಿನ್ ಬ್ರದರ್ ಆಗಿದ್ದರು ಅನ್ನುವುದು ಉಲ್ಲೇಖನೀಯ. ಹೆಚ್ಚು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡದ ಬಾಲು ಸರ್ ಅವರಿಂದ ಅಮೋಘವಾದ ಕ್ಲಾಸಿಕಲ್ ಹಾಡುಗಳನ್ನು ಹಾಡಿಸಿದ್ದು ವಿಶ್ವನಾಥ್ ಅವರ ತಾಕತ್ತು.

ಸಾಗರ ಸಂಗಮಂ, ಸಿರಿ ಸಿರಿ ಮುವ್ವ, ಸ್ವಾತಿ ಮುತ್ಯಂ…

ಅವರ ಎಲ್ಲ ಸಿನೆಮಾಗಳು ಒಂದಲ್ಲ ಒಂದು ಸೋಷಿಯಲ್ ಕಾಸ್ ತೆಗೆದುಕೊಂಡು ಬಂದವುಗಳು. ಲಿಂಗ ಸಮಾನತೆ, ಸಾಕ್ಷರತೆ, ಮದ್ಯಪಾನ, ವಿಧವಾ ಪುನರ್ ವಿವಾಹ, ಲೈಂಗಿಕ ಶೋಷಣೆ, ಸಂಗೀತದ ಮಹಾನತೆ… ಹೀಗೆ ಒಂದಲ್ಲ ಒಂದು ಕಂಟೆಂಟ್ ಕತೆಯನ್ನು ಹೆಣೆದು ಅವರು ಸಿನೆಮಾಗಳನ್ನು ಮಾಡುತ್ತ ಹೋದರು.
ಕಮಲಹಾಸನ್ ಕುಡುಕನಾಗಿ ಅಭಿನಯ ಮಾಡಿದ ಸಾಗರ್ ಸಂಗಮಂ ಅದ್ಭುತ ಅನುಭವ ಕೊಡುವ ಸಿನೆಮಾ. ಇಳಯರಾಜ ಅವರ ಸಂಗೀತ ಸಿನೆಮಾದ ಹೈಲೈಟ್. ಬುದ್ಧಿಮಾಂದ್ಯ ಹುಡುಗನೊಬ್ಬ ವಿಧವೆಯನ್ನು ಪ್ರೀತಿ ಮಾಡುವ ಕತೆ ಇರುವ ಸ್ವಾತಿ ಮುತ್ಯಂ ಭಾರತದ ಎಲ್ಲ ಭಾಷೆಗಳಲ್ಲಿ ಹುಡಿಹಾರಿಸಿತು. ಕನ್ನಡದಲ್ಲಿ ಸುದೀಪ ಆ ಪಾತ್ರವನ್ನು ಅದ್ಭುತವಾಗಿ ಮಾಡಿದರು.
ಒಬ್ಬ ಸಂಗೀತ ಮಾಸ್ಟರ್ ಕತೆ ಇದ್ದ ಸಿರಿ ಸಿರಿ ಮುವ್ವ, ಸ್ತ್ರೀ ಸಮಾನತೆಯ ಮಹಾಕಾವ್ಯ ಶಾರದಾ, ಕಲಾರಾಧನೆಯ ರಸಪಾಕವಾದ ಶುಭ ಸಂಕಲ್ಪಂ, ಶುಭಾಲೇಖಂ, ಅಮರ ಪ್ರೇಮದ ಯಶೋಗಾಥೆಯಾದ ಶ್ರುತಿ ಲಯಲು… ಹೀಗೆ ಅವರ ಎಲ್ಲ ತೆಲುಗು ಸಿನೆಮಾಗಳು ದಾಖಲೆಯನ್ನು ಬರೆದವು. ಹೆಚ್ಚಿನ ಎಲ್ಲ ಸಿನೆಮಾಗಳು ರಷ್ಯನ್ ಭಾಷೆಗೆ ಡಬ್ ಆಗಿ ಮಾಸ್ಕೋದಲ್ಲಿ ಸ್ಕ್ರೀನ್ ಆದವು. ಅವರ ಹೆಚ್ಚಿನ ತೆಲುಗು ಸಿನೆಮಾಗಳು ಭಾರತದ ಎಲ್ಲ ಭಾಷೆಗೆ ಡಬ್ ಅಥವಾ ರಿಮೇಕ್ ಆದವು.

ಹಿಂದಿಯಲ್ಲಿ ಸರ್ಗಂ, ಕಾಮ್‌ಚೋರ್, ಶುಭ ಕಾಮನಾ, ಜಾಗ್ ಉಠಾ ಇನಸಾನ್‌, ಸಂಜೋಗ, ಈಶ್ವರ್ ಮೊದಲಾದ ಸಿನೆಮಾಗಳನ್ನು ಅವರು ನಿರ್ದೇಶನ ಮಾಡಿ ಎಲ್ಲವನ್ನೂ ಹಿಟ್ ಮಾಡಿದರು. ಜಯಪ್ರದಾ, ಅನಿಲ್ ಕಪೂರ್, ರಾಕೇಶ್ ರೋಷನ್ ಮತ್ತು ಮ್ಯೂಸಿಕ್ ಅವರ ಸಿನೆಮಾಗಳನ್ನು ಸೂಪರ್‌ಹಿಟ್ ಮಾಡಿದವು.

ದಾಖಲೆ ಸಂಖ್ಯೆಯ ಪ್ರಶಸ್ತಿ ಅವರಿಗೆ ದೊರೆಯಿತು

ಭಾರತೀಯ ಸಿನಿಮಾ ರಂಗದಲ್ಲಿ ಅವರಷ್ಟು ಪ್ರಶಸ್ತಿ ಪಡೆದ ಇನ್ನೊಬ್ಬ ನಿರ್ದೇಶಕರು ದೊರೆಯುವುದಿಲ್ಲ. ಐದು ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಕೀರ್ತಿ ಅವರದ್ದು. ಏಳು ಬಾರಿ ತೆಲುಗಿನ ಮಹೋನ್ನತ ನಂದಿ ಅವಾರ್ಡ್, ಹತ್ತು ಬಾರಿ ದಕ್ಷಿಣದ ಫಿಲ್ಮ್‌ಫೇರ್ ಪ್ರಶಸ್ತಿಗಳು, ಮಾಸ್ಕೊ ಚಿತ್ರೋತ್ಸವದಲ್ಲಿ ಮತ್ತು ಫ್ರಾನ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ…. ಹೀಗೆ ದಾಖಲೆ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದ ಏಕೈಕ ನಿರ್ದೇಶಕರು ಅವರು.
ಅದರ ಜೊತೆಗೆ ಪ್ರತಿ ವರ್ಷವೂ ಕೇವಲ ಒಬ್ಬ ಸಿನೆಮಾ ಸಾಧಕರಿಗೆ ಕೊಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ಅವರಿಗೆ ದೊರೆಯಿತು. ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಅವರಿಗೆ ಅರ್ಜಿ ಹಾಕದೆ ದೊರೆಯಿತು.
ಒಂದಕ್ಕಿಂತ ಒಂದು ಅದ್ಭುತವಾದ, ಮುತ್ತಿನಂತಹ 53 ಸಿನೆಮಾಗಳನ್ನು ನಮ್ಮ ಮಡಿಲಲ್ಲಿ ಇರಿಸಿ ಲೆಜೆಂಡ್ ನಿರ್ದೇಶಕ ಕೆ.ವಿಶ್ವನಾಥ ಈ ಶುಕ್ರವಾರ ನಮ್ಮನ್ನು ಆಗಲಿದ್ದಾರೆ.
ಅವರಿಗೆ ನಮ್ಮ ಶ್ರದ್ಧಾಂಜಲಿ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top