ಪುತ್ತೂರು : ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಉಪ್ಪಿನಂಗಡಿ ವಲಯ ಬಂದಾರು ಶಾಖಾ ಉಪವಲಯಾರಣ್ಯಾಧಿಕಾರಿ ಜೆರಾಲ್ಡ್ ಡಿ’ಸೋಜಾ ಅವರು ಬೆಳ್ತಂಗಡಿ ತಾಲೂಕಿನ ಮುಗೇರಡ್ಕದಲ್ಲಿ ಪತ್ತೆಹಚ್ಚಿ ಮರ ಹಾಗೂ ವಾಹನ ವಶಪಡಿಸಿಕೊಂಡು, ಮೂವರು ಆರೋಫಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ನಿವಾಸಿ ಕೃಷ್ಣಪ್ಪ ಕೌರಿಕ, ಅಬ್ಬಾಸ್ ಪಾಣೆಮಂಗಳೂರು, ಇರ್ಫಾನ್ ಕಡಬ ಬಂಧಿತ ಆರೋಪಿಗಳು. ಅಶ್ರಫ್ ಅಂಡೆತ್ತಡ್ಕ, ರಹಿಮಾನ್ ಅಂಡೆತ್ತಡ್ಕ, ಚಾಲಕ ಅಶ್ರಫ್ ಪರಾರಿಯಾಗಿದ್ದಾರೆ. ಆರೋಪಿ ಕೃಷ್ಣಪ್ಪ ಕ್ಷೌರಿಕ ಅವರ ಸ್ವಾಧೀನದಲ್ಲಿರುವ ಸರಕಾರಿ ಜಾಗದಿಂದ ಒಂದು ಹೆಬ್ಬಲಸು, ಎರಡು ಮಾವು ಹಾಗೂ ಒಂದು ಕಾಡುಜಾತಿಯ ಮರಗಳನ್ನು ಕಡಿದು ಸುಮಾರು 23 ದಿಮ್ಮಿಗಳನ್ನಾಗಿ ಮಾಡಿ ಲಾರಿಯೊಂದಲ್ಲಿ ಸಾಗಾಟ ಮಾಡುತ್ತಿದ್ದಾಗ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿ ಸ್ಕೂಟಿ ಹಾಗೂ ಮೂರು ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಮರದ ಮೌಲ್ಯ 2.57ಲಕ್ಷ ಹಾಗೂ ವಾಹನಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಬಂದಾರು ಶಾಖೆಯ ಉಪವಲಯಾರಣ್ಯಾಧಿಕಾರಿ ಜೆರಾಲ್ಡ್ ಡಿ’ಸೋಜಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅರಣ್ಯ ಪಾಲಕರಾದ ಕೆ.ಎನ್.ಜಗದೀಶ್, ಪ್ರಶಾಂತ್ ಮಾಳಗಿ, ಜಗದೀಶ್, ಅರಣ್ಯ ವೀಕ್ಷಕರಾದ ರವಿ ಬಿ., ಶೇಷಪ್ಪ ಗೌಡ, ಚಾಲಕ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು.