ಕಗ್ಗದ ಸಂದೇಶ – ಹುಟ್ಟು-ಸಾವಿನಿಂದ ವ್ಯವಸ್ಥೆಗೆ ನವತೆ…

ಜವನ ನಿಂದಿಪುದೇಕೆ ಸರ್ವಘಾತಕನೆಂದು?|
ಭುವಿಗೆ ವೃದ್ಧ ಸಮೃದ್ಧಿಯವನು ಸುಮ್ಮನಿರಲ್ ||
ನಿಲೆ|
ನವನವತೆಯವನಿಂ ಜಗಕೆ-ಮಂಕುತಿಮ್ಮ||
‌‌ಸರ್ವರನ್ನು ನಾಶ ಮಾಡುವವನು ಎಂದು ಯಮನನ್ನು ನಿಂದಿಸುವುದೇಕೆ? ಅವನು ಸುಮ್ಮನೇ ಇರುತ್ತಿದ್ದರೆ ಈ ಭೂಮಿ ಮುದುಕರಿಂದಲೇ ತುಂಬಿಕೊಂಡಿರುತ್ತಿತ್ತು. ಇಲ್ಲಿ ಇದ್ದವರೆಲ್ಲ ತಮ್ಮ ಸ್ಥಳವನ್ನು ಬಿಟ್ಟುಕೊಡದೆ ಗಟ್ಟಿಯಾಗಿ ನಿಂತರೆ ಹೊಸದಾಗಿ ಬರುವವರಿಗೆ ಸ್ಥಳವಾದರೂ ಎಲ್ಲಿದೆ? ಈ ಭೂಮಿಯಲ್ಲಿ ಹೊಸತನ ಬರಲು ಕಾರಣ ಅವನು ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹುಟ್ಟುಸಾವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಯಮನು ತನ್ನ ಕರ್ತವ್ಯವನ್ನು ನಿರ್ವಹಿಸಿದರೂ ಎಲ್ಲರೂ ಅವನನ್ನು ನಿಂದಿಸುತ್ತಾರೆ. ಯಾಕೆಂದರೆ ಅವನು ಕೊಲ್ಲುವವನು ಎನ್ನುವ ಕಾರಣಕ್ಕೆ‌. ತೊಟ್ಟಿಲುಗಳೆಷ್ಟೋ ಮಸಣಗಳಷ್ಟು ಧರೆಯೊಳಗೆ|
ತೊಟ್ಟಿಲಿಗೆ ಹಬ್ಬ ಮಸಣವು ತಿಂದು ತೇಗುತಿರಲು||
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ ಹೊಸದಾಗಿ|
ಹುಟ್ಟುವರ್ಗೆಡೆಯೆಲ್ಲಿ-ಮಂಕುತಿಮ್ಮ||
ಎಂದು ಡಿವಿಜಿಯವರೆ ತಮ್ಮ ಇನ್ನೊಂದು ಕಗ್ಗದಲ್ಲಿ ಹುಟ್ಟುಸಾವಿನ ನಂಟನ್ನು ಮಾರ್ಮಿಕವಾಗಿ ಬಿಡಿಸಿ ಹೇಳಿದ್ದಾರೆ. ಹುಟ್ಟಿದ ಮಗುವಿಗಾಗಿ ಇರುವ ತೊಟ್ಟಿಲುಗಳಷ್ಟೆ ಸತ್ತವರಿಗಾಗಿ ಮಸಣಗಳು ಇವೆ. ಹುಟ್ಟಿದವರು ಸಾಯದೆ ಇದ್ದರೆ ಹೊಸದಾಗಿ ಹುಟ್ಟುವವರಿಗೆ ಸ್ಥಳವೇ ಇರುವುದಿಲ್ಲ. ಹೊಸ ಜನ ಬರಬೇಕು ಅವರಿಗೆ ಸ್ಥಳಾವಕಾಶ ಆಗಬೇಕು ಎನ್ನುವ ದೃಷ್ಟಿಯಿಂದ ವಿಧಿ ಮರಣದ ವ್ಯವಸ್ಥೆ ಮಾಡಿರುವುದು. ಸಾವಿನ ಭಯದಲ್ಲಿ ನಾವು ಯಮನನ್ನು ನಿಂದಿಸುವುದು ಸರಿಯಲ್ಲ. ಅವನು ಇಲ್ಲದಿದ್ದರೆ ಈ ಸೃಷ್ಟಿಗೆ ನವತೆ ಬರಲು ಸಾಧ್ಯವಿಲ್ಲ.

ಹೋದವರು ಮರಳುವರೆ? ಇರುವವರು ಉಳಿಯುವರೆ?|
ಬರುವವರು ನೂರ್ಕಾಲ ಇರಲಾರರಿಲ್ಲಿ||
ಬಲುಚೆಂದ ಬಿರಿದ ಹೂ ಒಂದು ದಿನ ಬಾಡುವದೊ!|
ತೆರುಳುವಿಕೆ ಅನಿವಾರ್ಯ–ಮುದ್ದುರಾಮ||

ಎಂಬ ಕೆ ಶಿವಪ್ಪನವರ ನುಡಿಯಂತೆ ಹೋದವರು ಮರಳುವುದಿಲ್ಲ, ಇರುವವರು ಮತ್ತು ಬರುವವರು ಇಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಸುಮಧುರ ಸೂಸುವ ಅರಳಿದ ಹೂ ಕೂಡ ಬಾಡಲೇ ಬೇಕಾಗತ್ತದೆ ಎಂಬಂತೆ ಹೋಗುವುದು ಅನಿವಾರ್ಯ ಎನ್ನುವ ವಾಸ್ತವ ಸತ್ಯವನ್ನು ಅರಿತು ನಗುನಗುತ ತೆರಳಬೇಕು. ಇದ್ದಾಗ ಹೂವಿನಂತೆ ಘಮಘಮಿಸಿ ಇಲ್ಲದಾಗ ಅದರ ಸವಿನೆನಪು ಉಳಿಯುವಂತಾದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?































 
 

ಪ್ರಭಾಕರ ಶೆಟ್ಟಿ ಕೊಂಡಳ್ಳಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top