ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ

ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಮುಂದಿನ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು, ಇದರ ನಡುವೆ ನ್ಯೂಸ್ ಪುತ್ತೂರು ನಡೆಸಿದ ಸಮೀಕ್ಷೆಯಲ್ಲಿ ಗೆಲುವಿನ ಅಂತರ ಇನ್ನೂ ಹೆಚ್ಚಳಗೊಳ್ಳುವ ಸುಳಿವು ಲಭಿಸಿದೆ.

ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲೂ ಕಣಕ್ಕಿಳಿಯುವುದು ಸಾಮಾನ್ಯ ಸಂಗತಿ. ಇದು ಪುತ್ತೂರಿನ ರಾಜಕೀಯ ವಿದ್ಯಮಾನದಲ್ಲೂ ನಡೆಯಲಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಮತದಾರನೂ ಶಾಸಕ ಸಂಜೀವ ಮಠಂದೂರು ಪರವಾಗಿಯೇ ಬ್ಯಾಟಿಂಗ್ ಮಾಡಿದ್ದು, ಬಿಜೆಪಿಗೆ ಗೆಲುವಿನ ಸರಣಿ ಮುಂದುವರಿಯುವ ಸೂಚನೆ ನಿಚ್ಚಳವಾದಂತಾಗಿದೆ.

ಅಭಿವೃದ್ದಿ ಕೆಲಸ, ಪಕ್ಷ ನಿಷ್ಠೆ, ಜನರ ಒಡನಾಟ, ನಿರಂತರ ಓಡಾಟ, ರಾಜ್ಯ ಮಟ್ಟದಲ್ಲಿ ಪಕ್ಷದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಹೀಗೆ ಹಲವು ಕಾರಣಗಳಿಗಾಗಿ ಸಂಜೀವ ಮಠಂದೂರು ಅವರ ಹೆಸರು ಬಿಜೆಪಿ ಪಾಳಯದಲ್ಲಿ ಗಟ್ಟಿಯಾಗಿ ತಳವೂರಿದೆ. ಇದಕ್ಕೆ ಪೂರಕವಾಗಿ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ, ಮುಂದಿನ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಅವರ ಹೆಸರು ಅಂತಿಮಗೊಂಡಿದೆ ಎಂದು ಹೇಳಲಾಗಿದೆ.































 
 

ಈ ಹಿನ್ನೆಲೆಯಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಸಂಜೀವ ಮಠಂದೂರು ಅವರ ಪರವಾಗಿ ಒಲವು ವ್ಯಕ್ತವಾಗಿದೆ. ಹಿಂದಿನ ಅವಧಿಯಲ್ಲಿ 19,477 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದ ಸಂಜೀವ ಮಠಂದೂರು ಅವರು ಈ ಬಾರಿ ಸುಮಾರು 30000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸುವುದು ಖಚಿತ ಎಂದು ಸಮೀಕ್ಷೆ ಸೂಚಿಸಿದೆ.

ಸಮೀಕ್ಷೆ ಹೀಗಿತ್ತು:

ಸಂಜೀವ ಮಠಂದೂರು ಅವರೇ ಶಾಸಕರಾಗಿ ಯಾಕೆ ಆಯ್ಕೆ ಆಗಬೇಕು? ಚುನಾವಣೆಯಲ್ಲಿ ಸಂಜೀವ ಮಠಂದೂರು ಅವರಿಗೆ ವಿಜಯಲಕ್ಷ್ಮೀ ಒಲಿಯುವಳೇ? ಎಂಬ ಎರಡು ಪ್ರಶ್ನೆಗಳನ್ನು ಮೂಲವಾಗಿಟ್ಟುಕೊಂಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಹಾಗೂ ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಯಿತು. ಸಂಜೀವ ಮಠಂದೂರು ಅವರ ಪರವಾಗಿ ಹೆಚ್ಚಿನ ಒಲವು ಇರುವುದರಿಂದ, ಅವರೇ ಮುಂದಿನ ಶಾಸಕರಾಗಿ ಆಯ್ಕೆ ಆಗಬೇಕು ಎಂಬ ಉತ್ತರಗಳು ವ್ಯಕ್ತವಾಗಿದೆ.

ಸಮೀಕ್ಷೆಯಲ್ಲಿ ಸಂಜೀವ ಮಠಂದೂರು ಅವರ ಪರವಾಗಿ ಎರಡು ಪ್ರಮುಖ ವಿಚಾರಗಳು ಕಂಡುಬಂದಿದೆ. 1) ಅಭಿವೃದ್ಧಿ ಕಾರ್ಯಗಳು 2) ಪಕ್ಷ ಹಾಗೂ ಸಂಘ ನಿಷ್ಠೆ

ಅಭಿವೃದ್ಧಿ ಕಾರ್ಯಗಳು:

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ಬಂದಿರುವುದು ಮಾತ್ರವಲ್ಲ, ಮೂಲೆಮೂಲೆಗಳಿಗೂ ಅನುದಾನ ಹಂಚಿಕೆ ಆಗಿರುವುದು ಪ್ರಮುಖವಾಗಿ ಕಂಡುಬಂದ ವಿಚಾರ. ಇದರ ಜೊತೆಗೆ ದೂರದೃಷ್ಟಿಯ ಯೋಜನೆಗಳನ್ನು ಅಳವಡಿಸಿಕೊಳ್ಳಲು ವಹಿಸಿದ ಶ್ರಮ ಹಾಗೂ ಇದರ ಜಾರಿಗೆ ಇನ್ನಷ್ಟು ಸಮಯಾವಕಾಶದ ಅಗತ್ಯತೆಯನ್ನು ಜನರು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಕಂಡುಬಂದ ಇನ್ನೊಂದು ವಿಚಾರವೆಂದರೆ, ಧಾರ್ಮಿಕ ಕ್ಷೇತ್ರಕ್ಕೆ ಬಂದಿರುವ ಅನುದಾನಗಳು. ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳಿಗೆ ಈ ಬಾರಿ ಸಾಕಷ್ಟು ಅನುದಾನಗಳನ್ನು ತರಿಸಿಕೊಡಲಾಗಿದೆ. ಇದು ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗೆ ಸಾಕಷ್ಟು ಸಹಕಾರಿಯಾಗಿದೆ ಎಂಬ ಅಂಶವೂ ಗೋಚರವಾಗಿದೆ. ಇಲ್ಲಿನವರೆಗೆ ಬಂದಿರುವ ಯಾವ ಶಾಸಕರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ತರಿಸಿಲ್ಲ ಎಂಬುದನ್ನು ಜನರು ತಿಳಿಸಿದ್ದಾರೆ.

ಪಕ್ಷ ಹಾಗೂ ಸಂಘ ನಿಷ್ಠೆ:

ಸಂಜೀವ ಮಠಂದೂರು ಅವರು ಪಕ್ಷಕ್ಕಾಗಿ ಸಾಕಷ್ಟು ಸಮಯ ನೀಡಬಲ್ಲವರು. ಶಾಸಕರಾಗಿ ಆಯ್ಕೆ ಆಗುವ ಮೊದಲು ಗ್ರಾಮ ಪಂಚಾಯತ್ ಸದಸ್ಯರಾಗಿ, ಸಹಕಾರ ರಂಗದಲ್ಲಿ, ಕ್ಯಾಂಪ್ಕೋ ನಿರ್ದೇಶಕರಾಗಿ ಹೀಗೆ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದವರು. ಕಳೆದ 5 ವರ್ಷಗಳ ಅವಧಿಯಲ್ಲಿ ಶಾಸಕರಾಗಿ ಕೆಲಸ ಮಾಡಿದ್ದು, ತಳಮಟ್ಟದ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಸಮೀಕ್ಷೆಯಲ್ಲಿ ಭಾಗವಹಿಸಿದವರ ಮಾತು.

ಆರ್.ಎಸ್.ಎಸ್.ನ ಒಡನಾಟದಲ್ಲಿ ಬೆಳೆದ ಸಂಜೀವ ಮಠಂದೂರು ಅವರು, ಸಂಘದ ಚೌಕಟ್ಟನ್ನು ಮೀರಿ ಹೋದವರೇ ಅಲ್ಲ. ಸಂಘದ ಶಿಸ್ತನ್ನು ಜೀವನದಲ್ಲೂ ಅಳವಡಿಸಿಕೊಂಡವರು. ಅಪಪ್ರಚಾರಗಳು ಏನೇ ಇದ್ದರೂ, ಅವುಗಳೆಲ್ಲಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾನ್ಯ ಎನ್ನುವ ಅಂಶಗಳು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಜನರ ಸಂಪರ್ಕ:

ಸಂಜೀವ ಮಠಂದೂರು ಅವರು ಪಕ್ಷಕ್ಕಾಗಿ ಸಾಕಷ್ಟು ಸಮಯ ನೀಡಬಲ್ಲವರು ಎನ್ನುವುದು ಎಲ್ಲರೂ ತಿಳಿದಿರುವ ವಿಚಾರ. ಇದು ಕೂಡ ಸಮೀಕ್ಷೆಯಲ್ಲಿ ವ್ಯಕ್ತವಾಗಿದ್ದು, ಜನಸಾಮಾನ್ಯರು ಶಾಸಕರನ್ನು ನೇರವಾಗಿ ಕಂಡು ಮಾತನಾಡಬಹುದು ಎನ್ನುವ ವಿಚಾರವನ್ನು ಉಲ್ಲೇಖಿಸಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದಲೇ ಮನೆಯಲ್ಲಿ ಲಭ್ಯರಿರುತ್ತಾರೆ ಮಾತ್ರವಲ್ಲ, ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ನಿಖರವಾದ ಪರಿಹಾರ ಸೂಚಿಸುತ್ತಾರೆ. ತಳಮಟ್ಟದಿಂದ ನಾಯಕನಾಗಿ ಬೆಳೆದು ಬಂದ ಕಾರಣದಿಂದ, ಇಂತಹ ಕಾರ್ಯವೈಖರಿ ಸಾಧ್ಯವಾಗಿದೆ ಎಂದಿರುವ ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು, ಹಿಂದುತ್ವಕ್ಕಾಗಿ ಕಳೆದ 3-4 ದಶಕಗಳಿಂದ ಪಳಗಿ ಬಂದ ನಾಯಕ ಎಂಬುದನ್ನು ತಿಳಿಸಿದ್ದಾರೆ. ಹಿಂದುತ್ವ ಎಂದರೆ ಏನೆಂಬುದನ್ನು ಕಾರ್ಯದಲ್ಲಿ ಮಾಡಿ ತೋರಿಸಿದವರು ಎನ್ನುವುದನ್ನು ಉಲ್ಲೇಖಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top