ಪುತ್ತೂರು: ಅವಳಿ ವೀರರ ಹೆಸರಿನಲ್ಲಿ ನಡೆಯುತ್ತಿರುವ ಕೋಟಿ – ಚೆನ್ನಯ ಜೋಡುಕರೆ ಕಂಬಳದಲ್ಲಿ ಮಹಿಳಾ ಅತಿಥಿಯೋರ್ವರನ್ನು ಅವಮಾನಿಸಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದಿ. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಂಬಳ, ಈ ವರ್ಷ ಎನ್. ಚಂದ್ರಹಾಸ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆದಿತ್ತು. ಆದರೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ. ಮಹಿಳಾ ಪರ ಹೋರಾಟದ ಹಿನ್ನೆಲೆಯಿಂದಲೇ ಬಂದ ಶಾಸಕಿ ಶಕುಂತಳಾ ಶೆಟ್ಟಿ ಅವರು ಮುಂಚೂಣಿಯಲ್ಲಿದ್ದ ಕಾರ್ಯಕ್ರಮದಲ್ಲೇ ಮಹಿಳಾ ಅತಿಥಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ ನಟಿ ಸಾನಿಯಾ ಅಯ್ಯರ್ ಅವರನ್ನು ಅವಮಾನಿಸಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸಾನಿಧ್ಯ ಎಂದರೆ ಭಯ ಭಕ್ತಿ ಹೆಚ್ಚು. ಇಂತಹ ಪುಣ್ಯದ ಸ್ಥಳದಲ್ಲಿ ನಮ್ಮ ನೆಲಕ್ಕೆ ಬಂದ ಅಥವಾ ಆಹ್ವಾನಿಸಿದ ಅತಿಥಿಯೋರ್ವರನ್ನು ಈ ರೀತಿ ಅವಮಾನಿಸಿ ಕಳುಹಿಸುವುದು ಸರಿಯೇ? ಅತಿಥಿಗಳನ್ನು ಕರೆಸಿಕೊಂಡ ಬಳಿಕ, ಅವರು ಹಿಂದಿರುಗಿ ಹೋಗುವವರೆಗೆ ಅವರ ಸಂರಕ್ಷಣೆಯ ಜವಾಬ್ದಾರಿ ಕಾರ್ಯಕ್ರಮ ಸಂಘಟಕರ ಹೆಗಲ ಮೇಲಿಲ್ಲವೇ? ವೇದಿಕೆ ಮೇಲೆ ಆಸೀನರಾಗಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಹಿತ ಗಣ್ಯಾತಿಗಣ್ಯರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಭಾ ಕಾರ್ಯಕ್ರಮ ನಡೆಯುತ್ತಿದ್ದಂತೆ, ಸಾನಿಯಾ ಅಯ್ಯರ್ ಅವರು ‘ಐ ಲವ್ ಯೂ ಪುತ್ತೂರು’ ಎಂದು ಹೇಳಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ವ್ಯಕ್ತಿಯೋರ್ವ ‘ಐ ಲೌ ಸಾನಿಯಾ’ ಎಂದು ಐದಾರು ಬಾರಿ ಹೇಳಿದ್ದ. ಇದು ಸಾನಿಯಾ ಹಾಗೂ ಅವರ ಸ್ನೇಹಿತರಿಗೆ ಇರುಸು – ಮುರುಸು ಉಂಟು ಮಾಡಿದ್ದರೂ, ಮೌನವಾಗಿಯೇ ಸಹಿಸಿಕೊಂಡಿದ್ದರು. ಕೊನೆಯಲ್ಲಿ, ಸಭೆ ಮುಗಿಸಿ ವೇದಿಕೆ ಇಳಿಯುತ್ತಿದ್ದಂತೆ ಸೆಲ್ಫಿ ನೆಪದಲ್ಲಿ ಬಂದ ಪುಂಡರ ಗುಂಪೊಂದು ಸಾನಿಯಾ ಅಯ್ಯರ್ ಅವರ ಕೈಹಿಡಿದು ಎಳೆದಿದೆ. ಇದರಿಂದ ಕೋಪಗೊಂಡ ಸಾನಿಯಾ ಹಾಗೂ ಅವರ ಸ್ನೇಹಿತರ ಗುಂಪು ವಿರೋಧಿಸಿದ್ದು, ಕ್ಷಮೆ ಕೇಳಲು ಆಗ್ರಹಿಸಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಕೆಲ ಯುವಕರ ಗುಂಪು, ಪುಂಡರಿಗೆ ಧರ್ಮದೇಟು ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.