ಪುತ್ತೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನವಾದ ಸೋಮವಾರ ಪುತ್ತೂರಿನ ಗಾಂಧೀ ಕಟ್ಟೆಯಲ್ಲಿ ಗಾಂಧೀಜಿ ಅವರ ಪ್ರತಿಮೆಗೆ ಗೌರವಾರ್ಪಣೆ ಹಾಗೂ ಸೈರನ್ ಮೊಳಗಿಸುವ ಮೂಲಕ ಆಚರಿಸಲಾಯಿತು.
ಮಹಾತ್ಮ ಗಾಂಧೀಜಿ ಅವರು ೧೯೩೪ರಲ್ಲಿ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಗಾಂಧೀಕಟ್ಟೆಯ ಬಳಿಯಲ್ಲಿದ್ದ ಅಶ್ವಥ ವೃಕ್ಷದ ಅಡಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಈ ಸ್ಥಳದಲ್ಲಿ ಗಾಂಧೀ ಕಟ್ಟೆ ಸಮಿತಿಯ ವತಿಯಿಂದ ಗಾಂಧೀ ಕಟ್ಟೆಯನ್ನು ನಿರ್ಮಿಸಲಾಗಿತ್ತು. ಈ ಸ್ಥಳದಲ್ಲಿ ಪ್ರತಿವರ್ಷವೂ ಗಾಂಧೀ ಜಯಂತಿ, ಸ್ವಾತಂತ್ರ್ಯೋತ್ಸವ ಗಾಂಧೀ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಮಂಗಳವಾರ ನಡೆದ ಗಾಂಧಿ ಹುತಾತ್ಮ ದಿನದಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್, ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ತಹಸೀಲ್ದಾರ್ ನಿಸರ್ಗಪ್ರಿಯ, ಅಗ್ನಿಶಾಮಕ ದಳದ ಶಂಕರ್, ಬೆಟ್ಟಂಪಾಡಿ ಗ್ರಾಪಂ ಸದಸ್ಯೆ ಸುಮಲತ ಮತ್ತಿತರರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಗಾಂಧಿಕಟ್ಟೆ ಸಮಿತಿಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.