ಪುತ್ತೂರಿನಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ

ಪುತ್ತೂರು : ಜೆಡಿಎಸ್ ಪಕ್ಷ ಜಾತ್ಯಾತೀತ ನೆಲೆಯಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಪಕ್ಷವಾಗಿದ್ದು, ಮುಂದಿನ ದಿನಗಳಲ್ಲಿ ನಾಯಕರನ್ನು, ಕಾರ್ಯಕರ್ತರನ್ನು ಸೇರಿಸಿಕೊಂಡು ದ.ಕ ಜಿಲ್ಲೆಯಲ್ಲಿ ಪಕ್ಷವನ್ನು ಸಧೃಢವಾಗಿ ಸಂಘಟಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಪಕ್ಷದ ವತಿಯಿಂದ ಪಕ್ಷ ಸಂಘಟನೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಎಂದು ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು.
ಅವರು ಸೋಮವಾರ ಪುತ್ತೂರು ಅಮರ್ ಕಾಂಪ್ಲೆಕ್ಸ್‌ನಲ್ಲಿ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಮ್ಮ ನಾಯಕ ಕುಮಾರಸ್ವಾಮಿಯವರಿಗೆ ಬಲ ತುಂಬಬೇಕಾದರೆ ನಾವು ಪ್ರಾಮಾಣಿಕವಾಗಿ ಪಕ್ಷ ಸಂಘಟಿಸಬೇಕು. ಸಣ್ಣಪುಟ್ಟ ಗೊಂದಲ, ಭಿನ್ನಾಭಿಪ್ರಾಯ ಸಾಮಾನ್ಯವಾಗಿ ತಳಮಟ್ಟದಿಂದ ರಾಜ್ಯಮಟ್ಟದ ವರೆಗೂ ಇರುತ್ತದೆ. ಅವೆಲ್ಲವನ್ನೂ ಪರಿಹರಿಸಿಕೊಂಡು ಹೋಗಬೇಕು. ನಾಯಕರಾದವರಿಗೆ ತಾಳ್ಮೆ ಮುಖ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ಹೇಳಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ಬಿಜೆಪಿ ಸುಳ್ಳು ಹೇಳುತ್ತಾ ಬೋಗಸ್ ಕೊಡುಗೆಗಳನ್ನು ಪ್ರಕಟಿಸಿ ಜನರನ್ನು ವಂಚಿಸುತ್ತಿದ್ದು ಪುತ್ತೂರಿನಲ್ಲಿ ಕಾಂಗ್ರೆಸ್ ಹೊಸ ಮುಖ ಪರಿಚಯಿಸಿ ವಿನಾಶದ ಕಡೆಗೆ ಹೋಗುತ್ತಿದೆ. ಒಟ್ಟಾರೆಯಾಗಿ ಬಿಜೆಪಿ ಬೆಳೆಯಲು ಕಾಂಗ್ರೆಸ್ ಕಾರಣ ಎಂದು ಹೇಳಿದರು.
ಜೆಡಿಎಸ್ ಪುತ್ತೂರು ವಿಧಾನಸಬಾ ಕ್ಷೇತ್ರದ ಮಾಜಿ ಅಧ್ಯಕ್ಷ ಐ.ಸಿ ಕೈಲಾಸ್ ಮಾತನಾಡಿ, ಚುನಾವಣೆ ಬಂದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳುವ ಬದಲು ಮೊದಲೇ ಎಚ್ಚೆತ್ತುಕೊಂಡರೆ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬಹುದು. ಕುಮಾರಸ್ವಾಮಿ ನಮ್ಮ ಜಿಲ್ಲೆಗೆ ಬಂದಾಗ ಅವರ ಜೊತೆ ೫ ನಿಮಿಷ ಮಾತನಾಡಲೂ ತಾಲೂಕು ಸಮಿತಿಯವರಿಗೆ ಅವಕಾಶ ಸಿಗುತ್ತಿಲ್ಲ. ಜಿಲ್ಲಾ ಸಮಿತಿಯವರು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಜೆಡಿಎಸ್ ಹಿರಿಯ ಮುಖಂಡ ಗದಾಧರ್ ಮಲ್ಲಾರ್ ಮಾತನಾಡಿ, ನಾವು ಸಭೆ ನಡೆಸುವುದು ತಡವಾಗಿದ್ದು ಈ ಮೊದಲೇ ಅಖಾಡಕ್ಕೆ ಇಳಿಯಬೇಕಿತ್ತು, ಮುಂದಕ್ಕೆ ಅಭ್ಯರ್ಥಿ ಆಯ್ಕೆಯಾದರೆ ಮೀಟಿಂಗ್ ಮಾಡುವ ಬದಲು ಗ್ರಾಮಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದರು.
ಪುತ್ತೂರು ನಗರಸಭೆಯ ಮಾಜಿ ಸದಸ್ಯೆ, ಜೆಡಿಎಸ್ ಮುಖಂಡೆ ಝೊಹರಾ ನಿಸಾರ್ ಮಾತನಾಡಿ, ಅಧಿಕಾರಕ್ಕಿಂತ ನಮಗೆ ಪಕ್ಷ ಸಂಘಟನೆ ಮುಖ್ಯವಾಗಬೇಕು. ಬಿಜೆಪಿ, ಕಾಂಗ್ರೆಸ್‌ನಿಂದ ಬೇಸತ್ತಿರುವ ಹಲವರು ಮನೆಯಲ್ಲೇ ಇದ್ದು ಅಂತವರ ಜೊತೆ ನಾವು ಮಾತುಕತೆ ನಡೆಸಬೇಕು ಎಂದರು. ಬೆಲೆಯೇರಿಕೆ, ಸರಕಾರದ ಆಡಳಿತ ವೈಫಲ್ಯದ ವಿರುದ್ಧ ಹೋರಾಟ, ಪತ್ರಿಕಾಗೋಷ್ಠಿ ಮೂಲಕ ಸದಾ ಧ್ವನಿ ಎತ್ತುವ ಕೆಲಸ ನಮ್ಮಿಂದಾಗಬೇಕು ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top