ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಜಂಟಿ ಆಶ್ರಯದಲ್ಲಿ ಪುತ್ತೂರು ನಗರಸಭೆ ಹಾಗೂ ಸರಕಾರಿ ಆಸ್ಪತ್ರೆ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಸೋಮವಾರ ನಗರಸಭೆ ಕಟ್ಟಡದಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕೋವಿಡ್ ಬಳಿಕ ಜನತೆ ತಮ್ಮ ಆರೋಗ್ಯದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ದುಡ್ಡಿದ್ದರೂ ಆರೋಗ್ಯ ಕಾಪಾಡಿಕೊಳ್ಳದ ಸ್ಥಿತಿಯಲ್ಲಿದ್ದು, ಆಹಾರ ಪದ್ಧತಿಯನ್ನು ಉತ್ತಮಪಡಿಸಿಕೊಳ್ಳುವ ಅಗತ್ಯವಿದೆ . ಈ ನಿಟ್ಟಿನಲ್ಲಿ ನಗರಸಭೆ ಪ್ರಥಮ ಶಿಬಿರ ಹಮ್ಮಿಕೊಂಡಿದೆ ಎಂದರು.
ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ರೊ.ಎ.ಜಗಜೀವನ್ದಾಸ್ ರೈ ಮಾತನಾಡಿ, ಪ್ರಸ್ತುತ ರೋಟರಿ ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಭಾಗ್ಯ ನೀಡುವ ಕೆಲಸ ಮಾಡುತ್ತಿದೆ. ಜತೆಗೆ ಆರೋಗ್ಯಕ್ಕೆ ಪೂರಕವಾದ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದರು. ಮುಖ್ಯ ಅತಿಥಿಗಳಾಗಿ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಶುಭ ಹಾರೈಸಿದರು. ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಮೊಹಮ್ಮದ್ ರಫೀಕ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ್ ವಂದಿಸಿದರು. ಬಳಿಕ ನಗರಸಭೆ ಅಧಿಕಾರಿಗಳು ಸಹಿತ ಸಿಬ್ಬಂದಿಗಳು ಕಣ್ಣಿ ತಪಾಸಣೆ ಮಾಡಿಸಿಕೊಂಡರು.