ಪುತ್ತೂರು : ಅಡಿಕೆ ಪತ್ರಿಕೆಯ 35 ನೇ ವರ್ಷಾಚರಣೆ ಹಾಗೂ ಪತ್ರಿಕೆ ಸಂಪಾದಕ ಅಡಿಕೆ ಚೊಗರು ; ಹೊಸ ನಿರೀಕ್ಷೆಗಳ ಚಿಗುರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಪರ್ಪುಂಜದ ಸೌಗಂಧಿಕದಲ್ಲಿ ನಡೆಯಿತು.
ಕೇಂದ್ರ ಸರಕಾರದ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಅಡಕೆ ಬೆಳೆಯುವ 11 ಜಿಲ್ಲೆಗಳಲ್ಲಿ ಅಡಿಕೆ ಮೌಲ್ಯವರ್ಧನೆ ಪ್ರಯೋಗಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಹಿರಿಯ ಸಾಹಿತಿ, ಕೃಷಿ ಲೇಖಕ ಡಾ.ನರೇಂದ್ರ ರೈ ದೇರ್ಲ ಶ್ರೀಪಡ್ರೆ ಅವರ ಅಡಿಕೆ ಚೊಗರು ; ಹೊಸ ನಿರೀಕ್ಷೆಗಳ ಚಿಗುರು ಪುಸ್ತಕ ಬಿಡುಗಡೆ ಮಾಡಿ, ಚೊಗರು ತಯಾರಿಕೆ ಕ್ರಮ ಶತಮಾನಗಳಿಂದ ಬೆಳೆದು ಬಂದಿದೆ. ಶ್ರೀಪಡ್ರೆಯವರು ಮಲೆನಾಡಿನ ಕೆಲಭಾಗಗಳಲ್ಲಿ ಕೆಂಪಡಿಕೆ ಸಂಸ್ಕರಣೆ ವೇಳೆ ಸಹಜವಾಗಿಯೇ ಲಭಿಸುವ ಚೊಗರು ನೈಸರ್ಗಿಕ ಬಟ್ಟೆ ಬಣ್ಣ ಮಾತ್ರವಲ್ಲ, ಗೆದ್ದಲು ನಾಶಕ, ಶೀಲೀಂಧ್ರನಾಶಕವೂ ಹೌದು ಎಂಬುದನ್ನು ಪುಸ್ತಕದಲ್ಲಿ ತೆರೆದಿಟ್ಟಿದ್ದು, ಇದನ್ನು ಬಳಸಿಕೊಳ್ಳಲು ಉದ್ಯಮಿಗಳು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಅಡಿಕೆ ಪತ್ರಿಕೆ ಸಂಪಾದಕಿಯ ಮಂಡಳಿ ಸದಸ್ಯರಾದ ಎಂ.ಜಿ.ಸತ್ಯನಾರಾಯಣ, ಕಿನಿಲ ಅಶೋಕ್, ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ.ಮೋಹನ್ ತಲಕಾಲುಕೊಪ್ಪ, ಮಂಗಳೂರು ಕೆವಿಕೆ ಮುಖ್ಯಸ್ಥ ಡಾ.ಟಿ.ಜಿ.ರಮೇಶ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಾ ಸೌಗಂಧಿಕ, ಮಾಧವ ಕಲ್ಲಾರೆ ಚೊಗರಿನ ಹಾಡು ಸಾದರಪಡಿಸಿದರು. ಅರವಿಂದ ಪರಿಸರ ಗೀತೆ ಹಾಡಿದರು. ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಸ್ವಾಗತಿಸಿದರು. ಚಂದ್ರ ಸೌಗಂಧಿಕ ವಂದಿಸಿದರು. ಶೋಭಾ ಮಾಧವ ಕಾರ್ಯಕ್ರಮ ನಿರೂಪಿಸಿದರು.