ನೇಪಥ್ಯಕ್ಕೆ ಸರಿದ ಟೆನ್ನಿಸ್ ಲೋಕದ ಕೋಲ್ಮಿಂಚು ಸಾನಿಯಾ ಮಿರ್ಜಾ

ACE against ODDS ಅವರ ಆತ್ಮಚರಿತ್ರೆಯ ಪುಸ್ತಕ

ಕ್ರಿಕೆಟ್ ಆಟ ನಮ್ಮ ಜೀವನ ಧರ್ಮ ಎಂದೇ ಬಿಂಬಿತವಾದ, ಕ್ರಿಕೆಟ್ ಆಟಗಾರರೇ ನಮ್ಮ ದೇವರು ಎಂದೇ ಕರೆಯಲ್ಪಡುವ ಭಾರತದಲ್ಲಿ ಟೆನ್ನಿಸಿಗೆ, ಅದರಲ್ಲಿಯೂ ಮಹಿಳಾ ಟೆನ್ನಿಸಿಗೆ ಒಂದು ಸ್ಥಾನ ಇದೆ ಎಂದು ತೋರಿಸಿಕೊಟ್ಟವರು ಸಾನಿಯಾ ಮಿರ್ಜಾ. ಇದೀಗ 36 ವರ್ಷ ಪೂರ್ತಿಯಾದ ಸಾನಿಯಾ ಈ ಸಂದರ್ಭದಲ್ಲಿ ಟೆನ್ನಿಸ್ ಜಗತ್ತಿಗೆ ಕಳೆದ ವರ್ಷ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಸಹಜ ಮುಗ್ಧ ಸೌಂದರ್ಯದ ‘ಮೂಗುತಿ ಸುಂದರಿ’ ಈಗ ಟೆನ್ನಿಸ್ ಕೋರ್ಟಿನಲ್ಲಿ ಆಡುತ್ತಿಲ್ಲ.

ಆಕೆಯ ವಿರುದ್ಧ ಒಮ್ಮೆ ಫತ್ವಾ ಹೊರಟಿತ್ತು





























 
 

2004ರ ವರ್ಷದಲ್ಲಿ ಆಕೆ ವೃತ್ತಿಪರವಾದ ಟೆನ್ನಿಸ್ ಆಡಲು ಆರಂಭ ಮಾಡಿ ಶಾರ್ಟ್ಸ್ ಮತ್ತು ಟೀ ಶರ್ಟ್ ಹಾಕಿ ಕೋರ್ಟಿಗೆ ಇಳಿದಾಗ ಆಕೆಯ ಮೇಲೆ ಕಾಮಾಲೆ ಕಣ್ಣಿನ ಸಂಪ್ರದಾಯವಾದಿಗಳು ಫತ್ವಾ ಹೊರಡಿಸಿ ಮುಗಿಬಿದ್ದದ್ದು ನನಗೆ ಇನ್ನೂ ನೆನಪಿದೆ. ಆಕೆ ಬುರ್ಖಾ ಹಾಕಲು ನಿರಾಕರಣೆ ಮಾಡಿದಾಗ, ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರನ್ನು ನಿಖಾ ಆದಾಗ ಹಲವರು ಆಕೆಯನ್ನು ‘ಪಾಕಿಸ್ಥಾನದ ಸೊಸೆ’ ಎಂದು ಮೂಗು ಮುರಿದದ್ದು ಇದೆ.
ಆಗೆಲ್ಲ ಸಾನಿಯಾ ತೀವ್ರ ಪ್ರತಿರೋಧವನ್ನು ಎದುರಿಸಿದ್ದಾರೆ. ಅದಕ್ಕೆ ಅವರ ಉತ್ತರ ಮಾತ್ರ ತಣ್ಣಗಿನ ಮೌನವೇ ಆಗಿತ್ತು. ಅಂತಹ ನೂರಾರು ವಿವಾದಗಳನ್ನು ಅರಗಿಸುವ ಧೈರ್ಯ ಮತ್ತು ದಿಟ್ಟತನಗಳು ಆಕೆಗೆ ರಕ್ತಗತವಾಗಿ ಬಂದಿದ್ದವು. ಆ ಸಾಮರ್ಥ್ಯವೇ ಆಕೆಯ ಶಕ್ತಿ ಎನ್ನಬಹುದು. ಆರಂಭದಿಂದ ಒಂದಲ್ಲ ಒಂದು ವಿವಾದಗಳು ಆಕೆಯನ್ನು ಬೆಂಬಿಡದ ಬೇತಾಳನಂತೆ ಕಾಡಿದ್ದು ಇದೆ.
ಅದಕ್ಕೆ ಅನ್ವರ್ಥವಾಗಿ ಆಕೆಯ ಆತ್ಮಚರಿತ್ರೆಯ ಪುಸ್ತಕದ ಹೆಸರು – ACE against ODDS!

ಆಕೆ ಕೇವಲ ದಂತದ ಗೊಂಬೆ ಅಲ್ಲ!

ವಿಶ್ವ ಮಟ್ಟದ ಆರು ಗ್ರಾನಸ್ಲಾಮ್ ಟ್ರೋಫಿಗಳನ್ನು ಎತ್ತಿದ ಕೀರ್ತಿ ಆಕೆಯದ್ದು. ಅದರಲ್ಲಿ ಮೂರು ಸಿಂಗಲ್ಸ್ ಮತ್ತು ಮೂರು ಡಬಲ್ಸ್. ಮಾರ್ಟಿನಾ ಹಿಂಗಿಸ್ ಮತ್ತು ಮಹೇಶ್ ಭೂಪತಿ ಆಕೆಯ ಫೇವರೆಟ್ ಡಬಲ್ಸ್ ಆಟಗಾರರು. ಡಬಲ್ಸ್‌ನಲ್ಲಿ ಒಮ್ಮೆ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ್ತಿ ಆಗಿ ಕೂಡ ರ್ಯಾಕ್ ಪಡೆದಿದ್ದರು.
ಸಾನಿಯಾ ಮಿರ್ಜಾ ಟೆನ್ನಿಸ್ ಶ್ರೇಯಾಂಕದಲ್ಲಿ ಹಲವು ವರ್ಷಗಳಲ್ಲಿ ಮೊದಲ ರ್ಯಾಂಕ್‌ನಲ್ಲಿಯೆ ಮೆರೆದು ಮಿಂಚಿದವರು. ಭಾರತದಲ್ಲಿ ಆಕೆ ಏರಿದ ಎತ್ತರವನ್ನು ಬೇರೆ ಯಾವ ಮಹಿಳಾ ಟೆನ್ನಿಸ್ ಆಟಗಾರ್ತಿ ಕೂಡ ಈವರೆಗೆ ತಲುಪಿದ ಉದಾಹರಣೆ ಇಲ್ಲ.

ಮದುವೆ ಆದ ನಂತರವೂ ಕುಂದದ ಖದರು

18 ವರ್ಷಗಳ ಸುದೀರ್ಘ ಟೆನ್ನಿಸ್ ಬದುಕಿನಲ್ಲಿ ಏಕಮೇವ ಅದ್ವಿತೀಯ ಪ್ರತಿಭೆ ಆಗಿ ದೀರ್ಘಕಾಲ ಮೆರೆಯುವುದು ಅಷ್ಟು ಸುಲಭ ಅಲ್ಲ. ಅದು ಕೂಡ ಮದುವೆ ಆಗಿ ಮಗು ಆದ ನಂತರ ಕೂಡ ವೃತ್ತಿಪರ ಟೆನ್ನಿಸ್ ಆಡುವುದು ಖಂಡಿತವಾಗಿ ಸವಾಲಿನ ಕೆಲಸ. ಆದರೆ ಸಾನಿಯಾ ಅವರ ಇಚ್ಛಾಶಕ್ತಿಗೆ ಇದು ಸಾಧ್ಯ ಆಗಿದೆ.

ಟೆನ್ನಿಸ್ ಲೆಜೆಂಡ್‌ಗಳ ಸಾಲಿನಲ್ಲಿ ಸಾನಿಯಾ

ಟೆನ್ನಿಸ್ ಜಗತ್ತಿನ ಅತ್ಯಂತ ಸ್ಫುರದ್ರೂಪಿ ತಾರೆಯರಾದ ಮರಿಯ ಶರಪೋವಾ, ಅನ್ನಾ ಕೊರ್ನಿಕೋವ, ಲಾರಾ ರಾಬ್ಸನ್, ಮಾರ್ಟಿನಾ ಹಿಂಗಿಸ್ ಮೊದಲಾದವರ ಸಾಲಿನಲ್ಲಿ ಸಾನಿಯಾ ಹೆಸರು ದೀರ್ಘ ಕಾಲ ಸ್ಥಾಪನೆ ಆಗಿತ್ತು.
ಅವರನ್ನು ಬೇರೆ ಬೇರೆ ಕಾರಣಕ್ಕೆ ದೂಷಣೆ ಮಾಡುವವರು ಕೂಡ ಆಕೆಯ ಗ್ಲಾಮರ್ ಸೆಳೆತಕ್ಕೆ ಒಳಗಾದವರೆ. ಆಕೆಯ ಕಣ್ಣು ಕೋರೈಸುವ ಸೌಂದರ್ಯ ನಿಜಕ್ಕೂ ಚುಂಬಕ ಆಗಿದೆ.
ಹಾಗೆಂದು ಆಕೆ ಕೇವಲ ದಂತದ ಗೊಂಬೆ ಅನ್ನುವ ಹಾಗೆ ಇಲ್ಲ. ವಿಶ್ವದ ಅಗ್ರಮಾನ್ಯ ಟೆನ್ನಿಸ್ ಆಟಗಾರರಾದ ಮರಿಯನ್ ಬಾರ್ತೋಲಿ, ಮಾರ್ಟಿನಾ ಹಿಂಗಿಸ್, ದಿನಾರಾ ಸಫಿನಾ, ಕಾರಾ ಬ್ಲ್ಯಾಕ್ ಇವರನ್ನು ಒಂದಲ್ಲ ಒಂದು ಪಂದ್ಯದಲ್ಲಿ ಸೋಲಿಸಿದ ಕೀರ್ತಿ ಕೂಡ ಆಕೆಗೆ ಇದೆ.

ಬಲಿಷ್ಠ ಬೇಸ್ ಲೈನ್ ಆಟಗಾರ್ತಿ

ಬಲಿಷ್ಠ ಬೇಸ್ ಲೈನ್ ಆಟಗಾರ್ತಿ ಆದ ಸಾನಿಯಾ ಬಲಿಷ್ಠ ಹಿಂಗೈ ಮತ್ತು ಮುಂಗೈ ಎರಡೂ ಹೊಡೆತಗಳಿಗೆ ಪ್ರಸಿದ್ಧರು. ಅತ್ಯಂತ ಚುರುಕಿನ ಪಾದದ ಚಲನೆಯಿಂದ ಇಡೀ ಕೋರ್ಟು ಆಕ್ರಮಿಸಿಕೊಳ್ಳುವ ರೀತಿಯಿದೆಯಲ್ಲ ಅದು ಸೂಪರ್ಬ್. ಅತ್ಯಂತ ದೀರ್ಘ ಕಾಲದ ಏಸ್ ಎಸೆದು ಗೆದ್ದ ದಾಖಲೆ ಕೂಡ ಆಕೆಯ ಹೆಸರಲ್ಲಿದೆ.
ಏನಿದ್ದರೂ ಟೆನ್ನಿಸ್ ಜಗತ್ತಿನ ಮಿಂಚು ಇನ್ನು ಕೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಅನ್ನುವುದು ಟೆನ್ನಿಸ್ ಪ್ರಿಯರಿಗೆ ಬೇಸರದ ಸಂಗತಿ. ಆಕೆಯ ದಿಟ್ಟತನ, ಧೈರ್ಯ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿಗೆ ಯಾರಾದರೂ ತಲೆ ಬಾಗಬೇಕು.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top