ವಿದೇಶಿ ಮಾಧ್ಯಮಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ತರಾಟೆ
ಹೊಸದಿಲ್ಲಿ : ಭಾರತ ಸರ್ಕಾರವನ್ನು ಪದೇ ಪದೆ ಹಿಂದೂ ರಾಷ್ಟ್ರೀಯತಾವಾದಿ ಎಂದು ಕರೆಯುತ್ತಿರುವ ವಿದೇಶಿ ಮಾಧ್ಯಮಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನು ಹಿಂದೂ ರಾಷ್ಟ್ರೀಯತಾವಾದಿ ಎಂದು ಉಲ್ಲೇಖಿಸುತ್ತವೆ. ಆದರೆ ಅಮೆರಿಕ ಹಾಗೂ ಇತರ ಯುರೋಪ್ ರಾಷ್ಟ್ರಗಳ ಸರ್ಕಾರಗಳನ್ನು ಅವರು ಕ್ರಿಶ್ಚಿಯನ್ ರಾಷ್ಟ್ರವಾದಿ ಎಂದೇಕೆ ಕರೆಯುವುದಿಲ್ಲ ಎಂದು ತಿಳಿಯದಾಗಿದೆ ಎಂದು ಡಾ.ಎಸ್. ಜೈಶಂಕರ್ ಪ್ರಶ್ನಿಸಿದ್ದಾರೆ.
ವಿದೇಶಿ ಮಾಧ್ಯಮಗಳು ಧರ್ಮ ವಿಶೇಷಣ ಪದಗಳನ್ನು ಭಾರತಕ್ಕೆ ಮಾತ್ರ ಸಿಮೀತಗೊಳಿಸಿವೆ. ಆದರೆ ಭಾರತ ಇಡೀ ವಿಶ್ವಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುತ್ತದೆ ಎಂಬುದು ಅವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಜೈಶಂಕರ್ ಕಿಡಿಕಾರಿದ್ದಾರೆ.
ಜಾಗತಿಕ ಒಳಿತಿಗಾಗಿ ಭಾರತದ ಪರಿಶ್ರಮವನ್ನು ವಿದೇಶಿ ಮಾಧ್ಯಮಗಳು ಗುರುತಿಸಬೇಕು.ಕಳೆದ 9 ವರ್ಷಗಳ ದೇಶದ ರಾಜಕೀಯ ಪಯಣವನ್ನು ಅವಲೋಕಿಸಿದರೆ, ಸರ್ಕಾರ ಹೆಚ್ಚು ರಾಷ್ಟ್ರವಾದಿ ವಿಚಾರಗಳನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ನಮಗೆ ಹೆಮ್ಮೆಯ ವಿಷಯವೇ ಹೊರತು, ಇದಕ್ಕಾಗಿ ಕ್ಷಮೆಯಾಚಿಸುವ ಅಗತ್ಯ ಖಂಡಿತ ಇಲ್ಲ. ಸರ್ಕಾರ ನಡೆಸುತ್ತಿರುವ ಇದೇ ರಾಷ್ಟ್ರೀಯವಾದಿಗಳು, ವಿದೇಶಗಳಿಗೆ ಮತ್ತು ಇತರ ದೇಶಗಳಲ್ಲಿನ ವಿಪತ್ತು ಸಂದರ್ಭಗಳಲ್ಲಿ ನೆರವು ಒದಗಿಸಿದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದು ಜೈಶಂಕರ್ ಹೇಳಿದ್ದಾರೆ.
ಮುಂದಿನ ಬಾರಿ ನೀವು ವಿದೇಶಿ ಪತ್ರಿಕೆಗಳಲ್ಲಿ ಭಾರತ ಸರ್ಕಾರವನ್ನು ಹಿಂದೂ ರಾಷ್ಟ್ರೀಯತಾವಾದಿ ಎಂದು ಉಲ್ಲೇಖಿಸಿರುವುದನ್ನು ಓದಿ ಆಶ್ಚರ್ಯಪಡಬೇಡಿ, ಬದಲಿಗೆ ಸಂತಸ ವ್ಯಕ್ತಪಡಿಸಿ. ಏಕೆಂದರೆ ಇದೇ ಹಿಂದೂ ರಾಷ್ಟ್ರೀಯತಾವಾದಿಗಳು ಇಡೀ ಜಗತ್ತಿಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಜೈಶಂಕರ್ ದೇಶವಾಸಿಗಳಿಗೆ ಮನವಿ ಮಾಡಿದರು.