ಎಲ್‌ಐಸಿಗೆ 18,000 ಕೋ.ರೂ. ನಷ್ಟ
ಅದಾನಿ ಕಂಪನಿಗಳ ಹೂಡಿಕೆದಾರರು ಕಳೆದುಕೊಂಡದ್ದು 15 ಲಕ್ಷ ಕೋ. ರೂ.
ಮುಂಬಯಿ : ಅದಾನಿ ಸಮೂಹ ಕಂಪನಿಗಳ ಷೇರು ಮೌಲ್ಯದಲ್ಲಿ ಕಾಣುತ್ತಿರುವ ಕುಸಿತದಿಂದ ಹೂಡಿಕೆದಾರರು ತತ್ತರಿಸಿ ಹೋಗಿದ್ದಾರೆ. ಕೇವಲ ಎರಡು ವಹಿವಾಟು ಅವಧಿಗಳಲ್ಲಿ ಅದಾನಿ ಗ್ರೂಪ್‌ನ ಹೂಡಿಕೆದಾರರ ಷೇರು ಮೌಲ್ಯಗಳಲ್ಲಿ ಭಾರಿ ಕುಸಿತವಾಗಿದೆ. ದೇಶದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರರಾದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಕೂಡ ಅದಾನಿ ಷೇರು ಕುಸಿತದಿಂದ ಸಾವಿರಾರು ಕೋ. ರೂ. ನಷ್ಟ ಅನುಭವಿಸಿದೆ. ಅದಾನಿ ಸಮೂಹದ ಷೇರುಗಳಲ್ಲಿ ಎಲ್‌ಐಸಿ 81,268 ಕೋಟಿ ರೂ. ಹೂಡಿಕೆ ಮಾಡಿತ್ತು. ಇದು 62,621 ಕೋಟಿ ರೂ. ಕುಸಿದು ಎಲ್ಐಸಿ 18,647 ಕೋಟಿ ರೂ. ನಷ್ಟಅನುಭವಿಸಿದೆ.
ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಸಿಮೆಂಟ್ ಮೇಜರ್ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಸೇರಿ ಎಲ್ಲ ಕಂಪನಿಗಳ ಷೇರು ಮೌಲ್ಯ ಶೇ.19 ರಿಂದ ಶೇ.27 ರಷ್ಟು ಕುಸಿತ ಕಂಡು ಹೂಡಿಕೆದಾರರಿಗೆ ಲಕ್ಷ ಕೋಟಿಗಳಲ್ಲಿ ನಷ್ಟವಾಗಿದೆ.
ಲೆಕ್ಕಪತ್ರ ವಂಚನೆ ಆರೋಪ
ಕಳೆದ ಕೆಲವು ದಶಕಗಳ ಅವಧಿಯಲ್ಲಿ ಅದಾನಿ ಗ್ರೂಪ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಗುಂಪಿನ ಷೇರುಗಳು ಕುಸಿತ ಕಂಡಿವೆ. ಅದಾನಿ ಸಮೂಹದ ಸಿಎಫ್‌ಒ ಜುಗೇಶಿಂದರ್ ಸಿಂಗ್ ಅವರು ‘ವರದಿ ಆಯ್ದ ತಪ್ಪು ಮಾಹಿತಿ ಮತ್ತು ಹಳೆಯ, ಆಧಾರರಹಿತ ಮತ್ತು ಅಪಖ್ಯಾತಿಯ ಆರೋಪಗಳ ದುರುದ್ದೇಶಪೂರಿತ ಸಂಯೋಜನೆಯಾಗಿದ್ದು, ಇದನ್ನು ಭಾರತದ ಅತ್ಯುನ್ನತ ನ್ಯಾಯಾಲಯಗಳು ಪರೀಕ್ಷಿಸಿವೆ ತಿರಸ್ಕರಿಸಿವೆ. ಅದಾನಿ ಗ್ರೂಪ್‌ನ ಪ್ರತಿಷ್ಠೆಯನ್ನು ಹಾಳುಮಾಡುವ ಲಜ್ಜೆಗೆಟ್ಟ, ದುರುದ್ದೇಶವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಲಾದ ಅದಾನಿ ಸಮೂಹದ 10 ಕಂಪನಿಗಳ ಮಾರುಕಟ್ಟೆ ಬಂಡವಾಳ 19 ಲಕ್ಷ ಕೋ. ರೂ.ಯಿಂದ ರೂ 4 ಲಕ್ಷ ಕೋ.ರೂ.ಗೆ ಇಳಿದಿದ್ದು, ಹೂಡಿಕೆದಾರರು 15 ಲಕ್ಷ ಕೋ.ರೂ. ನಷ್ಟ ಅನುಭವಿಸಿದ್ದಾರೆ. ಷೇರು ಮಾರುಕಟ್ಟೆ ಭಾಷೆಯಲ್ಲಿ ಇದನ್ನು ಬ್ಲಡ್‌ಬಾತ್ ಅಥವಾ ರಕ್ತದೋಕುಳಿ ಎಂದು ಬಣ್ಣಿಸಲಾಗುತ್ತದೆ.