ಪುತ್ತೂರು : ಕರ್ನಾಟಕ ರಾಜ್ಯ ಉಪ ವಲಯಾರಣ್ಯಾಧಿಕಾರಿಗಳ ಸಂಘದ ಮಂಗಳೂರು ವಿಭಾಗದ ೨೦೨೨ನೇ ಸಾಲಿನ ಮಹಾಸಭೆ ಹಾಗೂ ೨೦೨೩ನೇ ಸಾಲಿನ ದಿನಚರಿ ಬಿಡುಗಡೆ ಸಮಾರಂಭ ಶನಿವಾರ ದರ್ಬೆ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ದಿನಚರಿ ಬಿಡುಗಡೆ ಮಾಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಮಂಗಳೂರು ವಿಭಾಗಕ್ಕೆ ಪ್ರತ್ಯೇಕ ಸಮಸ್ಯೆಯಿದೆ. ಇದರ ಕುರಿತು ಸಿ.ಸಿ ಪಾಟೀಲ್ ಅರಣ್ಯ ಸಚಿವರಿರುವಾಗಲೇ ಚರ್ಚಿಸಲಾಗಿದೆ. ಈಗ ಅರಣ್ಯ ಇಲಾಖೆಯು ಮುಖ್ಯ ಮಂತ್ರಿಯವರಲ್ಲಿಯೇ ಇದ್ದು ಇಲಾಖೆ ಸಮಸ್ಯೆಗಳ ಸರಕಾರದ ಹಂತಗಳಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು. ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಹಾನಿ, ಮೃತಪಟ್ಟವರಿಗೆ ಪರಿಹಾರ ನೀಡಲು ಈಗಾಗಲೇ ಚರ್ಚಿಸಲಾಗಿದೆ. ಕರಾವಳಿ ಭಾಗದಲ್ಲಿ ಅರಣ್ಯ ಪ್ರದೇಶಗಳಿಂದ ಸಮಸ್ಯೆ ಉಂಟಾಗುತ್ತಿದ್ದು ಈ ಭಾಗದ ಎಲ್ಲಾ ಶಾಸಕರು ಸೇರಿ ಚರ್ಚಿಸಲಾಗಿದೆ. ಜನರಿಗೆ ಅನುಕೂಲ ಕಲ್ಪಸುವುದು ಹಾಗೂ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಮಂಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಾಂತ್ರಿಕ ಸಹಾಯಕ ಸುಬ್ರಹ್ಮಣ್ಯ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಅರಣ್ಯ ಇಲಾಖೆ ಬಹಳಷ್ಟು ಮುಖ್ಯವಾದ ಇಲಾಖೆ. ಇತರ ಇಲಾಖೆಗಳು ಜನರ ರಕ್ಷಣೆಗಿದ್ದರೆ ಅರಣ್ಯ ಇಲಾಖೆಯು ಜನರ ರಕ್ಷಣೆಯ ಜೊತೆಗೆ ಅರಣ್ಯ ಹಾಗೂ ಎಲ್ಲಾ ರೀತಿಯ ಜೀವ ವೈವಿದ್ಯವನ್ನು ರಕ್ಷಣೆ ಮಾಡುವವರು. ಅರಣ್ಯ ಇಲಾಖೆ ಪ್ರಕೃತಿ ರಕ್ಷಣೆಯಾಗಿದೆ. ಈ ಸಂದರ್ಭದಲ್ಲಿ ಜನರಿಗೆ ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಾದರೂ ನಾವು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಮಂಗಳೂರು ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ, ಸಂಘ ಸಂಘಟನೆಗೆ ಮಾತ್ರ ಸೀಮಿತವಾಗಿರದೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಅರಣ್ಯ ಸಂರಕ್ಷಣೆಯ ಮಹತ್ವವನ್ನು ಕಾಂತಾರ ಚಲನ ಚಿತ್ರದಲ್ಲಿ ಉತ್ತಮ ಸಂದೇಶ ನೀಡಿದೆ. ಅರಣ್ಯ ಇಲಾಖೆಯ ಕರ್ತವ್ಯವನ್ನು ದೈವ ದೇವರು ಮೆಚ್ಚುವಂತಾಗಿದೆ. ಕಾಂತಾರದಿಂದ ಇಲಾಖೆಯ ಗೌರವ ವೃದ್ಧಿಯಾಗಿದ್ದು ಶ್ರದ್ಧೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಸಹಾಯಕ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ, ಸುಳ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯದ ವಲಯಾರಣ್ಯಾಧಿಕಾರಿ ಮಂಜುನಾಥ, ಬೆಳ್ತಂಗಡಿ ವಲಯಾರಣ್ಯಾಧಿಕಾರಿ ತ್ಯಾಗರಾಜ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೃಷ್ಣಪ್ಪ ಕೆ. ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್‌ರವರು ಮಾತನಾಡಿದರು.
ಗುರುಪ್ರಿಯ ನಾಯಕ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಸಂದೀಪ್ ಸಿ.ಕೆ. ಸ್ವಾಗತಿಸಿದರು. ಉಪ್ಪಿನಂಗಡಿ ವಲಯದ ಉಪ ವಲಯಾರಣ್ಯಾಧಿಕಾರಿ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರು ಬಿ.ಜಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಉಪ ವಲಯಾರಣ್ಯಾಧಿಕಾರಿಗಳಾದ ರವಿಪ್ರಕಾಶ್, ಪ್ರಸಾದ್ ಕೆ.ಜೆ., ತ್ಯಾಗರಾಜ್, ಸುನೀಲ್ ಕುಮಾರ್, ವೆಂಕಟೇಶ್, ಜಗರಾಜ್, ಅಶೋಕ್, ಮನೋಜ್, ಚಂದ್ರು ಪಿ.ಜಿ., ಬಿ.ಟಿ ಪ್ರಕಾಶ್ ರೈ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯ ನಾಯಕ್ ರವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.