ಪುತ್ತೂರು: ಇಂದು ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವನ್ನು ಅಸ್ಥಿತ್ವಗೊಳಿಸಿದ ದಿನ. ಜನರು ತಮ್ಮ ಸ್ವಂತ ಆಯ್ಕೆಯ ಪ್ರಕಾರ ದೇಶದ ಆಡಳಿತಗಾರರನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ನಾವು ಸಂವೇದನಾಶೀಲರಾಗಿ ಆಯ್ಕೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್. ಹೇಳಿದರು.
ಕಾಲೇಜಿನಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮಾಡಿ ಮಾತನಾಡಿದರು.ಅಸಂಖ್ಯಾತ ನೇತಾರರು, ತ್ಯಾಗ ಬಲಿದಾನದ ಮೂಲಕ ಸ್ವಾತಂತ್ಯವನ್ನು ಗಳಿಸಿಕೊಟ್ಟರು. ವಿಶ್ವದ ಅತಿದೊಡ್ಡ ಸಂವಿಧಾನವನ್ನು ರೂಪಿಸುವ ಮೂಲಕ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಿದರು. ಈ ಸಂವಿಧಾನವನ್ನು ಗೌರವಿಸಿ ಉಳಿಸಿ ಬೆಳೆಸುವ ಮಹತ್ತರ ಜವಾಬ್ಧಾರಿ ನಮ್ಮ ಮೇಲಿದೆ. ಈ ಜವಾಬ್ಧಾರಿಯನ್ನು ನಿರ್ವಹಿಸುತ್ತಾ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ ಕೆ, ಇದೊಂದು ರಾಷ್ಟ್ರೀಯ ಹಬ್ಬ. ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಸಂವಿಧಾನ. ಇದಕ್ಕಾಗಿ ಶ್ರಮಿಸಿದವರನ್ನು ನೆನೆಯುತ್ತಾ ಅದರ ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಉಪಸ್ಥಿತರಿದ್ದರು. ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಪ್ರೊ. ಸೌಮ್ಯಾ ಅನಿಲ್ ವಂದಿಸಿದರು. ಹರಿಪ್ರಸಾದ್ ದೈಲಾ ಕಾರ್ಯಕ್ರಮ ನಿರೂಪಿಸಿದರು.