ಹಿರಿಯರನ್ನು, ಅವರ ಪರಿಶ್ರಮವನ್ನು ಮರೆಯದಿರೋಣ | ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವದಲ್ಲಿ ಗಿರೀಶ್ ನಂದನ್

ಪುತ್ತೂರು: ಭಾಷೆ, ಪಂಗಡ ಮೀರಿ ನಮ್ಮ ದೇಶವನ್ನು ಹಿರಿಯರು ಒಂದಾಗಿಸಿದರು. ಅವರ ಪರಿಶ್ರಮವನ್ನು ಹಾಗೂ ಅವರನ್ನು ಮರೆಯದಿರೋಣ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ ಮಾತನಾಡಿದರು.

ಭಾರತ ಒಂದೊಮ್ಮೆ ಹರಿದು ಹಂಚಿ ಹೋಗಿತ್ತು. ಇದನ್ನು ಒಂದು ಮಾಡಲು ಸಾಕಷ್ಟು ಶ್ರಮ ವಹಿಸಬೇಕಾಯಿತು. ಆಗ ಎದುರಾದ ಹಲವು ಸಮಸ್ಯೆಗಳನ್ನು ಮೀರಿ, ನಮ್ಮ ಹಿರಿಯರು ದೇಶವನ್ನು ಒಂದಾಗಿಸಿದರು. ಹೀಗೆ ಗಳಿಸಿಕೊಟ್ಟ ನಮ್ಮ ದೇಶ ಇಂದು ಶೈಕ್ಷಣಿಕ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳವಣಿಗೆ ಕಂಡಿದೆ. ಸಂವಿಧಾನವನ್ನು ನಮ್ಮ ದೇಶಕ್ಕೆ ಅಂದರೆ ನಮಗೇ ಅರ್ಪಣೆ ಮಾಡಿ 7 ದಶಕಗಳು ಕಳೆದವು. ಇದನ್ನು ನೆನಪಿಸುವ ಮೂಲಕ, ನಮ್ಮ ಹಿರಿಯರನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳಬೇಕಿದೆ ಎಂದರು.































 
 

ಅಭಿವೃದ್ಧಿ ಪಥದಲ್ಲಿ ಭಾರತ: ಶಾಸಕ ಸಂಜೀವ ಮಠಂದೂರು

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತವು ಇಂದು ರಾಷ್ಟ್ರಭಕ್ತಿಯೊಂದಿಗೆ ರಾಷ್ಟ್ರೋತ್ಥಾನದ ಕಡೆಗೆ ಸಾಗುತ್ತಿದೆ. ಭಾರತ ಜಗದ್ಗುರುವಾಗುವತ್ತ ಸಾಗುತ್ತಿದೆ. ಜಿ 20ಯ ನಾಯಕತ್ವ ವಹಿಸಿಕೊಂಡು ತನ್ನ ಸ್ಥಾನಮಾನ ಹೆಚ್ಚಿಸಿಕೊಂಡಿದೆ. ಕಳೆದ 10 ವರ್ಷಗಳಿಂದ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಕಡೆ ಮುಖ ಮಾಡಿದೆ. ದೇಶ ಅಭಿವೃದ್ಧಿಯತ್ತ ಸಾಗುತ್ತಿರಬೇಕಾದರೆ, ಪ್ರಜೆಗಳಾದ ನಮಗೂ ಕೆಲ ಕರ್ತವ್ಯಗಳನ್ನು ಪಾಲಿಸಬೇಕಾಗಿದೆ. ಆ ಕರ್ತವ್ಯಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಪ್ರಜಾಪ್ರಭುತ್ವಕ್ಕೆ ನಿಜಾರ್ಥ ಪ್ರಾಪ್ತವಾಗುತ್ತದೆ ಎಂದರು.

ಪುತ್ತೂರು ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಉಪವಿಭಾಗದ ಪೊಲೀಸ್ ಅಧೀಕ್ಷಕ ವೀರಯ್ಯ ಹಿರೇಮಠ್ ಮಾತನಾಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಭಾ ಕಾರ್ಯಕ್ರಮದಲ್ಲಿ ನೌಕಾ ಸೇನೆಯ ಸಿಬ್ಬಂದಿಯಾದ ರಾಷ್ಟ್ರೀಯ ಈಜು ಪಟು ಪುತ್ತೂರಿನ ವೈಷ್ಣವ್ ಹೆಗ್ಡೆ, ಗ್ರಾಮ ೧ ಕೇಂದ್ರದ ನೇತೃತ್ವ ವಹಿಸಿ ಅತೀ ಹೆಚ್ಚು ಅರ್ಜಿ ವಿಲೇವಾರಿ ಮಾಡಿರುವ ಮುಸ್ತಫಾ, ಅಶೋಕ್ ಎಚ್. ಮತ್ತು ಭವಿಷ್ಯ ರೈ ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ನಾಲ್ವರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು.

ತಹಸೀಲ್ದಾರ್ ನಿಸರ್ಗಪ್ರಿಯ ಜೆ.,  ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಪೌರಾಯುಕ್ತ ಮಧು ಎಸ್. ಮನೋಹರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಲೋಕೋಪಯೋಗಿ ಇಲಾಖೆಯ ಎಇಇ ರಾಜಾರಾಮ್, ಸಿಡಿಪಿಒ ಶ್ರೀಲತಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್, ಉಪತಹಸೀಲ್ದಾರ್ ಸುಲೋಚನಾ ಸೇರಿಂದತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ನಗರ ಠಾಣೆಯ ಎಸ್ಐ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ ಅವರ ಸಂಯೋಜನೆಯಲ್ಲಿ ಪಥ ಸಂಚಲನ ನಡೆಯಿತು. ಪುತ್ತೂರಿನ ಪೊಲೀಸ್ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ವಿವಿಧ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಎನ್ಸಿಸಿ, ಆರ್ಮಿ, ಏರ್ವಿಂಗ್, ನೇವಿ, ಸೇವಾದಳ, ಸ್ಕೌಟ್ಸ್ & ಗೈಡ್ಸ್ ಘಟಕಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿತ್ತು. ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top