ಜ. 28ರಂದು 30ನೇ ವರ್ಷದ ಹೊನಲು ಬೆಳಕಿನ ಪುತ್ತೂರು “ಕೋಟಿ-ಚೆನ್ನಯ” ಜೋಡುಕರೆ ಕಂಬಳ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ. 28 ಹಾಗೂ 29ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವ ಮಾರ್ಗದರ್ಶಕಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅವರ ಗೌರವಾಧ್ಯಕ್ಷತೆಯಲ್ಲಿ, ಶಕುಂತಳಾ ಟಿ. ಶೆಟ್ಟಿ ಅವರ ಗೌರವ ಉಪಸ್ಥಿತಿಯಲ್ಲಿ ಈ ಬಾರಿ 30ನೇ ವರ್ಷದ ಕಂಬಳ ಕೀರ್ತಿಶೇಷ ಎನ್. ಮುತ್ತಪ್ಪ ರೈ ಸ್ಮರಣೆಯೊಂದಿಗೆ, ಕೀರ್ತಿಶೇಷ ಜಯಂತ್ ರೈ ವೇದಿಕೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಜ. 28 ಶನಿವಾರ ಬೆಳಗ್ಗೆ 10.35 ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಂಬಳಕ್ಕೆ ಚಾಲನೆ ನೀಡಲಿದ್ದು, ಬಳಿಕ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸುವರು. ಮುಖ್ಯ ಅತಿಥಿಗಳಾಗಿ ಹಲವಾರು ಧಾರ್ಮಿಕ, ಸಾಮಾಜಿಕ, ಮುಖಂಡರುಗಳು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ































 
 

ಅಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಎಂಆರ್ಜಿ ಬಂಜಾರ ಗ್ರೂಪ್ಸ್ನ ಚೆಯರ್ಮ್ಯಾನ್ ಪ್ರಕಾಶ್ ಶೆಟ್ಟಿ ವಹಿಸಲಿದ್ದು, ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.  ಮುಖ್ಯ ಅತಿಥಿಗಳಾಗಿ ಶಾಸಕರಾದ ಯು.ಟಿ. ಖಾದರ್, ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಮತ್ತಿತರ ರಾಜಕೀಯ, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಸ ಶೆಟ್ಟಿ ಮಾತನಾಡಿ, ಈ ಬಾರಿಯ ಕಂಬಳದಲ್ಲಿ ವಿಶೇಷ ಆಕರ್ಷಣೆಯಾಗಿ ಸಂಗೀತ ನಿರ್ದೇಶಕ ಗುರುಕಿರಣ್, ಚಿತ್ರನಟರಾದ ರೂಪೇಶ್ ಶೆಟ್ಟಿ, ವಜ್ರಧೀರ್ ಜೈನ್, ಅದಿತಿ ಪ್ರಭುದೇವ, ಸಂಗೀತ ಶೃಂಗೇರಿ, ಸಾನಿಯ ಅಯ್ಯರ್, ದೀಪಕ್ ರೈ ಪಾಣಾಜೆ, ನಿರ್ಮಾಪಕ ರವಿ ರೈ ಕಳಶ, ಡೈಜಿವರ್ಲ್ಡ್ ನ ವಾಲ್ಟರ್ ನಂದಳಿಕೆ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಎನ್.ಸುಧಾಕರ ಶೆಟ್ಟಿ (ಧಾರ್ಮಿಕ), ಅಪ್ಪು ಯಾನೆ ವಲೇqರಿಯನ್ ಡೇಸಾ ಅಲ್ಲಿಪಾದೆ (ಕಂಬಳ), ಆಕಾಶ್ ಐತಾಳ್ (ಕ್ರೀಡಾ), ಸತೀಶ್ ದೇವಾಡಿಗ (ಹಿರಿಯ ಕಂಬಳ ಓಟಗಾರ) ಹಾಗೂ ಶ್ರೀಧರ್ ಮಾರೋಡಿ (ಕ್ರೀಡಾರತ್ನ ಪುರಸ್ಕೃತ ಕಂಬಳ ಓಟಗಾರ) ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಕನೆಹಲಗೆ, ಅಡ್ಡಹಲಗೆ, ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ ಆರು ವಿಭಾಗಗಳಲ್ಲಿ ಕಂಬಳ ನಡೆಯಲಿದ್ದು, ಈ ಬಾರಿ ೨೦೦ ಕ್ಕೂ ಅಧಿಕ ಜೋಡಿ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕೋಣದ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿ-ಚೆನ್ನಯ ಟ್ರೋಫಿ ನೀಡಲಾಗುವುದು. ಕಂಬಳ ವೀಕ್ಷಣೆಗೆ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ, ಆಕರ್ಷಕ ವೇದಿಕೆ, ಕೋಣಗಳ ಯಜಮಾನರಿಗೆ ಪ್ರತ್ಯೇಕ ಚಪ್ಪರದ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ವರ್ಷಕ್ಕೊಂದು ಹೊಸ ಸೇರ್ಪಡೆಯೊಂದಿಗೆ ಕಂಬಳ ಕ್ಷೇತ್ರದಲ್ಲೇ ಶ್ರೇಷ್ಠ ಕಂಬಳ ಎಂದು ಹೆಸರು ಪಡೆದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಕೋಶಾಧಿಕಾರಿ ಈಶ್ಬರ ಭಟ್ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top