ರಕ್ತದಾನ ಮಾಡುವುದು ಆರೋಗ್ಯ ಸಹಕಾರಿ; ಡಾ. ರಾಮಚಂದ್ರ
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ನೇತೃತ್ವದಲ್ಲಿ ರೆಡ್ ಕ್ರಾಸ್ ಪುತ್ತೂರು ಘಟಕ, ರೋಟರಿ ಕ್ಲಬ್ ಪುತ್ತೂರು ಹಾಗೂ ಪುತ್ತೂರಿನ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವು ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ರಕ್ತದಾನದ ಕುರಿತು ವಿಶೇಷ ಉಪನ್ಯಾಸ ನೀಡಿದ ಪುತ್ತೂರಿನ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಮಾತನಾಡಿ, ಸರಿಯಾದ ಕಾಲಕ್ಕೆ ರಕ್ತ ಸಿಗದೇ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶೇಷ ಕಾಯಿಲೆಗಳಿಂದ ಬಳಲುವರು, ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ತುಂಬಾ ಅಗತ್ಯ ಆಗಿರುತ್ತದೆ ಎಂದು ಹೇಳಿದರು.“18 ವರ್ಷ ಮೇಲ್ಪಟ್ಟ, 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. ಯುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳುವ ಮೂಲಕ ಇತರರಿಗೆ ಮಾದರಿ ಆಗಬೇಕು ಎಂದು ಹೇಳಿದ್ದಾರೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ವಹಿಸಿದ್ದರು.ವೇದಿಕೆಯಲ್ಲಿ ರೆಡ್ ಕ್ರಾಸ್ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಘಟಕದ ಅಧ್ಯಕ್ಷರಾದ ಪ್ರಶಾಂತ್ ಶೆಣೈ, ಝೋನಲ್ ಲೆಪ್ಟಿನೆಂಟ್ ರೋಟರಿ ಕ್ಲಬ್ ನ ಪ್ರಮೋದ್ ಮಲ್ಲಾರ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ನವೀನ್ ಕುಮಾರ್ ಎಂ.ಕೆ., ತಿಲಕ್ ಟಿ ಉಪಸ್ಥಿತರಿದ್ದರು. ಯೂತ್ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸಂಯೋಜಕ ಆಯುಷ್ ಸ್ವಾಗತಿಸಿ, ಇನ್ನೊರ್ವ ಸಂಯೋಜಕಿ ಕು. ರಶ್ಮಿ ವಂದಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿ ಶ್ರೇಯಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ರಕ್ತದಾನವು ನಡೆಯಿತು. ಒಟ್ಟು 46 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.