ಚಿತ್ರ ವೀಕ್ಷಿಸಿದವರ ಮೇಲೆ ಕಲ್ಲು ತೂರಾಟ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಕುರಿತಾದ ವಿವಾದಗ್ರಸ್ತ ಸಾಕ್ಷ್ಯಚಿತ್ರ ವೀಕ್ಷಣೆ ಜೆಎನ್ಯು ಕ್ಯಾಂಪಸ್ನಲ್ಲಿ ಉದ್ವಿಗ್ನತೆ ಕಾರಣವಾಗಿದೆ. ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟದ ಆರೋಪ ಕೇಳಿ ಬಂದಿದೆ. ವಿಶ್ವವಿದ್ಯಾನಿಲಯದಲ್ಲಿ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕೆಲವು ವಿದ್ಯಾರ್ಥಿಗಳ ಹಾಕಿಕೊಂಡ ಯೋಜನೆ ವಿಫಲವಾಗಿದೆ. ಸಾಕ್ಷ್ಯಚಿತ್ರ ವೀಕ್ಷಿಸದಂತೆ ತಡೆಯಲು ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು ಫೋನ್ಗಳಲ್ಲಿ ಸಾಕ್ಷ್ಯಚಿತ್ರ ನೋಡುತ್ತಿದ್ದವರ ಮೇಲೆ ಎಬಿವಿಪಿಯವರು ಕಲ್ಲು ತೂರಿದ್ದಾರೆ ಎನ್ನಲಾಗಿದೆ.
ಎಡಪಂಥೀಯ ಬೆಂಬಲಿಗರು ಇಬ್ಬರು ವಿದ್ಯಾರ್ಥಿಗಳನ್ನು ಹಿಡಿದಿದ್ದು ಅವರು ಕಲ್ಲುಗಳನ್ನು ಎಸೆಯುತ್ತಿದ್ದರು ಎಂದು ದೂರಿದ್ದಾರೆ. ಇವರಿಬ್ಬರು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗ ಎಬಿವಿಪಿಗೆ ಸೇರಿದವರು ಎಂದು ಅವರು ಹೇಳಿದ್ದಾರೆ. ಎಬಿವಿಪಿಯ ವಿದ್ಯಾರ್ಥಿಗಳು ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಹೇಳಿದ್ದಾರೆ.
ಜೆಎನ್ಯು ಆಡಳಿತ ಸ್ಕ್ರೀನಿಂಗ್ಗೆ ಅನುಮತಿ ನೀಡಲು ನಿರಾಕರಿಸಿತ್ತು. ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಸ್ಕ್ರೀನಿಂಗ್ ವಿಶ್ವವಿದ್ಯಾಲಯದ ಯಾವುದೇ ನಿಯಮವನ್ನು ಉಲ್ಲಂಘಿಸುವುದಿಲ್ಲ ಅಥವಾ ಕೋಮು ಸೌಹಾರ್ದತೆಗೆ ಧಕ್ಕೆ ತರುವುದಿಲ್ಲ ಎಂದು ವಿದ್ಯಾರ್ಥಿಗಳು ವಾದಿಸಿದರು. ಸ್ಕ್ರೀನಿಂಗ್ ರಾತ್ರಿ 9 ಗಂಟೆಗೆ ನಿಗದಿಯಾಗಿತ್ತು, ಆದರೆ ಅದಕ್ಕೂ ಮೊದಲು, ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸ್ಥಗಿತಗೊಂಡಿತು. ನಂತರ ವಿದ್ಯಾರ್ಥಿಗಳು ಕ್ಯಾಂಪಸ್ನೊಳಗಿನ ಕೆಫೆಟೇರಿಯಾಕ್ಕೆ ತೆರಳಿದರು. ಅಲ್ಲಿ ಅವರು ತಮ್ಮ ಸೆಲ್ಫೋನ್ಗಳು ಮತ್ತು ಲ್ಯಾಪ್ಟಾಪ್ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು. ಅವರು ಸಾಕ್ಷ್ಯಚಿತ್ರವನ್ನು ವೀಕ್ಷಿಸುತ್ತಿದ್ದಾಗ, ಪೊದೆಗಳ ಹಿಂದಿನಿಂದ ಅವರ ಮೇಲೆ ಕೆಲವು ಕಲ್ಲುಗಳನ್ನು ಎಸೆಯಲಾಯಿತು ಎಂದು ಮೂಲಗಳು ತಿಳಿಸಿವೆ. ನಂತರ, ಅವರು ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದರು.