ಪುತ್ತೂರು: ಪರ್ಪುಂಜ ಅಬೂನಜ ಸೋಶಿಯಲ್ ಫೋರಂ ವತಿಯಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ ಕಾರ್ಯಗಾರ ಪರ್ಪುಂಜದಲ್ಲಿ ನಡೆಯಿತು.
ಉಪನ್ಯಾಸಕ ಚಂದು ನಾಯ್ಕ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆದುಕೊಳ್ಳಬೇಕಾದರೆ ನಿರ್ದಿಷ್ಟ ಗುರಿ, ಸತತ ಪರಿಶ್ರಮ, ವಿಷಯದ ಬಗ್ಗೆ ಆಸಕ್ತಿ, ಸಾಧಿಸಬೇಕೆಂಬ ಛಲ ಅವಶ್ಯಕ. ಮಾತ್ರವಲ್ಲ ಆಳವಾದ ಅಧ್ಯಯನ ಅತೀ ಅಗತ್ಯ. ಇದಕ್ಕಾಗಿ ಪ್ರಾಥಮಿಕ, ಪ್ರೌಢಶಾಲಾ ಅವಧಿಯಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸರ್ವಜ್ಞ ಐಎಎಸ್ ಕೇಂದ್ರದ ನಿರ್ದೇಶಕ ಸುರೇಶ್ ಎಂ.ಎಸ್. ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ನೀಡಿದರು. ಗುರುಹಿರಿಯರ ಮಾರ್ಗದರ್ಶನವೊಂದಿದ್ದರೆ ಯಾವುದೇ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದರು.ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಬಶೀರ್ ಹರ್ಲಡ್ಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಉದ್ಯೋಗ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಡಿಮೆಯಾಗಿದೆ. ಅದರ ಮಾಹಿತಿಯನ್ನು ಪಡೆಯಲು ಈ ಕಾರ್ಯಾಗಾರ ತುಂಬಾ ಸಹಕಾರಿಯಾಗಲಿದೆ ಎಂದರು.
ಅಬೂನಜ ಸೋಷಿಯಲ್ ಫೋರಂ ಅಧ್ಯಕ್ಷ ಅಲ್ ಹಾಜ್ ಅಬೂನಜ ಉಸ್ತಾದ್ ಪರ್ಪುಂಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಯೋಜಕ ಅಬ್ದುಲ್ ರಹ್ಮಾನ್ ಶಾಂತಿಗೋಡು ಶುಭಹಾರೈಸಿದರು. ಡಾ. ಎಸ್. ಅಬೂಬಕ್ಕರ್ ಅರ್ಲಪದವು ಪ್ರಾಸ್ತಾವಿಕವಾಗಿ ಮಾತನಾಡಿದರು.ಅಶ್ರಿದ್ ಪರ್ಪುಂಜ ಸ್ವಾಗತಿಸಿ, ಅಶ್ರಫ್ ಪರ್ಪುಂಜ ವಂದಿಸಿದರು. ಸಜಿತ್ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು.