ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಬೆಳಿಸಿಕೊಳ್ಳಿ: ಮಿತ್ತಳಿಕೆ ಗಂಗಾಧರ್ ಶೆಟ್ಟಿ
ಪುತ್ತೂರು: ವಿದ್ಯಾರ್ಥಿಗಳು ಉತ್ತಮ ಅಭ್ಯಾಸದ ಜೊತೆಗೆ ನಾಯಕತ್ವ ಗುಣ ಅಳವಡಿಸಿಕೊಂಡಾಗ ಮಾತ್ರ ಸಮರ್ಥ ವ್ಯಕ್ತಿಯಾಗಿ ನಿರ್ಮಾಣವಾಗಲು ಸಾಧ್ಯ. ಅಂತಹ ಭವಿಷ್ಯವನ್ನು ರೂಪಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿಯಾಗಿಟ್ಟುಕೊಳ್ಳಿ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಬೆಂಗಳೂರಿನ ಹಿರಿಯ ನ್ಯಾಯವಾದಿ, ಸಿ.ಬಿ.ಐ.ನ ವಿಶೇಷ ಅಭಿಯೋಜಕರಾಗಿರುವ ಶ್ರೀ ಮಿತ್ತಳಿಕೆ ಗಂಗಾಧರ್ ಶೆಟ್ಟಿ ಹೇಳಿದರು. ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ 2022-23ಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಹಣಕ್ಕೆ ಏನೆಲ್ಲ ದೊರೆಯಲಿರುವ ಈ ಜಗತ್ತಿನಲ್ಲಿ ಜ್ಞಾನ ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಲು ವಿದ್ಯೆಯಿಂದ ಮಾತ್ರ ಸಾಧ್ಯವಾಗಿದೆ. ಅದು ತಮ್ಮಲ್ಲಿ ಪರಿಪೂರ್ಣವಾಗಿ ಒಲಿಯಬೇಕೆಂದರೆ ಕಠಿಣ ಪರಿಶ್ರಮ ಬಿಟ್ಟರೆ ಬೇರೊಂದು ಮಾರ್ಗವಿಲ್ಲ. ಕಾನೂನು ಕ್ಷೇತ್ರವು ಸದಾ ಚಲನೆಯಲ್ಲಿರುವ ಕ್ಷೇತ್ರವಾಗಿದ್ದು, ಪ್ರತಿಕ್ಷಣವೂ ಜ್ಞಾನವನ್ನು ಪಡೆಯುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಕಾನೂನು ಜ್ಞಾನವನ್ನು ಪಡೆಯಲು ಸದಾ ಪ್ರಯತ್ನಿಸಬೇಕು ಎಂದು ಹೇಳಿದರಲ್ಲದೇ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿವಿಧ ಸಾಧಕರ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ ಎಂ ಮಾತನಾಡಿ, ವಕೀಲ ವೃತ್ತಿಯಲ್ಲಿ ಸಾಧನೆ ಮಾಡಲು ನಿರಂತರ ಅಭ್ಯಾಸ ಅವಶ್ಯ. ಅಂತಹ ಸಾಧನೆ ಮಾಡಿದ ಇದೇ ಕಾಲೇಜಿನ ಇಬ್ಬರು ಹಿರಿಯ ವಿದ್ಯಾರ್ಥಿಗಳು ಇಂದು ನಮ್ಮೊಂದಿಗಿದ್ದಾರೆ. ಇಂಥಹ ಹಲವಾರು ಸಾಧಕರು ನಮಗೆ ಪ್ರೇರಣೆಯಾಗಿದ್ದಾರೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು, ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ನಮ್ಮ ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಯು ಅವಕಾಶವನ್ನು ಬಳಸಿಕೊಂಡು ಸಾಧಕರಾಗಿ ಎಂದು ಕರೆ ನೀಡಿದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಚೇತನ್ ನಾಯಕ್ ಮಾತನಾಡಿ, ಯುವಶಕ್ತಿ ಮನಸ್ಸು ಮಾಡಿದರೆ ದೇಶದಲ್ಲಿ ಸಾಕಷ್ಟು ಬದಲಾವಣೆ ತರಬಹುದು. ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಒಳ್ಳೆಯ ಸಮಾಜ ನಿರ್ಮಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಇದೇ ವೇಳೆ ನ್ಯಾಯಾಧೀಶರಾಗಿ ಅಯ್ಕೆಯಾದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ತಾಹಾಖಲೀಲ್ ಹಾಗೂ ಮುಖ್ಯ ಅತಿಥಿಗಳಾಗಿದ್ದ ಮಿತ್ತಳಿಕೆ ಗಂಗಾಧರ್ ಶೆಟ್ಟಿಯವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ತಾಹಾಖಲೀಲ್ ಕಾಲೇಜಿನ ಜೊತೆಗಿನ ಬಾಂಧವ್ಯ ಹಾಗೂ ತನ್ನ ಸಾಧನೆಯ ಹಾದಿಯನ್ನು ಬಿಚ್ಚಿಟ್ಟರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ಸಂಗೀತಾ ಎಸ್ ಎಂ. ವಿದ್ಯಾರ್ಥಿ ಪರಿಷತ್ ನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ, ವಿದ್ಯಾರ್ಥಿ ಪರಿಷತ್ ಜೊತೆ ಕಾರ್ಯದರ್ಶಿ ಪೂಜಾ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಭಿಷೇಕ್ ಲಾಲ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಜ್ವಲ್ ವಂದಿಸಿದರು. ವಿದ್ಯಾರ್ಥಿಗಳಾದ ಕು. ಶರಣ್ಯ ಹಾಗೂ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.