ಪುತ್ತೂರು: ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಧರ್ಮದ ಶಕ್ತಿಯನ್ನು ಅನಾವರಣ ಮಾಡಿ, ಮಾದರಿ ಸಮಾರಂಭ ಎಂಬ ಪ್ರಶಂಸೆಗೆ ಪಾತ್ರವಾಗಿದೆ.
ಎಲ್ಲಾ ಪಕ್ಷ ಮುಖಂಡರೂ ಭಾಗವಹಿಸಿದ್ದು ಪಕ್ಷಾತೀತ ಎಂದು ಸಾಬೀತಾದರೆ, ಎಲ್ಲಾ ಸಮುದಾಯದವರು ಭಾಗವಹಿಸುವ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಇಡೀ ಸಮಾಜಕ್ಕೆ ಮಾರ್ಗದರ್ಶಕ ಎನ್ನುವುದನ್ನು ರುಜುವಾತು ಪಡಿಸಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಂಸೆ ವ್ಯಕ್ತಪಡಿಸಿ, ಸಂದೇಶ ರವಾನೆ ಆಗುತ್ತಿತ್ತು.
ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪರಿಮಿತ. ಅದರ ದ್ಯೋತಕವಾಗಿ ಒಟ್ಟು ಕಾರ್ಯಕ್ರಮ ಆರಂಭವಾದದ್ದೇ, ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ. ಇದು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜ ಅವರಿಗೆ ಸಲ್ಲಿಸುವ ಗೌರವ ಎನ್ನುವುದೇ ಸಂಘಟಕರ ಅಭಿಮತ.
ಪುತ್ತೂರಿನ ಸಮಾವೇಶವನ್ನು ಬೃಹತ್ ಶೋಭಾಯಾತ್ರೆಯ ಮೂಲಕ ಆರಂಭಿಸಲಾಯಿತು. ಹೀಗೆ ಆರಂಭಗೊಂಡ ಸಮಾವೇಶ ಮಧ್ಯಾಹ್ನದ ಭೋಜನದೊಂದಿಗೆ ಸಮಾಪನಗೊಂಡಿತು. ಇದರ ನಡುವೆ ನಡೆದ ಜಯಂತ್ಯೋತ್ಸವ ಸಂಸ್ಮರಣೆ, ರಜತ ತುಲಾಭಾರ, ಗುರುವಂದನೆ, ಗ್ರಂಥ ಬಿಡುಗಡೆ, ಮುಖಂಡರ ಮಾತು, ಗುರುಗಳ ಆಶೀರ್ವಚನ ಎಲ್ಲವೂ ಸೊಗಸಾಗಿ ಮೂಡಿಬಂದಿತು. ಕಾರ್ಯಕ್ರಮದ ವ್ಯವಸ್ಥೆಯೂ ಅಷ್ಟೇ, ಎಲ್ಲಿಯೂ ಲೋಪವಾಗದಂತೆ ಅಚ್ಚುಕಟ್ಟಾಗಿ ಜೋಡಣೆಗೊಂಡಿತ್ತು. ಸಭಾವೇದಿಕೆ ಬಳಿಯಲ್ಲೇ ಹೊರೆಕಾಣಿಕೆ ಜೋಡಿಸಿಟ್ಟಿದ್ದು, ಎಲ್ಲರ ಗಮನ ಸೆಳೆಯುವಂತಿತ್ತು. ಈ ಭಾಗದ ಪ್ರಮುಖ ಬೆಳೆಯಾದ ತೆಂಗಿನಕಾಯಿ ಹಾಗೂ ಅಡಿಕೆಯ ರಾಶಿಯೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿತ್ತು.
ವ್ಯಕ್ತಿಯೊಳಗಿನ ಶಕ್ತಿ ಮರೆಯದಿರಿ: ಡಾ. ನಿರ್ಮಲಾನಂದನಾಥ ಶ್ರೀ
ರಜತ ತುಲಾಭಾರದ ಬಳಿಕ ಗುರುವಂದನೆ ಸ್ವೀಕರಿಸಿ ಆಶೀರ್ಚನ ನೀಡಿದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸರ್ವವನ್ನು ತ್ಯಾಗ ಮಾಡಿದ ಸಂತ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ವಿದ್ಯಾಸಂಸ್ಥೆ ನಿರ್ಮಾಣ ಮಾಡಿದರು. ಅವರ ಕೊಡುಗೆಯ ಫಲವಾಗಿ ಇಂದು ಸಂಸ್ಥಾನದ ವಿದ್ಯಾಸಂಸ್ಥೆಯಲ್ಲಿ 1.52 ಲಕ್ಷ ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬನ ಒಳಗೂ ಇಂತಹದ್ದೊಂದು ಚೈತನ್ಯ ಅಡಗಿದೆ. ಅದನ್ನು ಮರೆಯಬಾರದು. ಸದಾ ಎಚ್ಚರಿಸುತ್ತಾ, ಸಮಾಜಕ್ಕೆ ಕೊಡುಗೆ ನೀಡಲು ಬಳಸಿಕೊಳ್ಳಿ ಎಂದು ಹೇಳಿದರು.
ಎಲ್ಲವೂ ಗುರುಗಳ ಆಶೀರ್ವಾದ: ಡಾ. ಧರ್ಮಪಾಲನಾಥ ಶ್ರೀ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ವಿದ್ಯಾಭ್ಯಾಸ ನೀಡುವ ಜೊತೆಗೆ ಅರ್ಥಪೂರ್ಣವಾದ ಮೌಲ್ಯವನ್ನು ನೀಡುವ ಕಾರ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಾಡುತ್ತಾ ಬಂದಿದೆ. ಮೌಲ್ಯಯುತವಾದ ಜೀವನವನ್ನು ನಡೆಸುತ್ತಾ ಮುಂದೆ ಸಾಗಿದಾಗ ಸಾಧಕ ಎನಿಸಿಕೊಳ್ಳುತ್ತೇವೆ. ಇಂತಹ ಸಾಧನೆಯ ಹಾದಿ ಕಷ್ಟಕರ ಎನ್ನುವುದು ನಿಜವಾದರೂ, ಗುರುಗಳ ಆಶೀರ್ವಾದದಿಂದ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂದರು.
ಪುತ್ತೂರು ಜಿಲ್ಲೆಯಾಗಲಿ: ಡಿ.ವಿ. ಸದಾನಂದ ಗೌಡ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಡಿ.ವಿ. ಸದಾನಂದ ಗೌಡ, ಸಮುದಾಯದ ಸಂಘಟನೆ ಯಾವುದೇ ಪೈಪೋಟಿಗಲ್ಲ. ಪ್ರತಿಯೊಂದು ಸಮುದಾಯವೂ ಸಂಘಟಿತವಾದರೆ, ಸಮಾಜ ಕಟ್ಟುವ ಕಾರ್ಯ ಸುಲಲಿತವಾಗಿ ನಡೆಯುತ್ತದೆ ಎಂದ ಅವರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲು ರಣಕಹಳೆ ಮೊಳಗಿಸಿದವರು ಒಕ್ಕಲಿಗರು. ಆದ್ದರಿಂದ 5 ತಾಲೂಕುಗಳನ್ನೊಳಗೊಂಡ ಪುತ್ತೂರು, ಜಿಲ್ಲೆಯಾಗಿ ಮಾರ್ಪಾಡಾಗಲು ಒಕ್ಕಲಿಗರು ಶ್ರಮಿಸುತ್ತಾರೆ ಎಂದರು.
ಬದುಕು ಕಟ್ಟಿಕೊಂಡ ರೀತಿಯೇ ಒಕ್ಕಲಿಗ: ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬದುಕಿಕೊಂಡ ಬಂದ ರೀತಿಯಿಂದಾಗಿ ಒಕ್ಕಲಿಗ ಎನ್ನುವ ಹೆಸರು ಬಂದಿದೆ. ಒಕ್ಕಲುತನದಿಂದ ಬಂದ ಹೆಸರು ಇದಾಗಿದ್ದು, ಅನ್ನದಾತನ ಹೆಸರೂ ಕೂಡ ಹೌದು. ಈ ಸಮಾಜ ಯಾವತ್ತೂ ದಾನ ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದಿದೆ. ಮನೆಯನ್ನು ರಕ್ಷಣೆ ಮಾಡುವಂತೆ, ಮಠವನ್ನು ರಕ್ಷಿಸುವ ಕೆಲಸ ಆಗುತ್ತಿದೆ ಎಂದ ಅವರು, ಈ ಕಾರ್ಯಕ್ರಮದ ಮೂಲಕ ಕರಾವಳಿ ಜನರ ಶಿಸ್ತು, ಬದ್ಧತೆ, ಜ್ಞಾನ, ಹಸಿವು ನೋಡಿ ಸಂತೋಷವಾಗಿದೆ ಎಂದರು.
ಜನಸಂಖ್ಯೆಯ ಆಧಾರದಲ್ಲಿ ಶೇ. 12ರಷ್ಟು ಮೀಸಲಾತಿಯನ್ನು ಗೌಡ ಸಮಾಜಕ್ಕೆ ನೀಡಬೇಕು ಎನ್ನುವ ಬೇಡಿಕೆ ಇದೆ. ಸಚಿವ ಆರ್. ಅಶೋಕ್ ಅವರು ಈ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಂಸ್ಕಾರಯುತ ಶಿಕ್ಷಣ: ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಒಕ್ಕಲಿಗ ಗೌಡ ಸಮುದಾಯ ಜಾಗೃತ ಸಮುದಾಯ. ಇದರೊಂದಿಗೆ ಧಾರ್ಮಿಕತೆಯನ್ನು ಸೇರಿಸಿಕೊಂಡು ಮುನ್ನಡೆಯುತ್ತಿದೆ. ಇಂತಹ ಮಹತ್ಕಾರ್ಯದಲ್ಲಿ ಮಹಾಸಂಸ್ಥಾನ ತೊಡಗಿಸಿಕೊಂಡಿದ್ದು, ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ. ಮಠ ಹಾಗೂ ಸಮಾಜದ ಬಾಂಧವ್ಯ ಎಲ್ಲಾ ಭಾಗದಲ್ಲೂ ನಡೆಯಬೇಕಾಗಿದೆ ಎಂದರು.
ಒಕ್ಕಲಿಗ ಸಮುದಾಯಕ್ಕೆ ಆದ್ಯತೆ: ಡಾ. ಅಶ್ವತ್ಥ ನಾರಾಯಣ
ಸಚಿವ ಡಾ. ಅಶ್ವತ್ಥ ನಾರಾಯಣ ಮಾತನಾಡಿ, ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಒಕ್ಕಲಿಗ ಅಭಿವೃದ್ಧಿ ನಿಗಮವನ್ನೇ ಸ್ಥಾಪಿಸಿ, ಸಮಾಜದ ಬೇಡಿಕೆಗಳನ್ನು ಪೂರೈಸುತ್ತಿದೆ. ಇದೀಗ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.
ಸ್ವಾರ್ಥದಿಂದ ಹೊರಬಂದು ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯದಲ್ಲಿ ನಾವೆಲ್ಲಾ ತೊಡಗಿಸಿಕೊಳ್ಳಬೇಕಾಗಿದೆ. ಉತ್ತಮ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಜೊತೆಗೆ, ಗುಣಮಟ್ಟದ ಜ್ಞಾನ, ಕೌಶಲ್ಯತೆಯನ್ನು ಪಡೆಯುವ ಕಾರ್ಯ ನಡೆಯಬೇಕು ಎಂದರು.
ಡಾ. ಬಾಲಗಂಗಾಧರನಾಥ ಶ್ರೀಗಳಿಗೆ ಗೌರವ: ಶಾಸಕ ಮಠಂದೂರು
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಂಗಳೂರಿನ ಕಾವೂರಿನಲ್ಲಿ ಬಿಜಿಎಸ್ ಸಂಸ್ಥೆಯನ್ನು ನಿರ್ಮಿಸುವ ಮೂಲಕ ಕರಾವಳಿಯಲ್ಲಿ ಸಂಘಟನೆ ಮಾಡಲು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಕಾರಣರಾದರು. ಹಿಂದೂ ಸಮಾಜದ ಭಾಗವಾಗಿರುವ ಒಕ್ಕಲಿಗ ಗೌಡ ಸಮುದಾಯ ಈ ಕಾರ್ಯಕ್ರಮದ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ವಿವಿಧ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಶ್ರೀ ಶಂಕರಾರೂಢ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯಸಭಾ ಸದಸ್ಯೆ ಜಗ್ಗೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಎ.ವಿ. ತೀರ್ಥರಾಮ, ಬೆಂಗಳೂರು ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ಸಿ.ಎನ್., ಬೆಳ್ತಂಗಡಿ ಮಾಜಿ ಸಚಿವ ಗಂಗಾಧರ ಗೌಡ, ಕೆ.ವಿ.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಗೌಡ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್, ವಿವಿಧ ಭಾಗದ ಒಕ್ಕಲಿಗ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
ಎಚ್. ಎಸ್. ಸತ್ಯನಾರಾಯಣ ಗ್ರಂಥದ ಬಗ್ಗೆ ಮಾಹಿತಿ ನೀಡಿದರು. ಚಿದಾನಂದ ಬೈಲಾಡಿ ವಂದಿಸಿದರು. ಹರಿಪ್ರಸಾದ್ ಅಡ್ಪಂಗಾಯ, ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಜಗದೀಶ್ ಆಚಾರ್ಯ ಬಳಗದಿಂದ ಭಕ್ತಿ ರಸಮಂಜರಿ ನಡೆಯಿತು.