ಕಗ್ಗದ ಸಂದೇಶ- ನಡೆ ನುಡಿ ಎಂದೆಂದೂ ಸತ್ಯವಾಗಿರಲಿ…

ಸತ್ಯವಂತನನರಸಲೆನುತ ಪೇಟೆಗಳೊಳಗೆ|
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು||
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಾಸಿಸಿದನು|
ತಾತ್ವಿಕ ಡಯೋಜೆನಿಸ್ – ಮಂಕುತಿಮ್ಮ||

ಸುಮಾರು ಎರಡೂವರೆ ಸಾವಿರ ವರ್ಷುಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಸಿದ ಡಯೋಜನಿಸ್ ಎಂಬ ತತ್ತ್ವಜ್ಞಾನಿ ಸತ್ಯವಂತರು ಯಾರಾದರೂ ಇದ್ದಾರೆಯೆ ಎಂದು ನೋಡಲು ಪೇಟೆಯಲ್ಲಿ ನಡುಹಗಲಿನಲ್ಲಿಯೇ ದೀಪವನ್ನು ಹಿಡಿದುಕೊಂಡು ನಡೆದು ನೋಡಿ ಕೊನೆಗೆ ಯಾರೂ ಸಿಗದಿದ್ದಾಗ ಈ ಜಗತ್ತು ಕೆಟ್ಟು ಹೋಗಿದೆ ಎಂದು ಮನೆಯಲ್ಲಿಯೆ ಒಂದು ತೊಟ್ಟಿಯನ್ನು ನಿರ್ಮಿಸಿಕೊಂಡು ವಾಸಿಸಿದನು ಎಂದು ಮಾನ್ಯ ಡಿವಿಜಿಯವರು ಜಗತ್ತಿನ ವಾಸ್ತವ ಸಂಗತಿಯನ್ನು ವಿಡಂಬನಾತ್ಮಕವಾಗಿ ಈ ಮುಕ್ತಕದಲ್ಲಿ ಹೇಳಿದ್ದಾರೆ.
‘ಸತ್ಯ’ವು ನಮ್ಮ ಜೀವನದ ಮೂಲಭೂತ ಸದ್ಗುಣ. ‘ಸತ್ಯಮೇವ ಜಯತೇ ನಾ ನೃತಂ’ ಅಂದರೆ ಸತ್ಯವೇ ಅಂತಿಮವಾಗಿ ಜಯಗಳಿಸುತ್ತದೆ ಸುಳ್ಳಲ್ಲ ಎನ್ನುವುದು ಲೋಕೋಕ್ತಿ. ಆದರೆ ಅದನ್ನು ಪಾಲಿಸುವವರು ಎಷ್ಟು ಮಂದಿ ಎನ್ನುವುದು ಒಂದು ಯಕ್ಷ ಪ್ರಶ್ನೆ. ಮನಸ್ಸಿನೊಳಗಿನ ವಿಚಾರ ಹಾಗಯೇ ಪ್ರಕಟವಾಗಿ ಹೇಳಿದರೆ ಅದು ಸತ್ಯವೆನಿಸುತ್ತದೆ. ಆದರೆ ಮನಸ್ಸಿನಲ್ಲಿ ಬಂದ ವಿಚಾರಗಳನ್ನೆಲ್ಲಾ ಹೊರಹಾಕುತ್ತಾ ಹೋದರೆ ಹುಚ್ಚ ಎಂಬ ಬಿರುದು ಸಿಗಬಹುದು.’ನ ಬ್ರೂಯಾತ್ ಸತ್ಯಮಪ್ರಿಯಂ’ ಅಂದರೆ ಅಪ್ರಿಯವಾದ ಸತ್ಯವನ್ನು ನುಡಿಯಬೇಡ ಎಂಬ ಮಾತಿದೆ. ‘ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ; ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ಗೋವಿನ ಹಾಡು ನಮ್ಮ ಬದುಕಿಗೆ ಶ್ರೇಷ್ಠವಾದ ಮಾರ್ಗದರ್ಶಿ. ಆದರೆ ನಾಗರಿಕತೆ ಬೆಳೆದಂತೆ ಮಾನವ ಇಂತಹ ಉದಾತ್ತ ಮೌಲ್ಯಗಳಿಂದ ದೂರವಾಗುತ್ತಿರುವುದು ವಿಪರ್ಯಾಸದ ಸಂಗತಿ.
‘ಸತ್ಯವಂತರಿಗೆ ಇದು ಕಾಲವಲ್ಲ, ದುಷ್ಟ ಜನರಿಗೆ ಸುಭಿಕ್ಷ ಕಾಲ’ ಎಂದು ಅಂದು ಪುರಂದರದಾಸರು ಹೇಳಿದ ವಾಣಿ ಇಂದಿಗೂ ಸತ್ಯವೆನಿಸುತ್ತದೆ.

ನುಡಿಯೊಂದು ಮೈಲುದ್ದ ನಡೆ ಮಾತ್ರ ಚೋಟುದ್ದ|
ನಡೆನುಡಿಯೊಳಂತರವ ಶೂನ್ಯಗೈದು||
ಮೃಡನ ಮೆಚ್ಚಿಸಿ ಪಡೆಯಲಾನಂದವನು ನೀನು|
ನಡೆನುಡಿಯೊಳೊಂದಾಗು- ಬೋಳುಬಸವ||































 
 

ಎಂಬ ನಿಜಗುಣ ಕವಿಯ ಮಾತು ನಮಗೆ ಆದರ್ಶವಾಗಬೇಕು. ಆದರೆ ಇಂದು ನಡೆ ಮತ್ತು ನುಡಿಯ ನಡುವಿನ ಅಂತರ ಹೆಚ್ಚುತ್ತಿರುವುದು ಬೇಸರದ ಸಂಗತಿ. ಆದರೆ ಇದರಿಂದ ಡಯೋಜನಿಸ್ ಅಂತೆ ನಾವು ಪಲಾಯನವಾದಿಗಳಾಗಬಾರದು.

‘ಸತ್ಯರಿಗೆ ಧರೆಯೆಲ್ಲ|
ಮಸ್ತಕವನೆರಗುವರು||
ಹೆತ್ತ ತಾಯ್ಮಗನ ಕರೆವಂತೆ|
ಶಿವನವರನೆತ್ತಿಕೊಂಬುವನು-ಸರ್ವಜ್ಞ||

ಎಂಬ ಸರ್ವಜ್ಞನ ನುಡಿಯರಿತು ಸಕಾರಾತ್ಮಕ ಮನೋಭಾವದೊಂದಿಗೆ ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ತಾಲೂಕು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top