ಪುತ್ತೂರು: ನೇತಾಜಿ ಸುಭಾಷ್ ಚಂದ್ರ ಭೋಸ್ ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿಯ ಚಿಲುಮೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅವರ ಪ್ರಯತ್ನವೇ ಪ್ರಧಾನ ಭೂಮಿಕೆ ಎಂಬುದನ್ನು ಮರೆಮಾಚಬಾರದು. ಅವರು ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿ, ದೇಶವಾಸಿಗಳ ಹೃದಯದಲ್ಲಿ ರಾರಾಜಿಸಿದವರು ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಆವರಣದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಲಾದ ’ಸುಭಾಷ್ ಚಂದ್ರ ಭೋಸ್ ಅವರ ಜನ್ಮಜಯಂತಿ – ಪರಾಕ್ರಮ ದಿವಸ್’ ಆಚರಣೆಯಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದರು.
ಬ್ರಿಟಿಷರೇ ಆಯೋಜಿಸಿ, ಅವರೇ ಮೌಲ್ಯಮಾಪನ ಮಾಡುತ್ತಿದ್ದ ಪರೀಕ್ಷೆಯಾಗಿದ್ದ, ಇಂದಿನ ಐಎಎಸ್ ತತ್ಸಮಾನವಾದ ಐಸಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಸುಭಾಷ್ ಚಂದ್ರ ಭೋಸ್ ಅವರು ಅಧಿಕಾರಿಯಾಗಿ ಸುಖವಾಗಿರಬಹುದಾಗಿದ್ದರೂ ಆ ಅಧಿಕಾರ, ಸಂಪತ್ತನ್ನು ತ್ಯಜಿಸಿ ಭಾರತಾಂಬೆಯ ಸೇವೆಗಾಗಿ ಮರಳಿ ಬಂದವರು. ಅವಿಭಜಿತ ಭಾರತದ ಮೊತ್ತಮೊದಲ ಪ್ರಧಾನಿ ಪಟ್ಟವನ್ನೇರಿದ ಸುಭಾಷ್ ಚಂದ್ರ ಭೋಸ್ ಅವರ ಯೋಜನೆಯಂತೆ ಭಾರತ ಹೆಜ್ಜೆ ಇಡುತ್ತಿದ್ದರೆ ಭಾರತ ವಿಭಜಿತವಾಗಲು ಸಾಧ್ಯವಿರಲಿಲ್ಲ ಎಂದರು.
ಎರಡನೆಯ ಬಾರಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ನೇತಾಜಿ ಆಂತರಿಕ ರಾಜಕೀಯದಿಂದ ಬೇಸೆತ್ತು ರಾಜೀನಾಮೆ ನೀಡುವಂತಾಯಿತು. ವಿಮಾನ ಅಪಘಾತದಲ್ಲಿ ಅವರು ತೀರಿಕೊಂಡಿಲ್ಲ ಎಂಬ ಸತ್ಯ ಪ್ರತಿಯೊಬ್ಬನಿಗೂ ತಿಳಿದಿದೆ. ಆದರೆ ಏನಾದರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವರ ಪರಾಕ್ರಮದ ಕಾರಣದಿಂದ ಬ್ರಿಟಿಷರು ಹೆದರಿ ಭಾರತಕ್ಕೆ ಸ್ವಾತಂತ್ರ್ಯ ನೀಡುವುದಕ್ಕೆ ಮುಂದಾದದ್ದಂತೂ ಸತ್ಯ. ಹಾಗಾಗಿಯೇ ಪರಾಕ್ರಮ ದಿವಸ್ ಆಚರಣೆಗೆ ಹೆಚ್ಚು ಮೌಲ್ಯ ಬಂದಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಬ್ರಿಟಿಷರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತಿ ವಿವಿಧ ದೇಶಗಳ ಸೇನೆಯನ್ನು ಒಂದುಗೂಡಿಸಿದವರು ನೇತಾಜಿ. ಗೃಹಬಂಧನದಲ್ಲಿರಿಸಿದರೂ ತಪ್ಪಿಸಿಕೊಂಡು ವಿದೇಶಕ್ಕೆ ತೆರಳಿ ಸೇನೆ ಸಿದ್ಧಪಡಿಸಿದ ಮಹಾನ್ ಪುರುಷ. ಅವರ ಆದರ್ಶ ಯುವಮನಸ್ಸುಗಳಿಗೆ ದಾರಿದೀಪವಾಗಬೇಕು. ದೇಶಕ್ಕಾಗಿ ಮಿಡಿಯುವ ಮನಸ್ಸನ್ನು ಜಾಗೃತಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಾಚಾರ್ಯೆ ಮಾಲತಿ ಡಿ, ಉಪಪ್ರಾಚಾರ್ಯೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಮಂದಿರಾ ಕಜೆ ಸ್ವಾಗತಿಸಿದರು. ವಿದ್ಯಾರ್ಥಿನಿ ಅನ್ವಿತಾ ಎಸ್. ವಂದಿಸಿದರು. ವಿದ್ಯಾರ್ಥಿನಿ ಕಾರ್ಯಕ್ರಮ ಅದಿತಿ ಶೆಟ್ಟಿ ಎನ್. ನಿರ್ವಹಿಸಿದರು. ಶಿಕ್ಷಕ ರಮೇಶ್ ಬಹುಮಾನಿತರ ವಿವರ ವಾಚಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳಿಂದ ಪರಾಕ್ರಮ ದಿವಸ್ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು.