ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ
ಬೆಂಗಳೂರು : ಶಾಲಾ ಮಕ್ಕಳ ಬ್ಯಾಗುಗಳಲ್ಲಿ ಕೆಲ ಸಮಯದ ಹಿಂದೆ ಕಾಂಡೋಮ್, ಗರ್ಭ ನಿರೋಧಕ ಗುಳಿಗೆಯಂಥ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್‌ಗಳು ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕಗಳನ್ನು ಮಾರುವುದಿಲ್ಲ ಎಂಬ ಫಲಕ ಹಾಕಲು ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.
ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆ ಕುರಿತು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಮಟ್ಟದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ. ಅಂಗಡಿಗಳ ಮುಂಭಾಗದಲ್ಲಿ ‘ಅಪ್ರಾಪ್ತ ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಮಾರಾಟ ಮಾಡುವುದಿಲ್ಲ, ಇಂತಹ ಔಷಧಿಗಳನ್ನು ಉಪಯೋಗಿಸಬಾರದು’ ಎಂದು ಪೋಸ್ಟರ್ ಹಾಕಲು ಕ್ರಮ ಕೈಗೊಳ್ಳಲಾಗಿದೆ.
ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆ ಪತ್ತೆಯಾದ ಬಳಿಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಗತ್ಯ ಕ್ರಮ ಕೈಗೊಳ್ಳಲು ಔಷಧ ನಿಯಂತ್ರಣ ಇಲಾಖೆಯನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿದ್ದು, ‘ಇಲಾಖೆಯ ಅಧಿಕಾರಿಗಳು ಔಷಧ ಅಂಗಡಿಯವರೊಂದಿಗೆ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಬೇಕು. ಎಲ್ಲಾ ಔಷಧ ಅಂಗಡಿಗಳ ಮುಂಭಾಗದಲ್ಲಿ ‘ಅಪ್ರಾಪ್ತ ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಮಾರಾಟ ಮಾಡುವುದಿಲ್ಲ, ಇಂತಹ ಔಷಧಿಗಳನ್ನು ಉಪಯೋಗಿಸಬಾರದು’ ಎಂದು ಪೋಸ್ಟರ್‌ಗಳನ್ನು ಪ್ರದರ್ಶಿಸಿ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಇಂತಹ ವಸ್ತುಗಳನ್ನು ಔಷಧ ಅಂಗಡಿಗಳು ಮಕ್ಕಳಿಗೆ ಮಾರಾಟ ಮಾಡುವುದು ಕಂಡುಬಂದರೆ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಔಷಧ ನಿಯಂತ್ರಕ ಭಾಗೋಜಿ ಟಿ. ಖಾನಾಪೂರೆ, ‘ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟ ಬ್ಯಾನ್ ಮಾಡಿಲ್ಲ. ಅವುಗಳನ್ನು ಅಪ್ರಾಪ್ತರು ಬಳಸಬಾರದು ಎಂಬ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಇವುಗಳನ್ನು ಖರೀದಿಸಲು ಬರುವ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲು ಮೆಡಿಕಲ್ ಶಾಪ್ ಮಾಲಿಕರಿಗೆ ತಿಳಿಸಿದ್ದು, ಮಕ್ಕಳು ತಮ್ಮ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗದಂತೆ ತಿಳಿ ಹೇಳಲು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.