ಭಾರತೀಯ ಬ್ರಾಂಡ್ ಆಯ್ಕೆ ಮಾಡಿ, ದುಡ್ಡನ್ನು ಭಾರತದಲ್ಲಿಯೇ ಉಳಿಸಿ

ಪೆಪ್ಸಿ, ಕೋಕ್ ಬೇಡ ಎಳನೀರು, ಮಜ್ಜಿಗೆ ಕುಡಿಯಿರಿ!

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರು ಆರಂಭ ಮಾಡಿದ ಬಹಳ ದೊಡ್ಡ ಅಭಿಯಾನ ಅಂದರೆ ಸ್ವದೇಶಿ ಅಭಿಯಾನ. ಭಾರತದ್ದೇ ಉತ್ಪನ್ನಗಳನ್ನು ಭಾರತದಲ್ಲಿ ಬಳಕೆ ಮಾಡಿದರೆ ಭಾರತದ ದುಡ್ಡನ್ನು ಭಾರತದಲ್ಲಿ ಉಳಿಸಬಹುದು ಎನ್ನುವುದು ಅವರ ದೊಡ್ಡ ಆಶಯವಾಗಿತ್ತು.
ಅದಕ್ಕೆ ಪೂರಕವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಟ್ಟೆಗಳನ್ನು ಅವರು ಬೀದಿಗೆ ತಂದು ಕಾರ್ಯಕರ್ತರ ಜತೆಯಲ್ಲಿ ಸುಡುವ ಕೆಲಸ ಮಾಡಿದರು. ಅದಕ್ಕೆ ಪರ್ಯಾಯವಾಗಿ ಭಾರತದ್ದೇ ಆದ ಖಾದಿಯನ್ನು ಅವರು ಜನಪ್ರಿಯ ಮಾಡಿದರು. ತಾವೇ ತಕಲಿಯಿಂದ ನೂಲು ತೆಗೆದು ಖಾದಿ ಬಟ್ಟೆ ಮಾಡಿ ಅದನ್ನೇ ತೊಟ್ಟರು. ಕಾಂಗ್ರೆಸ್ ನಾಯಕರೂ ಖಾದಿ ಬಟ್ಟೆ ತೊಟ್ಟು ಪೂರ್ಣವಾಗಿ ಸ್ವದೇಶಿ ಆದರು. ಈ ಅಭಿಯಾನವು ಆ ಕಾಲಕ್ಕೆ ಒಂದು ಹಂತಕ್ಕೆ ಯಶಸ್ವಿ ಆಯಿತು.

ಆದರೆ ಮುಂದೆ ಬಂದ ಗ್ಯಾಟ್ ಒಪ್ಪಂದ…?































 
 

ಬ್ರಿಟೀಷರೇನೊ ಭಾರತ ಬಿಟ್ಟು ಹೋದರು. ಆದರೆ ಮುಂದೆ ಪಿ.ವಿ. ನರಸಿಂಹ ರಾವ್ ಸರಕಾರ 1990ರ ದಶಕದಲ್ಲಿ ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡುವುದರ ಮೂಲಕ ನೂರಾರು ವಿದೇಶಿ ಕಂಪೆನಿಗಳನ್ನು ಭಾರತಕ್ಕೆ ರತ್ನಗಂಬಳಿ ಹಾಕಿ ಸ್ವಾಗತಿಸಲಾಯಿತು. ಇದರಿಂದ ಮತ್ತೆ ಭಾರತ ವಿದೇಶಿ ಕಂಪನಿಗಳ ಬಹುದೊಡ್ಡ ಮಾರುಕಟ್ಟೆ ಆಯಿತು. ಭಾರತದ ದುಡ್ಡು ವಿದೇಶಿ ವಿನಿಮಯದ ಹೆಸರಿನಲ್ಲಿ ದೇಶದ ಹೊರಗೆ ಹರಿಯಲು ತೊಡಗಿತು. ಆಗ ಅದನ್ನು ಪ್ರತಿಭಟನೆ ಮಾಡಲು ಸಿಡಿದು ನಿಂತವರು ರಾಜೀವ್ ದೀಕ್ಷಿತ್.

ರಾಜೀವ್ ದೀಕ್ಷಿತ್ ಎಂಬ ಹುಟ್ಟು ಹೋರಾಟಗಾರ!

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಭಾರತವನ್ನು ಸುತ್ತಿದ ಈ ಶ್ರೇಷ್ಠ ಭಾಷಣಕಾರ ವಿದೇಶಿ ಕಂಪನಿಗಳ ವಿರುದ್ಧ ರಣಕಹಳೆ ಮೊಳಗಿಸಿದ್ದರು. ಅವರ ವೀರಾವೇಶದ ಭಾಷಣಗಳು ಭಾರತೀಯರಲ್ಲಿ ಸ್ವದೇಶಿ ಜಾಗರಣ ಮಾಡಿದ್ದು ಮಾತ್ರವಲ್ಲ ವಿದೇಶಿ ಕಂಪನಿಗಳಿಗೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ. ಅವರ ಪ್ರಬಲವಾದ ಅಭಿಯಾನ ದೇಶದಾದ್ಯಂತ ಕಾಡ್ಗಿಚ್ಚಿನ ಹಾಗೆ ಹರಡಲು ಆರಂಭ ಆಯಿತು ಅನ್ನುವಾಗ ಅತಿ ಸಣ್ಣ ಪ್ರಾಯದಲ್ಲೇ ಅವರು ನಿಧನರಾದರು. ಅವರ ಅಸಹಜ ಸಾವಿನ ಹಿಂದೆ ವಿದೇಶಿ ಕಂಪೆನಿಗಳ ಕೈವಾಡ ಇತ್ತು ಎಂದು ಭಾರತೀಯ ಮಾಧ್ಯಮಗಳು ಬರೆದವು. ಅದನ್ನು ಈಗಲೂ ನಂಬುವ ಕೋಟಿ ಭಾರತೀಯರು ಇದ್ದಾರೆ.
ರಾಜೀವ್ ದೀಕ್ಷಿತ್ ಅವರ ಮರಣದ ನಂತರ ಈ ಅಭಿಯಾನವನ್ನು ಯಾರೂ ಮುಂದುವರೆಸಿಕೊಂಡು ಹೋಗಲಿಲ್ಲ ಅನ್ನುವುದು ದುರಂತ.

ಯಾವುದು ಸ್ವದೇಶೀ, ಯಾವುದು ವಿದೇಶೀ?

ನಾವು ಬೆಳಿಗ್ಗೆ ಉಪಯೋಗ ಮಾಡುವ ಟೂತ್‌ಪೇಸ್ಟ್, ಬ್ರಷ್, ಟಾಯ್ಲೆಟ್ ಕ್ಲೀನರ್‌ಗಳಿಂದ ಹಿಡಿದು ನಾವು ಕುಡಿಯುವ ಪಾನೀಯಗಳು, ಬಳಸುವ ಮೌತ್ ಫ್ರೆಶ್‌ನರ್, ಶೇವಿಂಗ್ ಕ್ರೀಮ್, ಧರಿಸುವ ಬಟ್ಟೆಗಳು, ಕಾಲಿಗೆ ಹಾಕುವ ಚಪ್ಪಲಿ, ಪ್ರತಿ ದಿನ ಉಪಯೋಗಿಸುವ ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಶೇ.60 ವಸ್ತುಗಳು ವಿದೇಶಿ ಆಗಿವೆ. ವಿದೇಶಿ ಕಂಪನಿಗಳನ್ನು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ರಾಜೀವ್ ದೀಕ್ಷಿತ್ ಅವರು ಭಸ್ಮಾಸುರನಿಗೆ ಹೋಲಿಸುತ್ತಾರೆ. ಅವುಗಳ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ದುಡ್ಡು ವಿದೇಶಿ ವಿನಿಮಯದ ರೂಪದಲ್ಲಿ ವಿದೇಶಕ್ಕೆ ಹೋಗುತ್ತದೆ. ಭಾರತ ವಿದೇಶಿ ಕಂಪನಿಗಳಿಗೆ ಅತಿ ದೊಡ್ಡ ಮಾರ್ಕೆಟ್ ಆಗಿ ಆಗಿದೆ. ಅದಕ್ಕೆ ರಾಜೀವ್ ದೀಕ್ಷಿತ್ ಅವರು ಯಾವ ವಸ್ತು ಸ್ವದೇಶಿ ಮತ್ತು ಯಾವುದು ವಿದೇಶಿ ಎಂದು ಸರಿಯಾಗಿ ವರ್ಗೀಕರಣ ಮಾಡಿ ಹಲವಾರು ಪುಸ್ತಕಗಳನ್ನು ಬರೆದರು. ವೀಡಿಯೊಗಳನ್ನು ಮಾಡಿದರು. ಕನ್ನಡ, ಮರಾಠಿ, ಇಂಗ್ಲೀಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಅವರ ಮಾತುಗಳನ್ನು ಕೇಳುವುದೇ ಚಂದ.

ಪೆಪ್ಸಿ, ಥಮ್ಸ್‌ಅಪ್ ಬೇಡ, ಸೀಯಾಳ ಮಜ್ಜಿಗೆ ಕುಡಿಯಿರಿ

ನಾವು ಬಾಯಾರಿಕೆಗಾಗಿ ಕುಡಿಯುವ ಪೆಪ್ಸಿ, ಥಮ್ಸ್‌ಅಪ್ ಮೊದಲಾದ ವಿದೇಶದ ಕಂಪನಿಗಳು ಭಾರತದಲ್ಲಿ ಕೋಟಿ ಕೋಟಿ ದುಡ್ಡು ಮಾಡುತ್ತವೆ. ಅದರಲ್ಲಿಯೂ ಪೆಪ್ಸಿ ಒಂದು ಟಾಯ್ಲೆಟ್ ಕ್ಲೀನರ್ ಎಂದು ಅವರು ಲೇವಡಿ ಮಾಡಿದರು. ಅದಕ್ಕೆ ಪರ್ಯಾಯವಾಗಿ ಎಳನೀರು, ಮಜ್ಜಿಗೆ ಕುಡಿದರೆ ರೈತನಿಗೂ ಉಪಯೋಗ ಆಗುತ್ತದೆ ಮತ್ತು ನಮ್ಮ ದುಡ್ಡು ಭಾರತದಲ್ಲಿ ಉಳಿಯುತ್ತದೆ ಎಂದು ಅವರು ಎಲ್ಲ ಕಡೆಯಲ್ಲಿಯೂ ಹೇಳುತ್ತಾ ಬಂದರು. ಅದು ಆ ಕಾಲಕ್ಕೆ ಯುವಕರನ್ನು ಭಾರಿ ಆಕರ್ಷಣೆ ಮಾಡಿ ಪೆಪ್ಸಿ ಕಂಪೆನಿ ನಷ್ಟಕ್ಕೆ ತುತ್ತಾಯಿತು. ಆ ಕಂಪನಿಯಿಂದ ಬಂದ ಬಹುದೊಡ್ಡ ಆಮಿಷವನ್ನು ಅವರು ತಿರಸ್ಕರಿಸಿದರು. ಬೆದರಿಕೆಗೂ ಬಗ್ಗಲಿಲ್ಲ.

ಯಾವುದು ಪ್ರಮುಖ ವಿದೇಶದ ಕಂಪೆನಿಗಳು?

ಸ್ಯಾಮ್ಸಂಗ್, ಎಲ್‌ಜಿ, ವರ್ಲ್‌ಪೂಲ್, ಸೋನಿ, ಪ್ಯಾನಾಸೊನಿಕ್, ಡೈಕೀನ್, ಹಿಟಾಚಿ, ಫಿಲಿಪ್ಸ್, ತೋಷಿಬಾ, ಡೇಲ್, ರೋಲೆಕ್ಸ್, ನಿಕೊನ್, ಕಾನನ್, ಹಿಟಾಚಿ, ಪೆಪ್ಸಿ ಮೊದಲಾದವುಗಳು ವಿದೇಶಿ ಕಂಪನಿಗಳು. ಇವು ತಯಾರು ಮಾಡುತ್ತಿರುವ ಸಾವಿರಾರು ಉತ್ಪನ್ನಗಳು ಇಂದು ನಮ್ಮ ಮನೆಯ ತುಂಬಾ ಇವೆಯಲ್ಲ. ಯೋಚನೆ ಮಾಡಿ. ಅವುಗಳಲ್ಲಿ ಇಲೆಕ್ಟ್ರಾನಿಕ್ ವಸ್ತುಗಳು ಹೆಚ್ಚಿವೆ.

ಯಾವುದು ಸ್ವದೇಶಿ ಉತ್ಪನ್ನಗಳು?

ಬಜಾಜ್, ಗೋದ್ರೆಜ್, ಟೈಟಾನ್‌, ವಿಪ್ರೊ, ವಿಡಿಯೋಕೊನ್‌, ಓರಿಯೆಂಟ್, ಉಷಾ, ಲಾಯ್ಡ್, ವೊಲ್ಟಾಸ್, ಎಕ್ಸೈಡ್, ಹಾವೆಲ್ಸ್, ಸೂರ್ಯ, ಎವರೆಡಿ, ಕ್ರಾಂಪ್ಟನ್, ಸೋನಾಟ, ಪ್ರೆಸ್ಟೀಜ್, ನಿಪ್ಪೋ, ಖೇತಾನ್‌ ಮೊದಲಾದವುಗಳು ಭಾರತದ ಹೆಮ್ಮೆಯ ಕಂಪನಿಗಳು. ವಿಶೇಷವಾಗಿ ಟಾಟಾ ಕಂಪೆನಿ ನಾವು ಬಳಸುವ ಉಪ್ಪು, ಟೀ ಪುಡಿಯಿಂದ ಹಿಡಿದು ಟ್ರಕ್‌ವರೆಗೆ ಸಾವಿರಾರು ಉತ್ಪನ್ನಗಳನ್ನು ತಯಾರಿ ಮಾಡಿ ಭಾರತಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟಿದೆ. ವಿಪ್ರೊ ಕಂಪನಿಯ ಮುಖ್ಯಸ್ಥರಾದ ಅಜೀಂ ಪ್ರೇಂಜಿ ಅವರು ನೂರಾರು ಕೋಟಿ ದಾನ ಮಾಡಿದ್ದಾರೆ. ಇನ್ಫೋಸಿಸ್, ಬಿರ್ಲಾ ಮೊದಲಾದ ಕಂಪೆನಿಗಳು ಸರಕಾರಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತವೆ ಮತ್ತು ಚಾರಿಟಿಯಲ್ಲಿ ಭಾರಿ ಮುಂದಿವೆ. ವಿದೇಶದ ಕಂಪನಿಗಳು ಪತ್ರಿಕೆ ಮತ್ತು ಟಿವಿಗಳಿಗೆ ಜಾಹೀರಾತು ಕೊಡುವುದನ್ನು ಬಿಟ್ಟು ಭಾರತಕ್ಕೆ ಬೇರೇನು ಕೊಡುಗೆ ನೀಡಿವೆ?
ಈ ಬಗ್ಗೆ ಭಾರತೀಯರಿಗೆ ಶಿಕ್ಷಣ ಮತ್ತು ಜಾಗೃತಿ ಬೇಕಿತ್ತು. ಭಾರತವನ್ನು ಮತ್ತೆ ಬಡರಾಷ್ಟ್ರ ಮಾಡಲು ಹೊರಟ ವಿದೇಶಿ ಕಂಪನಿಗಳ ವಿರುದ್ಧ ಇನ್ನೊಂದು ಬಹುದೊಡ್ಡ ಅಭಿಯಾನ ನಡೆಯಬೇಕಾದ ಅಗತ್ಯ ಈಗ ಹೆಚ್ಚಿದೆ. ಆದರೆ ಮಾಡುವವರು ಯಾರು?
ರಾಜೀವ್ ದೀಕ್ಷಿತ್ ಅಷ್ಟು ಬೇಗ ನಿರ್ಗಮಿಸಬಾರದಿತ್ತು!
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top