ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭದ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ

ಪುತ್ತೂರು: ರಾಜ್ಯದ ಕೇಂದ್ರಬಿಂದುವಾಗಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 78ನೇ ವರ್ಷದ ಜಯಂತ್ಯೋತ್ಸವ ಸಂಸ್ಮರಣೆ ಸಮಾರಂಭದ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ. ಸಮಾರಂಭಕ್ಕೆ ವೇದಿಕೆ, ಸಭಾಂಗಣ ಸಿದ್ಧಗೊಳ್ಳುತ್ತಿದ್ದು, ಅಂತಿಮ ಸ್ಪರ್ಶವಷ್ಟೇ ಬಾಕಿ ಉಳಿದಿವೆ.

ಜ. 22ರಂದು ಬೆಳಿಗ್ಗೆ 8 ಗಂಟೆಗೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ಸಮಾರಂಭದ ಮೂಲಕ ಇಡೀ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಇಂದು ಸಂಜೆಯೇ ಆಗಮಿಸಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಶಾಸಕ ಸಂಜೀವ ಮಠಂದೂರು ಅವರ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ನಾಳೆ ಬೆಳಿಗ್ಗೆ ಪೆರಿಯಡ್ಕದಿಂದ ಆರಂಭಗೊಳ್ಳುವ ಕಾರ್ಯಕ್ರಮದ ನಂತರ ದರ್ಬೆಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಂತರ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐನಲ್ಲಿ ನೂತನ ಕಟ್ಟಡ ಉದ್ಘಾಟನೆ, ಬಳಿಕ ಸಭಾಂಗಣದಲ್ಲಿ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ, ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ದಶಮಾನೋತ್ಸವ ಹಿನ್ನೆಲೆಯಲ್ಲಿ ರಜತ ತುಲಾಭಾರ, ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಬರೆದಿರುವ ‘ಸಂಸ್ಕೃತ – ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಕೊಡುಗೆ’ ಮಹಾಪ್ರಬಂಧದ ಗ್ರಂಥ ಬಿಡುಗಡೆ ಸಮಾರಂಭ ಭವ್ಯ ವೇದಿಕೆಯಲ್ಲಿ ನಡೆಯಲಿದೆ.

58ನೇ ಜಯಂತ್ಯೋತ್ಸವ ಮಂಗಳೂರಿನಲ್ಲಿ ನಡೆದಿತ್ತು, 68ನೇ ಜಯಂತ್ಯೋತ್ಸವ ಮಂಗಳೂರಿನ ಕಾವೂರಿನಲ್ಲಿ ನಡೆದಿತ್ತು. ಇದೀಗ ಮತ್ತೆ 78ನೇ ಜಯಂತ್ಯೋತ್ಸವವನ್ನು ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ. ಆದ್ದರಿಂದ ಭೈರವೈಕ್ಯರಾಗಿರುವ ಮಹಾಸ್ವಾಮೀಜಿಯವರ ಭಕ್ತರಿಗೆ ಸೇವೆ ಸಲ್ಲಿಸಲು ಇದೊಂದು ಭಾಗ್ಯ ಎಂಬ ರೀತಿಯಲ್ಲಿ ಸಮರ್ಪಣಾ ಭಾವದಿಂದ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ.































 
 

60 ಅಡಿ ಅಗಲದ, 6 ಅಡಿ ಎತ್ತರದ ಭವ್ಯ ವೇದಿಕೆ, 1200 ಅಡಿ ಉದ್ದಕ್ಕೆ, 1.40 ಲಕ್ಷ ಚದರ ಅಡಿ ವಿಸ್ತಾರಕ್ಕೆ ಹರಡಿರುವ ಸುವ್ಯವಸ್ಥಿತ ಪೆಂಡಾಲ್, ಹೊರೆಕಾಣಿಕೆ ಇಡಲು ಪ್ರತ್ಯೇಕ ವ್ಯವಸ್ಥೆ, ಬಂದ ಅಷ್ಟು ಮಂದಿಗೆ ವಸತಿ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಮುಖ್ಯ ಅತಿಥಿ, ವಿಐಪಿಗಳಿಗೆ ಬಸ್ ಶೌಚಾಲಯ ಹೀಗೆ ಪ್ರತಿಯೊಂದು ವ್ಯವಸ್ಥೆಗಳಲ್ಲೂ ಪರಿಪೂರ್ಣತೆ ಕಾಣುತ್ತಿದೆ. ಬೆಳಿಗ್ಗೆಯಿಂದಲೇ ಸಂಘಟಕರು ಸ್ಥಳದಲ್ಲಿದ್ದು, ಕಾರ್ಯಕ್ರಮದ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾರೆ.


60 ಅಡಿ ಅಗಲದ ಭವ್ಯ ವೇದಿಕೆ
:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುಖ ಮಾಡಿ, ಶಿವ ಮೂರ್ತಿಯ ಪಕ್ಕದಲ್ಲೇ ಭವ್ಯ ವೇದಿಕೆ ನಿರ್ಮಿಸಲಾಗಿದೆ. ನೆಲದಿಂದ 6 ಅಡಿ ಎತ್ತರದಲ್ಲಿ ವೇದಿಕೆ ನಿರ್ಮಿಸಿದ್ದು, ಹಿಂಭಾಗದ ಜನರಿಗೂ ವೇದಿಕೆಯ ಕಾರ್ಯಕ್ರಮ ಕಾಣಿಸುವಂತೆ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಎಡಭಾಗದಲ್ಲಿ ಮಹಾಸ್ವಾಮೀಜಿ ಅವರ ರಜತ ತುಲಾಭಾರವೂ ನಡೆಯಲಿದೆ. ಅಲ್ಲದೇ, ಮಹಾಸಂಸ್ಥಾನದ ಎಲ್ಲಾ ಸ್ವಾಮೀಜಿಗಳು ಸೇರಿದಂತೆ ಸುಮಾರು 45 ಮಂದಿ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಮಾತ್ರವಲ್ಲ, ವೇದಿಕೆ ಎರಡೂ ಬದಿಯಲ್ಲೂ ಗ್ರೀನ್ ರೂಂನ ವ್ಯವಸ್ಥೆ ಇದ್ದು, ಇಷ್ಟೆಲ್ಲಾ ವ್ಯವಸ್ಥೆಗಳಿಗೆ ಪೂರಕವಾಗಿ ವೇದಿಕೆ 60 ಅಡಿ ಅಗಲಕ್ಕೆ ಚಾಚಿಕೊಂಡಿದೆ. ಇಂತಹ ಭವ್ಯ ವೇದಿಕೆಯನ್ನು ಶೃಂಗಾರ ಮಾಡುವ ಕಾರ್ಯವೂ ನಡೆಯುತ್ತಿದೆ. ವೇದಿಕೆಯ ಹಿಂಭಾಗದಲ್ಲಿ ಪ್ರತ್ಯೇಕವಾಗಿ ಗ್ರೀನ್ ರೂಮೊಂದನ್ನು ನಿರ್ಮಾಣ ಮಾಡಲಾಗುತ್ತಿದೆ.


ಲಕ್ಷಕ್ಕೂ ಮಿಕ್ಕಿ ಜನರ ನಿರೀಕ್ಷೆ:
ಜ. 22 ರಾಜ್ಯದ ಕೇಂದ್ರಬಿಂದು ಪುತ್ತೂರು. ಜಿಲ್ಲೆಯ ಒಕ್ಕಲಿಗ ಗೌಡ ಸಮುದಾಯದ ಸದಸ್ಯರ ಸಂಖ್ಯೆಯೇ ಅಧಿಕ. ಇವರ ಜೊತೆ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಜೊತೆಯಾಗಲಿದ್ದಾರೆ. ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಿಂದಲೂ ಭೈರವೈಕ್ಯರಾಗಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಭಕ್ತರು ಬಂದು ಸೇರಲಿದ್ದು, ಲಕ್ಷಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ. ಆದ್ದರಿಂದ ಇಷ್ಟು ಮಂದಿಗೆ ಅಗತ್ಯವಾದ ಪಾರ್ಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಮಾತ್ರವಲ್ಲ ಸಭಾಂಗಣದ ತುಂಬಾ 140 ಫ್ಯಾನ್ಗಳ ಹಾಕಲಾಗಿದೆ. ಈಗಾಗಲೇ ದೇವಸ್ಥಾನದ 20 ಶೌಚಾಲಯಗಳು ದೇವರಮಾರು ಗದ್ದೆಯಲ್ಲಿದೆ. ಇದಲ್ಲದೇ, 20 ಹೆಚ್ಚುವರಿ ಶೌಚಾಲಯವನ್ನು ಗದ್ದೆಯಲ್ಲಿ ಹಾಕಲಾಗಿದೆ. ಮುಖ್ಯಅತಿಥಿಗಳು ಬಳಸಲು ಬಸ್ ಸಂಚಾರಿ ಶೌಚಾಲಯವೂ ನಾಳೆ ಬಂದು ವೇದಿಕೆ ಹಿಂಭಾಗದಲ್ಲಿ ನಿಲ್ಲಲಿದೆ.

ಹೊರೆಕಾಣಿಕೆ ಮರವಣಿಗೆ:

ಇಂದು ಸಂಜೆ 3.30ಕ್ಕೆ ಸರಿಯಾಗಿ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಪಕ್ಕದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. 250ಕ್ಕೂ ಹೆಚ್ಚಿನ ಪಿಕಪ್ ಹಾಗೂ ವಾಹನಗಳಲ್ಲಿ ಹೊರೆಕಾಣಿಕೆ ಬರಲಿದ್ದು, ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಸಭಾಂಗಣದಲ್ಲಿ ತೆರಳಲಿದೆ. ಸಭಾಂಗಣದಲ್ಲಿ ಹೊರೆಕಾಣಿಕೆಗಳನ್ನು ಜೋಡಿಸಿಡಲು ಪ್ರತ್ಯೇಕ ಪೆಂಡಾಲ್ ವ್ಯವಸ್ಥೆ ಮಾಡಿದ್ದು, ವೇದಿಕೆ ಪಕ್ಕದಲ್ಲೇ 40*30 ಅಡಿಯ ಪೆಂಡಾಲ್ ಹಾಕಲಾಗಿದೆ.

ಕಾರ್ಯಕ್ರಮ ಯಶಸ್ವಿಯಾಗಲಿದೆ:
ಬೈರವೈಕ್ಯರಾಗಿರುವ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವವನ್ನು ಪುತ್ತೂರಿನಲ್ಲಿ ಆಚರಿಸುವ ಮೂಲಕ ಇತಿಹಾಸ ನಿರ್ಮಿಸುವ ನೆಲೆಯಲ್ಲಿ ಕೆಲಸಗಳು ನಡೆಯುತ್ತಿವೆ. ಗುರುಗಳ ಅನುಗ್ರಹ ಹಾಗೂ ಆಶೀರ್ವಾದವನ್ನು ಪಡೆದುಕೊಳ್ಳುವ ಪುಣ್ಯದ ಕಾರ್ಯಕ್ರಮ ಇದು. ನಾ ಭೂತೋ, ನಾ ಭವಿಷ್ಯತಿ ಎನ್ನುವ ರೀತಿಯಲ್ಲಿ ಕಾರ್ಯಕ್ರಮ ಮೂಡಿಬರಬೇಕು ಎನ್ನುವ ಆಲೋಚನೆ ನಮ್ಮದು. ಆದ್ದರಿಂದ 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ದೇವರ ಆಶೀರ್ವಾದ, ಸ್ವಾಮೀಜಿಗಳ ಅನುಗ್ರಹ ಹಾಗೂ ಎಲ್ಲಾ ಸಂಘಟನೆಗಳ ಹೋರಾಟದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಚಿದಾನಂದ ಬೈಲಾಡಿ, ಸಂಚಾಲಕರು, ಜಯಂತ್ಯೋತ್ಸವ ಸಂಸ್ಮರಣಾ ಜಿಲ್ಲಾ ಸಮಿತಿ ಪುತ್ತೂರು, ದ.ಕ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top