ಫೆ. 10 – 12: 5ನೇ ಕೃಷಿಯಂತ್ರ ಮೇಳ 2023, ಕನಸಿನ ಮನೆ ಬೃಹತ್ ಪ್ರದರ್ಶನ

ಪುತ್ತೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಇದರ ಆಶ್ರಯದಲ್ಲಿ ‘5ನೇ ಕೃಷಿ ಯಂತ್ರ ಮೇಳ-2023 ಹಾಗೂ ಕನಸಿನ ಮನೆ’ ಬೃಹತ್ ಪ್ರದರ್ಶನ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆ. 10ರಿಂದ 12ರವರೆಗೆ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ನಾಲ್ಕು ಯಂತ್ರಮೇಳಗಳು ಈ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದಿದ್ದು, ಈ ಹಿಂದೆ ನಡೆದ ಮೇಳವು ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ಸುಮಾರು ೨ ಲಕ್ಷದಷ್ಟು ಜನ ಭೇಟಿ ನೀಡಿದ್ದರು. 2023ರಲ್ಲಿ ನಡೆಯುವ ಯಂತ್ರಮೇಳವು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಸಂಸ್ಕಾರವನ್ನು ಕೃಷಿಕರಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಲ್ಲಿ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ದೇಶ ವಿದೇಶಗಳ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಗತಿಪರ ಕೃಷಿಕರು ತಮ್ಮ ಅನುಭವದ ಆಧಾರದಲ್ಲಿ ತಾವೇ ತಯಾರಿಸಿದ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಕೃಷಿಕರ ಇಂದಿನ ಅವಶ್ಯಕತೆಗಳಿಗೆ ಸ್ಪಂದಿಸುವ ವಿಶೇಷ ಪ್ರಯತ್ನ ಇದಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ನೀಡುವ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುವ ಉದ್ದೇಶದೊಂದಿಗೆ ಕನಸಿನ ಮನೆ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತದೆ. ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ಮಾಣ, ಕಟ್ಟಡ ನಿರ್ಮಾಣದಲ್ಲಿನ ಹೊಸ ಹೊಸ ವಿನ್ಯಾಸಗಳ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು, ಹೊರಾಂಗಣ ಮತ್ತು ಒಳಾoಗಣ ಶೃಂಗಾರ ಸಾಧನಗಳ ಪ್ರದರ್ಶನ, ಬಳಸಬಹುದಾದ ಮತ್ತು ಬಳಸಬೇಕಾದ ಪರಿಕರಗಳ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗಿದೆ ಎಂದರು.
ಯುವ ಜನತೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿರುವ ಸಲುವಾಗಿ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು ಅನ್ವೇಷಿಸಿದ ಕೃಷಿ ಯಂತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಕೃಷಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸತನವನ್ನು ಹುಡುಕಿ ಅದಕ್ಕೆ ಪೂರಕವಾದ ಯಂತ್ರವನ್ನು ಅನ್ವೇಷಿಸಿ ಅದನ್ನು ಬಳಸಿ ಯಶಸ್ವಿಯಾದ ರೈತರ ಯಂತ್ರಗಳನ್ನು ಪ್ರದರ್ಶಿಸುವುದಕ್ಕೆ ಉಚಿತವಾದ ವೇದಿಕೆಯನ್ನು ಇಲ್ಲಿ ನೀಡಲಾಗುತ್ತದೆ. ಅಲ್ಲದೆ ಉತ್ತಮ ಸಂಶೋಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಅಲ್ಲದೇ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆಯಲಿದೆ. ಕೃಷಿ ಯಂತ್ರ ವಿಭಾಗದಲ್ಲಿ 140 ಸ್ಟಾಲ್ ಗಳಿವೆ. ಆಟೋಮೊಬೈಲ್ ವಿಭಾಗದಲ್ಲಿ 10, ಕನಸಿನ ಮನೆ ವಿಭಾಗದಲ್ಲಿ 73, ನರ್ಸರಿಯ 4, ವ್ಯಾಪಾರಕ್ಕೆ ಸಂಬಂದಿಸಿದ 26, ಆಹಾರ ಮಳಿಗೆಗಳು 19, ಹಾಗೂ ಸಾವಯವ ಕೃಷಿ ಮಳಿಗೆಗಳು 20 ಹೀಗೆ ಒಟ್ಟು 292 ಮಳಿಗೆಗಳು ಈ ಮೇಳದಲ್ಲಿವೆ ಎಂದು ಮಾಹಿತಿ ನೀಡಿದರು.































 
 

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಎಂಡಿ ಕೃಷ್ಣ ಕುಮಾರ್ ರೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಕೃಷಿ ಯಂತ್ರ ಮೇಳದ ಸಂಯೋಜಕ ರವಿಕೃಷ್ಣ ಡಿ. ಕಲ್ಲಾಜೆ, ಕ್ಯಾಂಪ್ಕೋ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಕೃಷ್ಣ ಪ್ರಸಾದ್ ಮಡ್ತಿಲ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top