ಇಂದು ಕಲಬುರಗಿಯಲ್ಲಿ ಬೃಹತ್ ಸಮಾವೇಶ
ಶಿವಮೊಗ್ಗ: ಈ ತಿಂಗಳು ಎರಡನೇ ಸಲ ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಕೂ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಫೆ.27 ರಂದು ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಉದ್ಘಾಟನೆಯ ನಂತರ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಇದು ರಾಜ್ಯದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ. ಈ ವಿಮಾನ ನಿಲ್ದಾಣ ಉದ್ಘಾಟನೆ ಮಾಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದೆ. ಫೆ.27 ರಂದು ಪ್ರಧಾನಿಯವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು 449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಕನಿಷ್ಠ ವೆಚ್ಚದಲ್ಲಿ ನಿರ್ಮಿಸಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ವಿಮಾನಗಳ ರಾತ್ರಿ ಇಳಿಯುವಿಕೆಯಂತಹ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ.
ಇಂದು ಕಲಬುರಗಿಗೆ ಆಗಮನ
ಮೋದಿ ಇಂದು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಆಗಮಿಸುತ್ತಿದ್ದು, ಕರ್ನಾಟಕ ಪ್ರವಾಸದ ಬಗ್ಗೆ ಕನ್ನಡದಲ್ಲೇ ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಜನತೆಯ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು 10 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ ಮತ್ತು ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಬೆಳಗ್ಗೆ 11 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಯನ್ನು ಬರಮಾಡಿಕೊಳ್ಳಲಿದ್ದಾರೆ. ಅಲ್ಲಿಂದ ಯಾದಗಿರಿ ಜಿಲ್ಲೆ ಹುಣಸಗಿ ತಲೂಕು ಕೊಡೆಕಲ್ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅವರು ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧೂನೀಕರಣ ಕಾಮಗಾರಿ ಉದ್ಘಾಟನೆ ಮಾಡಲಿದ್ದಾರೆ.