ಡಿಕ್ಕಿ ಹೊಡೆದು ಕಿಲೋಮೀಟರ್ ದೂರ ಎಳೆದೊಯ್ದ ಪಾತಕಿ
ಬೆಂಗಳೂರು: ಒನ್ ವೇಯಲ್ಲಿ ನಿಂತಿದ್ದ ಬೊಲೆರೋಗೆ ಡಿಕ್ಕಿ ಹೊಡೆದು, ಅದನ್ನು ಪ್ರಶ್ನಿಸಲು ಸ್ಕೂಟರ್ ಹಿಡಿದ ವೃದ್ಧ ಚಾಲಕನನ್ನು ಕಿ.ಮೀ.ಗಟ್ಟಲೆ ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ಸ್ಕೂಟರ್ ಸವಾರ ಸೊಹೇಲ್ ವಿರುದ್ಧ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ.
ಅಪಘಾತ ಎಸಗಿ ವೃದ್ಧನನ್ನು ಎಳೆದೊಯ್ದ ಸ್ಕೂಟರ್ ಸವಾರ ಸೊಹೇಲ್ ವಿರುದ್ಧ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮತ್ತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಹಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಈ ಕೃತ್ಯ ನಡೆದಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದ ಬೊಲೆರೋ ಚಾಲಕ 71 ವರ್ಷದ ಮುತ್ತಪ್ಪ ಅವರ ವಾಹನಕ್ಕೆ ಹೋಂಡಾ ಆಕ್ಟಿವಾದಲ್ಲಿ ಬಂದ ದ್ವಿಚಕ್ರ ಸವಾರ ಸೊಹೇಲ್ ಡಿಕ್ಕಿ ಹೊಡೆದಿದ್ದಾನೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸೊಹೇಲ್ ಸ್ಕೂಟಿ ಜತೆ ಪರಾರಿಯಾಗಲು ಯತ್ನಿಸಿದ್ದು, ಮುತ್ತಪ್ಪ ಆತನ ಗಾಡಿ ಹಿಡಿದುಕೊಂಡಿದ್ದಾರೆ. ಅದನ್ನು ನೋಡಿಯೂ ಕೂಡ ಆತ ಏಕಾಏಕಿ ಗಾಡಿ ಚಲಾಯಿಸಿಕೊಂಡು ಹೋಗಿದ್ದಾನೆ.
ಮುತ್ತಪ್ಪ ಚಲದಿಂದ ಸ್ಕೂಟಿಯನ್ನು ಬಿಡದೆ ಹಿಡಿದುಕೊಂಡಾಗ ಒಂದು ಕಿಲೋಮೀಟರ್‌ಗೂ ಹೆಚ್ಚು ದೂರು ಡಾಂಬರು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಸಿಸಿಟಿವಿಗಳಲ್ಲಿ ದಾಖಲಾಗಿ ವೀಡಿಯೊ ವೈರಲ್ ಆದ ಬಳಿಕ ಆರೋಪಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.