ಸಾರ್ವಜನಿಕವಾಗಿ ಕೈ ಕತ್ತರಿಸಿ ಕ್ರೂರ ಶಿಕ್ಷೆ ವಿಧಿಸಿದ ತಾಲಿಬಾನ್
ಕಾಬೂಲ್ : ಅಫಘಾನಿಸ್ಥಾನದ ತಾಲಿಬಾನ್ ಸರಕಾರ ಕಳ್ಳತನ ಆರೋಪ ಎದುರಿಸುತ್ತಿದ್ದ ನಾಲ್ಕು ಮಂದಿಯ ಕೈಗಳನ್ನು ಸಾರ್ವಜನಿಕವಾಗಿ ಕತ್ತರಿಸಿ ಎಸೆವ ಶಿಕ್ಷೆ ವಿಧಿಸಿದೆ.
ಕಳ್ಳತನ ಆರೋಪದಲ್ಲಿ 9 ಮಂದಿ ಸೆರೆಯಾಗಿದ್ದರು. ಈ ಪೈಕಿ ನಾಲ್ಕು ಮಂದಿಗೆ ಕೈ ಕಟ್ ಶಿಕ್ಷೆ ಹಾಗೂ ಉಳಿದವರಿಗೆ ಸಾರ್ವಜನಿಕೆವಾಗಿ ಛಡಿಯೇಟು ವಿಧಿಸುವ ಶಿಕ್ಷೆ ವಿಧಿಸಲಾಗಿತ್ತು.
ಕಂದಹಾರ್‌ನ ಅಹ್ಮದ್ ಶಾಹಿ ಫುಟ್ಬಾಲ್ ಸ್ಟೇಡಿಯಂನಲ್ಲಿ ಮಂಗಳವಾರ ಬಹಿರಂಗವಾಗಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಎಲ್ಲ ಒಂಬತ್ತು ಆರೋಪಿಗಳಿಗೆ 39 ಛಡಿಯೇಟು ಕೊಟ್ಟ ಬಳಿಕ ನಾಲ್ಕು ಮಂದಿಯ ಕೈಗಳನ್ನು ಕತ್ತರಿಸಲಾಗಿದೆ.
ತಾಲಿಬಾನ್ ಸರ್ಕಾರಿ ಅಧಿಕಾರಿಗಳು, ಧಾರ್ಮಿಕ ಗುರುಗಲು ಮತ್ತು ಸಾರ್ವಜನಿಕರ ಎದುರಲ್ಲಿ ಈ ಶಿಕ್ಷೆ ಜಾರಿಗೊಳಿಸಲಾಗಿದೆ. ಆರೋಪಿಗಳನ್ನು ಸಾಲಾಗಿ ಕುಳ್ಳಿರಿಸಿ ಒಬ್ಬೊಬ್ಬರನ್ನೇ ಕರೆದು ಶಿಕ್ಷಿಸಲಾಗಿದೆ. ಕಳೆದ ತಿಂಗಳು ತಾಲಿಬಾನ್ ಕೊಲೆ ಆರೋಪಿಯೊಬ್ಬನನ್ನು ಬಹಿರಂಗವಾಗಿ ಗಲ್ಲಿಗೇರಿಸಿತ್ತು. ಆರಂಭದಲ್ಲಿ ಬದಲಾಗಿದ್ದೇನೆ ಎಂದು ತೋರಿಸಿಕೊಂಡಿದ್ದ ತಾಲಿಬಾನ್ ಈಗ ತನ್ನ ಕ್ರೂರ ಮತಾಂಧ ಮುಖವನ್ನು ತೋರಿಸಲಾರಂಭಿಸಿದೆ.