ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸಂಕಲ್ಪ
ಉಡುಪಿ : ಬಡವರಿಗೆ ಆರು ಮನೆ ನಿರ್ಮಿಸಿಕೊಡಲು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸಂಕಲ್ಪ ಮಾಡಿದ್ದಾರೆ. ದೇವಾಲಯದ ಹುಂಡಿಗೆ ಹಾಕುವ ಹಣ ಹೇಗೆ ವಿನಿಯೋಗ ಆಗುತ್ತದೋ ಗೊತ್ತಿಲ್ಲ, ರಾಮ ರಾಜ್ಯಕ್ಕೋಸ್ಕರ ರಾಮಮಂದಿರದ ನಿರ್ಮಾಣ ಆಗುತ್ತಿದೆ. ಮಂದಿರ ಕಟ್ಟುವ ಜೊತೆಗೆ ಬಡವರಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡೋಣ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ತನ್ನ 60ನೇ ವಯಸ್ಸಿನ ವೇಳೆಗೆ 6 ಮನೆ ಕಟ್ಟಿಸಿಕೊಡಲು ಪೇಜಾವರ ಶ್ರೀ ನಿರ್ಧರಿಸಿದ್ದು, ಒಂದು ವರ್ಷದ ಅವಧಿಯಲ್ಲಿ ಆರು ಮನೆ ನಿರ್ಮಿಸಿ ಕೊಡಲು ಪೇಜಾವರಶ್ರೀ ಸಂಕಲ್ಪ ಮಾಡಿದ್ದಾರೆ.
ಒಂದು ವರ್ಷದ ಕಾಲಾವಕಾಶದೊಳಗೆ ಬಡವರಿಗೆ ಮನೆ ನಿರ್ಮಾಣ ಮಾಡೋಣ. ಮಂದಿರದಿಂದ ದೇಶಕ್ಕೇನು ಲಾಭ ಅಂತ ಜನ ಕೇಳುತ್ತಾರೆ. ಮಂದಿರದ ಜತೆ ದೇಶದ ಮಂದಿಗೂ ಸಹಾಯ ಮಾಡೋಣ. ಪ್ರಧಾನಿ ಮೋದಿ ಒಂದು ದಿನವನ್ನು ಸಂಕಲ್ಪ ದಿನ ಎಂದು ಘೋಷಿಸಬೇಕು. ದೇಶದ ಭಗವದ್ಭಕ್ತರು, ದೇಶಪ್ರೇಮಿಗಳು ಯೋಜನೆಗೆ ಕೈಜೋಡಿಸಬೇಕು ಎಂದು ಪೇಜಾವರ ಶ್ರೀ ಹೇಳಿದ್ದಾರೆ
ಈ ಸೇವಾ ಕಾರ್ಯಕ್ಕೆ ಒಂದು ಆಯಪ್ ಸಿದ್ಧ ಮಾಡಬೇಕು. ಪ್ರತಿ ಜಿಲ್ಲೆ, ರಾಜ್ಯದಲ್ಲಿ ಕೈಗೊಂಡ ಕೆಲಸ ದಾಖಲಾಗಬೇಕು. ಒಂದು ವರ್ಷದ ಉತ್ತಮ ಕಾರ್ಯಗಳನ್ನು ಶ್ರೀರಾಮ ದೇವರಿಗೆ ಅರ್ಪಿಸೋಣ. ಮನೆ ನಿರ್ಮಾಣದ ಜತೆ ಗೋವು, ವಿದ್ಯಾರ್ಥಿಗಳು, ರೋಗಿಗಳ ದತ್ತು ಸ್ವೀಕಾರ ಮಾಡೋಣ. ದೇಶದ ಉದ್ದಗಲದಲ್ಲಿ ಜನರಲ್ಲಿ ಈ ಪರಿವರ್ತನೆ ಆಗಬೇಕು. ದೇಶಾದ್ಯಂತ ಸೇವಾ ಕಾರ್ಯ ಐಚ್ಛಿಕವಾಗದೆ, ಕಡ್ಡಾಯ ಆಗಬೇಕು. ಜೀವನದಲ್ಲಿ ವೈಭವದ ಆಚರಣೆಯ ಜತೆ ಬಡವರ ಬಗ್ಗೆ ಅನುಕಂಪ ತೋರೋಣ. ದೇವಭಕ್ತಿ ಮತ್ತು ದೇಶಭಕ್ತಿ ಬೇರೆ ಬೇರೆಯಲ್ಲ. ಈ ಯೋಜನೆಯ ಕುರಿತು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.