ಪುತ್ತೂರು: ನೆಹರೂನಗರದ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಮೇಲ್ಸೆತುವೆ ವಿಸ್ತರಣೆಗೆ 5.34 ಕೋಟಿ ರೂ. ಮಂಜೂರಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ, ನಮ್ಮ ಒತ್ತಾಯಕ್ಕೆ ಬೆಲೆ ಸಿಕ್ಕಂತಾಗಿದೆ. ಈ ಹಿಂದೆ ತಾನು ಕೂಡ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು, ರೈಲ್ವೇ ಓವರ್ ಬ್ರಿಡ್ಜಿನ ಅಗತ್ಯತೆಯನ್ನು ತಿಳಿಸಿದ್ದು, ನಮ್ಮೆಲ್ಲರ ಪ್ರಯತ್ನ ಫಲ ನೀಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ರೈಲ್ವೇ ಇಲಾಖೆಯ ಸೌತ್ ವೆಸ್ಟರ್ನ್ ವಿಭಾಗ ಅನುದಾನ ಮಂಜೂರುಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ 50-50 ಯೋಜನೆಯಡಿ ಕಾಮಗಾರಿ ನಡೆಸುವ ಪ್ರಸ್ತಾಪ ಇತ್ತು. ಆದರೆ ಇದೀಗ, ರೈಲ್ವೇ ಇಲಾಖೆಯೇ ಪೂರ್ಣ ಕಾಮಗಾರಿಯನ್ನು ನಡೆಸಲಿದೆ. ಇದಕ್ಕಾಗಿ ಎಸ್ಟಿಮೇಟ್ ಸಿದ್ಧವಾಗಿದ್ದು, 5.35 ಕೋಟಿ ರೂ. ಬಿಡುಗಡೆ ಮಾಡಿದೆ. ಆದ್ದರಿಂದ ಅನುದಾನ ಬಿಡುಗಡೆ ಮಾಡಿದ ಕೇಂದ್ರದ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೆಹರುನಗರದ ವಿವೇಕಾನಂದ ಕಾಲೇಜಿನಲ್ಲಿ ಸುಮಾರು 12 ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ದಿನನಿತ್ಯ ಇದೇ ರಸ್ತೆಯಲ್ಲಿ ಓಡಾಡುವುದರಿಂದ, ದಿನನಿತ್ಯ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿತ್ತು. ಮುಂದೆ ಈ ಸಮಸ್ಯೆ ಇಲ್ಲವಾಗಲಿದೆ ಎಂದರು.