ಪುತ್ತೂರಿಗೆ ತಂದ ದೂರದೃಷ್ಟಿಯ ಯೋಜನೆಗಳೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆ : ಸಂಜೀವ ಮಠಂದೂರು ವಿಶ್ವಾಸ

ಪುತ್ತೂರು: ಅಧಿಕಾರಸ್ಥರಿಗೆ ಸವಾಲು ಅನೇಕವಂತೆ. ಆದ್ದರಿಂದ ಕೇಂದ್ರದಲ್ಲಿ, ರಾಜ್ಯದಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರರೂಢ ಬಿಜೆಪಿ ಕಡೆ ತೂರಿ ಬರುವ ಪ್ರಶ್ನೆಗಳ, ಸವಾಲುಗಳ ಸಂಖ್ಯೆ ಅಧಿಕವೇ. ಮಾಡಿರುವ ಅಭಿವೃದ್ಧಿ ಕಾರ್ಯಗಳೇಷ್ಟೇ ಇರಲಿ, ಅವುಗಳನ್ನು ಬದಿಗೊತ್ತಿ ವಿವಾದಗಳ ಹುಡುಕಾಟದಲ್ಲಿವೆಯೇ ವಿಪಕ್ಷಗಳು ಎನ್ನುವುದು ಚುನಾವಣೆ ಸಂದರ್ಭ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಮತ್ತೊಮ್ಮೆ ಅಧಿಕಾರ ಪಡೆದೇ ತೀರಬೇಕು ಎನ್ನುವ ಹಪಹಪಿಯಲ್ಲಿರುವ ವಿಪಕ್ಷಗಳು, ಸಣ್ಣ – ಪುಟ್ಟ ವಿವಾದಗಳ ವಿಜೃಂಭಣೆಯಲ್ಲಿವೆ ಎನ್ನುವ ಮಾತು ಕೇಳಿಬರುತ್ತಿವೆ. ಹಾಗಾದರೆ ಬಿಜೆಪಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇನು? ಚುನಾವಣೆಗೆ ಯಾವ ರೀತಿಯಲ್ಲಿ ತಯಾರಿ ನಡೆಸಿವೆ? ವಿಪಕ್ಷಗಳ ಸವಾಲಿಗೆ ಹೇಗೆ ಉತ್ತರ ನೀಡಲು ತಯಾರಾಗಿವೆ ಎಂಬೆಲ್ಲಾ ವಿಚಾರಗಳ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ನ್ಯೂಸ್ ಪುತ್ತೂರು ಜೊತೆ ಮಾತನಾಡಿದ್ದಾರೆ.

ವಿಧಾನಸಭೆ ಚುನಾವಣೆ ಯಾವಾಗ? ನಿಮ್ಮ ಸಿದ್ಧತೆಗಳು ಹೇಗಿದೆ?

– ಕಳೆದ 5 ವರ್ಷಗಳಲ್ಲಿ 4 ವರ್ಷ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಡಬಲ್ ಇಂಜಿನ್ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಮತವಾಗಿ ಪರಿವರ್ತನೆ ಆಗುವುದು ನಿಶ್ಚಿತ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರು ಹತ್ತಿರದಿಂದ ಬಲ್ಲವರು. ಆಯುಷ್ಮಾನ್, ಕಿಸಾನ್ ಸಮ್ಮಾನ್, ಜಲಸಿರಿ, ಜೆಜೆಎಂ ಮೊದಲಾದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿರುವ ರೀತಿಗೆ ಈಗಾಗಲೇ ಪ್ರಶಂಸೆ ವ್ಯಕ್ತವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಘೋಷಣೆಗೆ ಪೂರಕವಾಗಿ ನಡೆಯುತ್ತಿರುವ ಕೆಲಸಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ಕೆಲಸಗಳು ನಡೆಯುತ್ತಿವೆ. ಜೆಜೆಎಂ ಯೋಜನೆಯಡಿ ಪುತ್ತೂರಿಗೆ 67 ಕೋಟಿ ರೂ. ಮಂಜೂರಾಗಿರುವುದೇ ಇದಕ್ಕೆ ಸಾಕ್ಷಿ. ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿರುವ ಸಾಲ ಮನ್ನಾವನ್ನು ಜಾರಿಗೆ ತಂದಿರುವುದು ಬಿ.ಎಸ್. ಯಡಿಯೂರಪ್ಪ ಎನ್ನುವುದನ್ನು ಜನ ಮರೆತಿಲ್ಲ. ರೈತನ ಬೆಳೆಸಾಲವನ್ನು ಮನ್ನಾ ಮಾಡಿರುವುದು ಬಿಜೆಪಿ ಸರಕಾರ. 500 ಕೋಟಿ ರೂ.ನಲ್ಲಿ ಕ್ಷೀರಾಭಿವೃದ್ಧಿ ಬ್ಯಾಂಕ್ ಸ್ಥಾಪಿಸುವ ಯೋಜನೆ ರಾಜ್ಯ ಸರಕಾರದ ಮುಂದಿದೆ. ಪಶ್ಚಿಮ ವಾಹಿನಿಗೆ 500 ಕೋಟಿ ರೂ. ನೀಡಲಾಗಿದೆ. ನಮ್ಮ ಕೆಲಸಗಳನ್ನು ಜನರು ಹತ್ತಿರದಿಂದ ನೋಡಿದ್ದಾರೆ ಎನ್ನುವ ಕಾರಣಕ್ಕಾಗಿ, ನಾವು ಮಾಡಿರುವ ಕೆಲಸಗಳನ್ನು ಪ್ರಚಾರ ಮಾಡುವ ಗೋಜಿಗೆ ಹೋಗಿಲ್ಲ.































 
 

ಇನ್ನು ಚುನಾವಣಾ ಸಿದ್ಧತೆಗಳ ಬಗ್ಗೆ ಹೇಳುವುದಾದರೆ – 5 ವರ್ಷ ಮುಗಿಯುತ್ತಾ ಬರುತ್ತಿದ್ದಂತೆ ಚುನಾವಣೆಗೆ ತಯಾರಿ ನಡೆಸುವುದು ಸಹಜ. ಹಾಗೆಂದು, ನಾವು ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸನ್ನು ನನಸು ಮಾಡಲು ಶ್ರಮಿಸಿದ್ದೇವೆ. ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಚುನಾವಣೆಯ ದೃಷ್ಟಿಯಿಂದಲೂ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಬೂತ್ ಸಮಿತಿಗಳನ್ನು ಚುರುಕುಗೊಳಿಸಲಾಗಿದೆ. ಕೀ ವೋಟರ್ಸ್ ಪಟ್ಟಿ ಸಿದ್ಧವಾಗಿದೆ. ಎಲ್ಲರಿಗೂ ಕೆಲಸ ಕಾರ್ಯಗಳನ್ನು ಹಂಚಲಾಗಿದೆ.

ಕ್ಷೇತ್ರದಲ್ಲಿ ನೀವು ನಡೆಸಿದ ಅಭಿವೃದ್ಧಿ ಕಾರ್ಯಕ್ರಮಗಳ್ಯಾವ್ಯಾವು?

– ನನ್ನ ಅವಧಿಯಲ್ಲಿ ಒಟ್ಟು ಕಾಮಗಾರಿಗಳಿಗಾಗಿ 1121.10 ಕೋಟಿ ರೂ.ಗೂ ಅಧಿಕ ಅನುದಾನವನ್ನು ಪುತ್ತೂರಿಗೆ ತರಲಾಗಿದೆ.

– ಗರೀಬ್ ಕಲ್ಯಾಣ್ ಯೋಜನೆಯನ್ನು ನಿರಂತರವಾಗಿ ಮಾಡುತ್ತಿದ್ದೇವೆ.

– ಶಾಲಾ ಕೊಠಡಿ, ಅಂಗನವಾಡಿ ಕೊಠಡಿ, ರಸ್ತೆ, ಕುಡಿಯುವ ನೀರಿನ ಬೇಡಿಕೆ ಬಹಳಷ್ಟಿತ್ತು. ಇವುಗಳನ್ನು ಹಂತಹ0ತವಾಗಿ ನೆರವೇರಿಸಲಾಗಿದೆ.

– ನಾನು ಅಧಿಕಾರ ತೆಗೆದುಕೊಳ್ಳಬೇಕಿದ್ದರೆ ಪುತ್ತೂರು ನಗರಸಭೆ ಸ್ವಚ್ಛತೆಯಲ್ಲಿ 36ನೇ ಸ್ಥಾನದಲ್ಲಿತ್ತು. ಇಂದು 3ನೇ ಸ್ಥಾನದಲ್ಲಿದೆ.

– ನಗರಸಭೆಯ 31 ವಾರ್ಡ್ಗಳಿಗೆ 115 ಕೋಟಿ ರೂ.ನಲ್ಲಿ ಜಲಸಿರಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ.

– ನಗರೋತ್ಥಾನದಿಂದ 30 ಕೋಟಿ ರೂ. ನೀಡಲಾಗಿದೆ.

– 5 ವರ್ಷಗಳ ಹಿಂದೆ ಕೇವಲ 1 ಪಾರ್ಕ್ ಇತ್ತು. ಇಂದು 7 ಪಾರ್ಕ್ಗಳು ಪುತ್ತೂರಿನಲ್ಲಿವೆ.

– ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿ ದಾನಿಗಳ ನೆರವಿನಿಂದ 7 ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ.

– ಚತುಷ್ಪಥ ರಸ್ತೆಗಳಿಗೆ ಎಲ್‌ಇಡಿ ಬಲ್ಬ್, ರಸ್ತೆಗಳಿಗೆ ಕಾಂಕ್ರಿಟೀಕರಣ ಮಾಡಲಾಗಿದೆ.

– ಸ್ವಚ್ಛತೆ ದೃಷ್ಟಿಯಿಂದ 15 ಸಾವಿರ ಮನೆಗಳಿಗೆ ಕಸ ವಿಲೇವಾರಿಗಾಗಿ ಬಕೆಟ್ ನೀಡಿದ್ದೇವೆ.

– ಪಾರದರ್ಶಕ ಆಡಳಿತ ಮಾತ್ರವಲ್ಲ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ.

– 67 ಕೋಟಿ ರೂ.ವನ್ನು ಜಲಜೀವನ ಮಿಷನ್‌ಗಾಗಿ ವಿನಿಯೋಗಿಸುತ್ತಿದ್ದೇವೆ.

– ಮಲ್ಟಿವಿಲೇಜ್ ವಾಟರ್ ಸಪ್ಲೈಗೆ 320 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಕೆ

– ಮುಖ್ಯರಸ್ತೆಗಳ ವಿಶೇಷ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 45 ಕೋಟಿ ರೂ., ತಡೆಗೋಡೆಗಾಗಿ 15 ಕೋಟಿ ರೂ.

– ಕಿಂಡಿಅಣೆಕಟ್ಟು ಹಾಗೂ ಸೇತುವೆ ಸಹಿತ ಕಿಂಡಿಅಣೆಕಟ್ಟುಗಳ ನಿರ್ಮಾಣ

– ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರಾವಳಿ ಅವಳಿ ವೀರರಾದ ಕೋಟಿ – ಚೆನ್ನಯರ ಹೆಸರು.

– ಕ್ರೀಡಾಂಗಣಕ್ಕೆ 41 ಎಕರೆ ಜಾಗ ಮಂಜೂರು ಮಾಡಲಾಗಿದೆ.

– ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ 30 ಕೋಟಿ ರೂ. ನೀಡಿದ್ದು ಮಾತ್ರವಲ್ಲ, ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ.

– 120 ಕಿಲೋ ಮೀಟರ್ ಗ್ರಾಮೀಣ ರಸ್ತೆ ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿದೆ.

– ಉಪ್ಪಿನಂಗಡಿ, ವಿಟ್ಲ ನಾಡಕಚೇರಿಗೆ ಹೊಸ ಕಟ್ಟಡ.

– ಬೆಟ್ಟಂಪಾಡಿ ಪದವಿ ಕಾಲೇಜಿಗೆ 1 ಕೋಟಿ ರೂ., ವಿಟ್ಲ ಕಾಲೇಜಿಗೆ 1 ಕೋಟಿ ರೂ., ಉಪ್ಪಿನಂಗಡಿಗೆ 2 ಕೋಟಿ ರೂ. ಅನುದಾನ ನೀಡಲಾಗಿದೆ.

– ಮಹಿಳಾ ಕಾಲೇಜಿಗೆ ಬದಲಿ ಜಮೀನನ್ನು ವ್ಯವಸ್ಥೆಗೊಳಿಸಿದ್ದು, 5.5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಸದ್ಯವೇ ಶಿಲಾನ್ಯಾಸ ನೆರವೇರಲಿದೆ.

– ಶಾಲೆ, ಅಂಗನವಾಡಿ, ಐಟಿಐ, ಕಾಲೇಜುಗಳಿಗೆ ಸ್ಮಾರ್ಟ್ ಕ್ಲಾಸ್, ನೂತನ ಕೊಠಡಿ, ಕುಡಿಯುವ ನೀರಿನ ಘಟಕ, ಬೆಂಚ್ – ಡೆಸ್ಕ್, ಶೌಚಾಲಯ ಇತ್ಯಾದಿ ನೀಡಲಾಗಿದೆ.

ಇದರೊಂದಿಗೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ಮಳೆಹಾನಿ ಅನುದಾನ, ಸಮಾಜ ಕಲ್ಯಾಣ ಇಲಾಖೆಯಿಂದ ಅನುಸೂಚಿತ ಜಾತಿ / ಗಿರಿಜನ ಉಪಯೋಜನೆ, ಪುತ್ತೂರು- ಉಪ್ಪಿನಂಗಡಿ ಚತುಷ್ಪಥ ರಸ್ತೆ, ಜಿಲ್ಲಾ ಮುಖ್ಯರಸ್ತೆಯ ಸೇತುವೆ ಸುಧಾರಣೆ, ರಸ್ತೆ ನವೀಕರಣ, ರಸ್ತೆ ಅಭಿವೃದ್ಧಿ, ಕಿರು ಸೇತುವೆ ಪುನರ್ ನಿರ್ಮಾಣ, ಸೇತುವೆಗೆ ತಡೆಗೋಡೆ, ರಸ್ತೆ ಮತ್ತು ಸೇತುವೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ಮಾಣ, ತರಗತಿ ಕೊಠಡಿ, ಶೌಚಾಲಯ ಬ್ಲಾಕ್ ನಿರ್ಮಾಣ, ಕಾಲೇಜುಗಳಿಗೆ ನೂತನ ಕಟ್ಟಡ, ಮೂಲಸೌಕರ್ಯ ಅಭಿವೃದ್ಧಿ, ನ್ಯಾಯಾಲಯ ನೂತನ ಸಂಕೀರ್ಣ, ಕಿಂಡಿ ಅಣೆಕಟ್ಟು ನಿರ್ಮಾಣ, ಕೃಷಿ ಭೂಮಿ ಸಂರಕ್ಷಣಾ ಕಾಮಗಾರಿ, ಸೇತುವೆ ಸಹಿತ ಕಿಂಡಿಅಣೆಕಟ್ಟು ನಿರ್ಮಾಣ, ಕೆರೆ ಅಭಿವೃದ್ಧಿ, ಪುಷ್ಕರಿಣಿ ಅಭಿವೃದ್ಧಿ, ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ, ವಿದ್ಯುತ್ ಸಂಪರ್ಕ ವಿದ್ಯುತೀಕರಣ, ಮೆಸ್ಕಾಂ ವಿಭಾಗಕ್ಕೆ ನೂತನ ಕಟ್ಟಡ, ಜಲಸಿರಿ ಯೋಜನೆ, ಘನತ್ಯಾಜ್ಯ ವಿಲೇವಾರಿ ಕಾರ್ಯಗಳಿಗೆ ಅನುದಾನ, ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ, ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ, ರೈತ ಸಂಪರ್ಕ ಕೇಂದ್ರಗಳಿಗೆ ನೂತನ ಕಟ್ಟಡ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ. ಸೇವಾ ಕೇಂದ್ರ ಕಟ್ಟಡ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ.

ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಮತಗಳಾಗಿ ಪರಿವರ್ತನೆ ಆಗುತ್ತದೆ ಎನ್ನುವ ವಿಶ್ವಾಸವಿದೆಯೇ?

– ಖಂಡಿತಾ ಇದೆ.
2018ರವರೆಗೆ ಪುತ್ತೂರು ಕ್ಷೇತ್ರದಲ್ಲಿ ಆಗದಷ್ಟು ಕೆಲಸಗಳು ನನ್ನ ಅವಧಿಯಲ್ಲಿ ಆಗಿದೆ. ಪ್ರತಿ ಗ್ರಾಮ ಪಂಚಾಯತ್, ಗ್ರಾಮಗಳಿಗೆ ಅನುದಾನ ಹಂಚಿಕೆ ಮಾಡಿದ್ದು, ಪ್ರತಿ ಕಡೆಯೂ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈ ಅಭಿವೃದ್ಧಿ ಕಾರ್ಯಗಳೇ ಮತವಾಗಿ ಪರಿವರ್ತನೆ ಆಗುವುದು ಖಂಡಿತಾ. ಆದ್ದರಿಂದ ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಯಾವುದೇ ಗೊಂದಲ ಬೇಡ.

ಜಿಲ್ಲಾ ಕೇಂದ್ರ ಸೇರಿದಂತೆ ನಿಮ್ಮ ದೂರದೃಷ್ಟಿಯ ಯೋಜನೆಗಳೇನು?

– ಆಸುಪಾಸಿನ ಜಿಲ್ಲೆಗಳಲ್ಲಿ ಇರದೇ ಇರುವ ಕ್ರಿಕೆಟ್ ಕ್ರೀಡಾಂಗಣ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿದೆ.

ಉಪ್ಪಿನಂಗಡಿಯಲ್ಲಿ 110 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಗೊಳ್ಳಲಿದೆ.

ಎಸ್ಪಿ ಕಚೇರಿ ಪುತ್ತೂರಿಗೆ ವರ್ಗಾಯಿಸುವಂತೆ ಗೃಹ ಸಚಿವರ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಎಸ್ಪಿ ಕಚೇರಿ ಬಂದಾಗ, ಪುತ್ತೂರು ಜಿಲ್ಲಾ ಕೇಂದ್ರಕ್ಕೆ ಇನ್ನು ಹತ್ತಿರವಾಗಲಿದೆ.

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು 340 ಕೋಟಿ ರೂ. ಅನುದಾನಕ್ಕಾಗಿ ಹಣಕಾಸು ಇಲಾಖೆಗೆ ಡಿಪಿಆರ್ ಸಲ್ಲಿಕೆಯಾಗಿದೆ.

ಮುಂಬರುವ ಸವಾಲುಗಳನ್ನು ಪುತ್ತೂರು ಸಮರ್ಥವಾಗಿ ಎದುರಿಸಲಿಕ್ಕಾಗಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗಿದೆ. ಮಾತ್ರವಲ್ಲ, ಡಯಾಲಿಸಿಸ್ ಸಂಖ್ಯೆಯನ್ನು 12ಕ್ಕೆ ಏರಿಸಲಾಗಿದೆ.

ಸಂಸದರ ಮೂಲಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ 49 ಕೋಟಿ ರೂ. ಅನುದಾನ ತರಿಸಿಕೊಂಡು, ಮಾಣಿ – ಮೈಸೂರು ಹೆದ್ದಾರಿಯಲ್ಲಿ ಬರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕಿರಿದಾದ ಸೇತುವೆಗಳನ್ನು ಅಗಲಗೊಳಿಸಲಾಗುತ್ತಿದೆ. ಮುಂದೆ ಇದು ಹೆದ್ದಾರಿ ಅಗಲೀಕರಣಕ್ಕೂ ಪೂರಕವಾಗಿರಲಿದೆ.

ನಗರಸಭೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂಪುರೇಷೆ ಸಿದ್ಧವಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಅರಸು ಭವನ, ಮೌಲಾನಾ ಅಬ್ದುಲ್ ಕಲಾಂ ಶಾಲೆಗಳನ್ನು ನಿರ್ಮಿಸಲಾಗಿದೆ.

ಹೀಗೆ ಪುತ್ತೂರಿನ ಮುಂದಿನ 50 ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ಹಲವು ಯೋಜನೆಗಳನ್ನು ತರಲಾಗಿದೆ. ಇನ್ನಷ್ಟು ಯೋಜನೆಗಳನ್ನು ತರುವ ಪ್ರಯತ್ನ ನಡೆಸುತ್ತಿದ್ದೇನೆ.

ಲಿಫ್ಟ್ ಇರಿಗೇಷನ್‌ಗೆ ಡಿಪಿಆರ್ ಸಿದ್ಧವಾಗಿದೆ. ಯೋಜನೆ ಜಾರಿಯಾದರೆ ಕೃಷಿಗೆ ನೀರಿನ ಕೊರತೆ ಆಗಲಿಕ್ಕಿಲ್ಲ.

ಕೈಗಾರಿಕಾ ಪ್ರದೇಶಕ್ಕಾಗಿ 100 ಎಕರೆಯನ್ನು ನೀಡುವ ಉದ್ದೇಶವಿದೆ. ಇದಕ್ಕಾಗಿ ಆರ್ಯಾಪಿನಲ್ಲಿ 15 ಎಕರೆ, ಕಾವಿನಲ್ಲಿ 4 ಎಕರೆಯನ್ನು ಈಗಾಗಲೇ ಗೊತ್ತುಪಡಿಸಲಾಗಿದೆ.

ಮಲ್ಲಿಕಾ ಪ್ರಸಾದ್ ಅವರು ಶಾಸಕರಾಗಿದ್ದಾಗ ಆಗಿನ ಮಿನಿವಿಧಾನಸೌಧ, ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್, ವಸತಿ ಶಾಲೆ ಹೀಗೆ ಅನೇಕ ಯೋಜನೆಗಳನ್ನು ಪುತ್ತೂರಿಗೆ ತಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಹಳಷ್ಟು ದೂರದೃಷ್ಟಿಯ ಅಭಿವೃದ್ಧಿ ಕಾರ್ಯ ನಡೆದಿವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಬೇಕಿದ್ದರೆ ತುಲನೆ ಮಾಡಿ ನೋಡಿ. ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಗಿದೆ.

ಸಿಟ್ಟಿಂಗ್ ಎಂಎಲ್‌ಎ ಮುಂದಿನ ಅಭ್ಯರ್ಥಿ ಎನ್ನುವ ಮಾತು ಕೇಳಿಬರುತ್ತಿದೆ. ನಿಜವೇ?

– ಅಭ್ಯರ್ಥಿ ವಿಚಾರದಲ್ಲಿ ನಮ್ಮಲ್ಲಿ ಗೊಂದಲವೇ ಇಲ್ಲ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಇತ್ತೀಚೆಗೆ ಭಾರೀ ಸದ್ದು ಮಾಡಿತು. ಚುನಾವಣಾ ಸಂದರ್ಭದಲ್ಲಿ ಅಡಕೆ ರಾಜಕೀಯ ದಾಳವಾಯ್ತೇಂದು ಅನಿಸುತ್ತಿದೆಯೇ?

– ಆರಗ ಜ್ಞಾನೇಂದ್ರ ಅವರು ಸ್ವತಃ ಅಡಕೆ ಬೆಳೆಗಾರ. ಸಹಕಾರಿ ರಂಗದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜಕೀಯ ಭೀಷ್ಮ ಎಂದೇ ಕರೆಸಿಕೊಂಡ ಪುತ್ತೂರಿನ ಮಾಜಿ ಶಾಸಕ ರಾಮ್ ಭಟ್ ಅವರು ಕೂಡ ಕೆಲ ವರ್ಷಗಳ ಹಿಂದೆಯೇ ಅಡಕೆಗೆ ಪರ್ಯಾಯ ಬೆಳೆ ಅಗತ್ಯ ಎಂಬ ಮಾತನ್ನು ಹೇಳಿದ್ದರು. ಅದೇ ಮಾತನ್ನು ಈಗ ಆರಗ ಜ್ಞಾನೇಂದ್ರ ಅವರು ಪುನರುಚ್ಚರಿಸಿದ್ದಾರೆ. ಅವರ ಹೇಳಿಕೆ, ಅವರ ಮನಸ್ಸಿನ ಭಾವನೆ. ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಅಡಕೆಗೆ ಸರಕಾರ ಎಲ್ಲಾ ರೀತಿಯ ಸಹಾಯವನ್ನು ನೀಡಿದೆ. ಹಾಗೆಂದು, ಭವಿಷ್ಯದ ಸವಾಲುಗಳನ್ನು ಗಮನಿಸಿ, ಕೃಷಿಕರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜವಾಬ್ದಾರಿಯೂ ಸರಕಾರದ ಮೇಲಿದೆ. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ – ಆರಗ ಜ್ಞಾನೇಂದ್ರ ಅವರ ಹೇಳಿಕೆ ಸರಿಯಾಗಿಯೇ ಇದೆ. ಹೇಳಿಕೆಯಲ್ಲೂ ಯಾವುದೇ ಗೊಂದಲ ಇಲ್ಲ.

ರೈಲ್ವೇ ಅಂಡರ್‌ಪಾಸ್ ಕನಸು ಕೊನೆಗೂ ನನಸಾಗುತ್ತಿದೆ.

– 13 ಕೋಟಿ ರೂ.ನ ಯೋಜನೆ. ಬಹುಕಾಲದ ಜನರ ನಿರೀಕ್ಷೆ ಈಗ ಈಡೇರುತ್ತಿದೆ. ಈ ಹಿಂದೆ ಪುತ್ತೂರಿನಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾದವರು ಇದ್ದರು. ಅವರಿಂದಲೂ ಏನು ಮಾಡಲು ಸಾಧ್ಯವಾಗಿಲ್ಲ. ಯಾಕೆ ಸಾಧ್ಯವಾಗಿಲ್ಲ ಎಂದರೆ – ಇಚ್ಛಾಶಕ್ತಿಯ ಕೊರತೆ. ಈ ಬಾರಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು, ರೈಲ್ವೇ ಅಂಡರ್‌ಪಾಸ್ ಸಾರ್ವಜನಿಕರ ಬಳಕೆಗೆ ಕೆಲವೇ ದಿನಗಳಲ್ಲಿ ತೆರೆದುಕೊಳ್ಳಲಿದೆ. ಮುಂದೆ ರೈಲ್ವೇ ಕ್ರಾಸಿಂಗ್‌ಗಾಗಿ ತಾಸುಗಟ್ಟಲೆ ಕಾಯುವ ಅವಶ್ಯಕತೆಯೇ ಇರುವುದಿಲ್ಲ.

ಇದೀಗ ವಿವೇಕಾನಂದ ಕಾಲೇಜು ರಸ್ತೆ ರೈಲ್ವೇ ಮೇಲ್ಸೆತುವೆ ನಿರ್ಮಿಸಲು ಕೇಂದ್ರ ರೈಲ್ವೇ ಇಲಾಖೆ 5.34 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ನಾವು ಪಟ್ಟ ಶ್ರಮ ಸಾರ್ಥಕವಾಗಿದೆ.

ಮುಂದಿನ ಚುನಾವಣೆಯಲ್ಲಿ ಪುನಃ ಶಾಸಕರಾಗಿ ಆಯ್ಕೆಯಾದರೆ, ಜನರು ನಿಮ್ಮಿಂದ ಏನು ನಿರೀಕ್ಷೆ ಇಟ್ಟುಕೊಳ್ಳಬಹುದು?

– ಪುತ್ತೂರನ್ನು ಜಿಲ್ಲಾ ಕೇಂದ್ರ ಮಾಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಪೂರಕವಾಗಿ ಎಸ್ಪಿ ಕಚೇರಿ ಪುತ್ತೂರಿಗೆ ಬರಲಿದೆ. ಇದಕ್ಕೆ ಬೇಕಾದ ಅಗತ್ಯ ಕೆಲಸಗಳನ್ನು ಮಾಡುತ್ತಿದ್ದೇವೆ. 100 ಬೆಡ್ ಸಾಮರ್ಥ್ಯದ ಪುತ್ತೂರು ಸಾರ್ವಜನಿಕ ಆಸ್ಪತ್ರೆಯನ್ನು 300 ಬೆಡ್‌ಗೆ ಮೇಲ್ದರ್ಜೆಗೇರಿಸಿ, ಮೆಡಿಕಲ್ ಕಾಲೇಜು ಮಾಡುವ ಸಿದ್ಧತೆಗಳು ನಡೆದಿವೆ. ನೇತ್ರಾವತಿ – ಕುಮಾರಧಾರ ನದಿಗಳು ಸಂಗಮವಾಗುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿ ಪುತ್ತೂರು ತಾಲೂಕಿಗೆ ಕುಡಿಯುವ ನೀರು ಕೊಡುಗೆಯಾಗಿ ನೀಡುವ ಯೋಜನೆಯೂ ನಮ್ಮ ಮುಂದಿದೆ. ಹೀಗೆ ಅನೇಕ ದೊಡ್ಡ ದೊಡ್ಡ ಯೋಜನೆಗಳು ನಮ್ಮ ಮುಂದಿದೆ. ಪುತ್ತೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ನಿರ್ವಹಿಸುತ್ತಿದ್ದು, ಯೋಜನೆಯ ಸಾಕಾರದ ಜೊತೆಗೆ ಇನ್ನಷ್ಟು ಹೊಸ ಯೋಜನೆಗಳನ್ನು ಪುತ್ತೂರಿಗೆ ತರಲಾಗುವುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top