ಈ ನಿಯಮ ಜಾರಿಗೆ ಬಂದರೆ ಹದಿಹರೆಯದವರಿಗೂ ಸಿಗುತ್ತದೆ ಮದ್ಯ
ಬೆಂಗಳೂರು: ಮದ್ಯ ಖರೀದಿ ಮತ್ತು ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪ್ರಕಾರ ಮದ್ಯ ಖರೀದಿಸುವ ವಯಸ್ಸು 21 ವರ್ಷ ಇದೆ. ಈಗ ಈ ಮಿತಿಯನ್ನು 18 ವರ್ಷಕ್ಕೆ ಇಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಜ.9ರಂದು ಕರಡು ಪ್ರಕಟಿಸಿದ್ದು, 30 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಅಧಿಕಾರಿ ವಿ. ಯಶವಂತ್ ನೇತೃತ್ವದಲ್ಲಿ ರಚಿಸಲಾದ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪ್ರಸ್ತಾವನೆಯನ್ನು ರಚಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ-1965ರ ನಿಬಂಧನೆಗಳ ಪ್ರಕಾರ, ಮದ್ಯದ ಖರೀದಿ ಮತ್ತು ಸೇವನೆಗೆ ಕನಿಷ್ಠ 18 ವರ್ಷ. ಆದರೆ ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಆಗಿದೆ. ಹೀಗಾಗಿ ಈ ಗೊಂದಲಗಳಿಗೆ ತೆರೆ ಎಳೆಯಲು ಕರ್ನಾಟಕ ಸರ್ಕಾರ ಮದ್ಯ ಸೇವನೆ ಮತ್ತು ಖರೀದಿ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲು ಮುಂದಾಗಿದೆ.
ವಯೋಮಿತಿಯನ್ನು ಕಡಿಮೆಗೊಳಿಸುವಂತೆ ಮದ್ಯ ವ್ಯಾಪಾರಸ್ಥರು ಒತ್ತಾಯಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಆದಾಯ ಹೆಚ್ಚುತ್ತದೆ. ಮದ್ಯ ಮಾರಾಟದಿಂದ 2019-20ರಲ್ಲಿ 21,583 ಕೋಟಿ ರೂ., 2021-22ರಲ್ಲಿ ಮದ್ಯ ಮಾರಾಟದಿಂದ ರಾಜ್ಯಕ್ಕೆ 26,377 ಕೋಟಿ ರೂ. ಆದಾಯವಾಗಿದೆ. ಗೋವಾ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಪುದುಚೇರಿಯಂತಹ ಕೆಲವು ರಾಜ್ಯಗಳು ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸಿವೆ.
ಆದರೆ ಈ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಒಂದೆಡೆ ಸರಕಾರ, ಹಲವು ಧಾರ್ಮಿಕ ಕೇಂದ್ರಗಳು, ಸಮಾಜ ಸೇವಾ ಸಂಘಟನೆಗಳು ಮದ್ಯದ ವ್ಯಸನಮುಕ್ತಿಗೋಸ್ಕರ ನಿರಂತರವಾಗಿ ಹೋರಾಟ ಮಾಡುತ್ತಿರುವಾಗ ಇನ್ನೊಂದೆಡೆ ಸರಕಾರ ಹದಿಹರೆಯದವರಿಗೆ ಮದ್ಯ ಸೇವಿಸಲು ಕುಮ್ಮಕ್ಕು ನೀಡಿದಂತಾಗುತ್ತದೆ. ಕುಡಿದು ವಾಹನ ಚಲಾಯಿಸಿದರೆ ದಂಡ ಹಾಕುವ ಸರಕಾರ ಇನ್ನೊಂದೆಡೆ ಯುವಕರಿಗೆ ಕುಡಿಯಲು ತಾನೇ ಮದ್ಯ ಕೊಡಲು ಮುಂದಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.