ಯಶಸ್ಸಿನ ಹಿಂದಿನ ಗುಟ್ಟು ತೆರೆದಿಟ್ಟ ರಘುರಾಮ್ ಪ್ರಭು
ಕನಸುಗಳು ಯಾರಿಗಿಲ್ಲ ಹೇಳಿ. ಎಲ್ಲರೂ ಕನಸು ಕಾಣುತ್ತಾರೆ. ಅದು ಹಗಲೋ, ಇರುಳೋ? ಅಂತು ಕನಸು ಕನಸೇ! ಆದರೆ ನನಸು? ಕಠಿಣ ದುಡಿಮೆ, ತಾಳ್ಮೆ, ಅಧಮ್ಯ ಉತ್ಸಾಹ ಜೊತೆಗೊಂದಿಷ್ಟು ಪ್ರೋತ್ಸಾಹ ಸಿಕ್ಕರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಮ್ಮ ಕನಸುಗಳು ನನಸಾಗಲೂ ಪರಿಶ್ರಮವೆಂಬ ಅಸ್ತ್ರದಿಂದ ಮಾತ್ರ ಸಾದ್ಯ. ಸದಾ ಅದರಲ್ಲೆ ನಮ್ಮ ಮನಸು ಹೊರಳಿದರೆ ಕನಸು ನನಸಾಗಲು ಸಾಧ್ಯ. ನಮ್ಮ ಸುತ್ತಮುತ್ತಲು ಪುಷ್ಪವರಳಿ ಪರಿಮಳ ಹರಡಿದಂತೆ ಸಾಧನೆಯ ಸುದ್ದಿ ಎಲ್ಲೆಲ್ಲೋ ಹರಡಿ ಲೋಕಖ್ಯಾತರನ್ನಾಗಿಸುತ್ತದೆ. ಕೂಲಿ ಕಾರ್ಮಿಕನ ಮಗ ಐ.ಎ.ಎಸ್ ಪಾಸ್ ಮಾಡಿದ ! ಐ.ಪಿ.ಎಸ್ ಪಾಸ್ ಮಾಡಿಕೊಂಡ ಆಟೋ ಡ್ರೈವರ್ ಮಗಳು ! ನೀಟ್ ಕ್ರಾಕ್ ಮಾಡಿದ, ಜೆ.ಇ.ಇ.ಯಲ್ಲಿ ಯಶಸ್ವಿಯಾದ, ಸಿ.ಇ.ಟಿಯಲ್ಲಿ ರ‍್ಯಾಂಕ್ ಬಂದ, ಸಿ.ಎ. ಕ್ಲಿಯರ್ ಮಾಡಿದ. ಹೀಗೆ ನಾನ ಬಗೆಯಲ್ಲಿ ಸಾಧಕರ ಯಶೋಗಾಥೆಯು ಅನಾವರಣಾಗೊಳ್ಳುತ್ತದೆ. ಇದಕ್ಕೊಂದು ಸೇರ್ಪಡೆ ಇತ್ತೀಚೆಗೆ ಸಿ.ಎ. ಕ್ಲಿಯರ್ ಮಾಡಿಕೊಂಡ ರಘುರಾಮ್ ಪ್ರಭು.
ಸಾಮಾಜಿಕ ಜಾಲತಾಣ ಪತ್ರಿಕೆಗಳಲ್ಲಿ, ಮಾದ್ಯಮಗಳಲ್ಲಿ, ಕ್ಯಾಟರಿಂಗ್ ಕೆಲಸ ಮಾಡಿಕೊಂಡು ಸಿ.ಎ ಪಾಸಾದ ಹೋಟೇಲ್ ಕಾರ್ಮಿಕನ ಮಗ ಎಂಬ ಶೀರ್ಷಿಕೆಯಡಿ ಇಂದು ರಘುರಾಮ್ ಪ್ರಭು ಮನೆಮಾತಾದ. ಅಲ್ಲಿಯವರೆಗೂ ರಘುರಾಮ್ ಯಾರೆಂದೆ ಗೊತ್ತಿರಲಿಲ್ಲ. ಆದರೆ ತನ್ನ ಸಾಧನೆಯಿಂದ ಇಂದು ತಮ್ಮ ಭಾಗದಲ್ಲಿ ಪರಿಚಿತನಾದ.
ಮಾತಿಗೆ ಸಿಕ್ಕ ರಘುರಾಮ್‌ನನ್ನು ನಿಮ್ಮ ಯಶಸ್ಸಿನ ಗುಟ್ಟೇನೆಂದು ಕೇಳಿದಾಗ, ಶಿಸ್ತು ಬದ್ಧತೆಯಿಂದ ಕೂಡಿದ ನಿರಂತರ ಪರಿಶ್ರಮ, ಪ್ರತಿದಿನ 8-9ಗಂಟೆಗಳ ಅಧ್ಯಯನ, ಸೋತರೂ ಮತ್ತೊಮ್ಮೆ ಯಶಸ್ವಿಯಾಗುವ ಹಂಬಲ. ಪರೀಕ್ಷೆಗೆ 3 ತಿಂಗಳಿರಬೇಕಾದರೆ ಓದಿದರೆ ಯಾವ ಪರೀಕ್ಷೆಯೂ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ನನ್ನದು 5ವರೆ ವರ್ಷಗಳ ನಿರಂತರ ತಪ್ಪಸ್ಸಿನ ಫಲ ಇದಾಗಿದೆ. ಪ್ರಾಥಮಿಕ ಶಿಕ್ಷಣವನ್ನು ನನ್ನ ಬೆಳ್ಳರಪಾಡಿಯಲ್ಲಿ, ಪ್ರೌಢ ಶಿಕ್ಷಣವನ್ನು ಹಿರಿಯಡ್ಕದಲ್ಲಿ ಮುಗಿಸಿದೆ. ವೈದ್ಯನಾಗಬೇಕೆಂಬ ಕನಸು ಇತ್ತು, ಬಡತನ ಅಡ್ಡಿಯಾಗಿತ್ತು. ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನಲ್ಲಿ ಕಾಮರ್ಸ್ ವಿಭಾಗವನ್ನು ಆಯ್ಕೆಮಾಡಿಕೊಂಡೆ. ಅಪ್ಪನ ಕನಸಿನಂತೆ ಸಿ. ಎ. ಕಡೆಗೆ ಗಮನಕೊಟ್ಟೆ. ಜ್ಞಾನಸುಧಾ ನನ್ನ ಓದುವ ದಿಕ್ಕನ್ನು, ನನ್ನ ಮನೋಭಾವವನ್ನು ಬದಲಿಸಿತು. ಹಂಬಲಕೆ ಬೆಂಬಲವಾಗಿ ನಿಲ್ಲುವ ಬೋಧಕ ವರ್ಗ, ಆರೋಗ್ಯಕರ ಸ್ಪರ್ಧೆ ನೀಡುವ ಗೆಳೆಯರ ಬಳಗ, ಮನದೊಳಗೆಯೇ ಗೆಲ್ಲಲೇ ಬೇಕೆಂಬ ಛಲ ನೀಡುವ ವಾತಾವರಣ ನನ್ನನು ಬೆಳೆಸಿತು. ಜ್ಞಾನಸುಧಾದದಲ್ಲಿನ ಕಲಿಕೆ ನನ್ನ ಬಾಳಿಗೆ ತಿರುವು ನೀಡಿತು. ಇಚ್ಚಾ ಶಕ್ತಿಯೊಂದಿದ್ದರೆ ಪದವಿ ವ್ಯಾಸಂಗ ಮಾಡದೆಯೇ ಸಿ.ಎ. ಪೂರ್ಣಗೊಳಿಸಲು ಸಾಧ್ಯವಿದೆ ತೋರಿಸಿಕೊಟ್ಟಿತು ಎಂದು ತನ್ನ ಯಶಸ್ಸನ್ನು ಬಿಚ್ಚಿಟ್ಟರು.
ಸಿ.ಎ ಆಗುವುದು ಹೇಗೆ? ಪಿಯುಸಿ ನಂತರ ದಿ ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ಇವರು ನಡೆಸುವ ಸಿ.ಎ ಫೌಂಡೇಶನ್ ಎಕ್ಸಾಮ್ ಬರೆದು ಅದರಲ್ಲಿ ಉತ್ತೀರ್ಣರಾಗಿ ಮುಂದೆ ಸಿ.ಎ.ಇಂಟರ್‌ಮಿಡಿಯೇಟ್(ಐ.ಪಿ.ಸಿ.ಸಿ) ಪರೀಕ್ಷೆಯನ್ನು ಎದುರಿಸಬೇಕು. (ಸಿ.ಎ.ಇಂಟರ್‌ಮಿಡಿಯೇಟ್ – ಗ್ರೂಪ್ 1 ಮತ್ತು ಗ್ರೂಪ್ 2 ಎಂಬೆರಡು ವಿಭಾಗಗಳಿದ್ದು ಒಟ್ಟು 8 ಪತ್ರಿಕೆಗಳು ಇರುತ್ತವೆ. ಇದರ ಪರೀಕ್ಷೆಯು ವರ್ಷಕ್ಕೆರಡು ಬಾರಿ ನಡೆಯುತ್ತದೆ.) ನಂತರ ಅನುಭವಸ್ಥ ಚಾರ್ಟೆಂಡ್ ಅಕ್ಕೌಂಟೆಂಟ್‌ನ ಹತ್ತಿರ ಅಧ್ಯಯನ ನಡೆಸಿ ಆರ್ಟಿಕಲ್‌ಶಿಪ್ ಅನುಭವವನ್ನು ಪಡೆದುಕೊಂಡು ಅಲ್ಲಿ ಪ್ರಮಾಣಪ್ರತ ಪಡೆಯತಕ್ಕದ್ದು. ಕೊನೆಯದಾಗಿ ಎರಡು ವಿಭಾಗಗಳಲ್ಲಿ ಒಟ್ಟು 8 ಪತ್ರಿಕೆಗಳ ಸಿ.ಎ. ಫೈನಲ್ ಪರೀಕ್ಷೆಯನ್ನು ಎದುರಿಸತಕ್ಕದ್ದು. ಮುಂದೆ ದಿ ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ಇವರಿಂದ ಅಧಿಕೃತವಾಗಿ ಸಿ.ಎ ಎಂಬ ಪದವಿ ಪ್ರಮಾಣ ಪತ್ರ ದೊರಕುವುದು.
ಹೌದು ಥಿಯೋಡರ್ ರೂಸ್ವೆಲ್ಟ್ ಹೇಳುತ್ತಾನೆ, ಕನಸುಗಳು ನೂರಾರು ಕಾಣಬಹುದು. ಅವನ್ನು ಸಾಕಾರಗೊಳಿಸುವುದು ಮುಖ್ಯ ಹಾಗೆಯೇ ಯಶಸ್ವಿಯಾಗಲು ಮಾತ್ರ ಪ್ರಯತ್ನಿಸಬೇಡಿ. ಅದಕ್ಕೆ ಬದಲು ಮೌಲ್ಯಯುತ ವ್ಯಕ್ತಿಯಾಗಲು ಯತ್ನಿಸಿ ಎಂಬ ಐನ್ಸ್ಟೈನ್ ಮಾತು ಮರೆಯಬೇಡಿ.