ಅವರ ಸಿನೆಮಾ, ಬದುಕು, ರಾಜಕೀಯ ಎಲ್ಲವೂ ವರ್ಣರಂಜಿತ

ತಮಿಳುನಾಡಿನ ಚಹರೆಯನ್ನೇ ಬದಲಾಯಿಸಿದ ಮಹಾನಾಯಕ!

ತಮಿಳುನಾಡಿನ ಸಿನಿಮಾ ರಂಗ, ರಾಜಕೀಯ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಚಹರೆಯನ್ನು ಬದಲಾಯಿಸಿದ ಓರ್ವ ವ್ಯಕ್ತಿ ಇದ್ದರೆ ಅದು ಎಂ.ಜಿ. ರಾಮಚಂದ್ರನ್. ಅವರ ಬದುಕಿನ ಪ್ರತಿ ಪುಟವೂ ಅವರ ಸಿನೆಮಾಗಳ ಹಾಗೆ ವರ್ಣರಂಜಿತ ಮತ್ತು ಸ್ಫೂರ್ತಿದಾಯಕ ಸಂಗತಿ.

ಅನಾಥ ಬಾಲ್ಯದ ಅಸಹಾಯಕತೆ































 
 

ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಎಂ.ಜಿ.ಆರ್. ಹುಟ್ಟಿದ್ದು ತುಳುನಾಡಿನಲ್ಲಿ ಅಲ್ಲ. ಅವರು ಹುಟ್ಟಿದ್ದು ಶ್ರೀಲಂಕಾದ
ಕ್ಯಾಂಡಿಯಲ್ಲಿ. ಅದೂ ಮಲಯಾಳಿ ಕುಟುಂಬದಲ್ಲಿ. ಎರಡೂವರೆ ವರ್ಷ ಪ್ರಾಯದಲ್ಲಿ ಅಪ್ಪನನ್ನು ಕಳೆದುಕೊಂಡಾಗ ತನ್ನ ಇಬ್ಬರು ಗಂಡು ಮಕ್ಕಳನ್ನು ಎದೆಗೆ ಅವುಚಿಕೊಂಡು ಅಮ್ಮ ಸತ್ಯಭಾಮ ಮಾಡದ ಕೆಲಸ ಇಲ್ಲ. ಈ ಕಷ್ಟಗಳ ನಡುವೆ ಅಣ್ಣ ತಮ್ಮಂದಿರಾದ ರಾಮಚಂದ್ರನ್ ಮತ್ತು ಚಕ್ರಪಾಣಿ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಡ್ರಾಪ್‌ಔಟ್ ಆದರು. ಹೊಟ್ಟೆಪಾಡಿಗೆ ಅವರು ಸೇರಿದ್ದು ನಾಟಕ ಮಂಡಳಿಯನ್ನು. ಆರಂಭದಲ್ಲಿ ರಾಮಚಂದ್ರನ್ ಮಾಡಿದ್ದು ಸ್ತ್ರೀ ಪಾತ್ರಗಳನ್ನು. ಮುಂದೆ ಅವರಿಬ್ಬರೂ ಪ್ರಸಿದ್ಧ ನಾಟಕ ಕಲಾವಿದರಾದರು.

ಹತ್ತೊಂಬತ್ತನೆಯ ವಯಸ್ಸಿಗೇ ಸಿನೆಮಾ ಹೀರೊ

1936ರಲ್ಲಿ ಸತೀ ಶೀಲವತಿ ಎಂಬ ಸಿನೆಮಾದ ಮೂಲಕ ತಮಿಳು ಸಿನೆಮಾ ರಂಗವನ್ನು ಪ್ರವೇಶ ಮಾಡಿದಾಗ ಎಂಜಿಆರ್‌ಗೆ ಕೇವಲ 19 ವರ್ಷ. ಯಾವುದೇ ಗಾಡ್‌ಫಾದರ್ ಅಥವಾ ಸಪೋರ್ಟರ್ ಇಲ್ಲದೆ ಅವರು ಸಿನಿಮಾರಂಗದಲ್ಲಿ ಅರ್ಧ ಶತಕಗಳ ಕಾಲ ಸೂಪರ್‌ಸ್ಟಾರ್ ಆಗಿ ಮಿಂಚಿದ್ದು ಸ್ವಂತ ಪ್ರತಿಭೆಯಿಂದ. ಆಗ ಅವರಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆಯುತ್ತಿದ್ದ ಕರುಣಾನಿಧಿ ಮುಂದೆ ಅವರ ರಾಜಕೀಯ ವೈರಿ ಆದರು ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು.

ರಾಜಕೀಯ ಗುರು ಅಣ್ಣಾದೊರೈ ಪ್ರಭಾವ

ಒಂದರ ಹಿಂದೆ ಒಂದು ಸಿನೆಮಾ ಸೂಪರ್ ಹಿಟ್ ಆಗುತ್ತಾ ಹೋದ ಹಾಗೆ ರಾಮಚಂದ್ರನ್ ತಮಿಳು ಸಿನಿಮಾದಲ್ಲಿ ‘ಡೆಮಿಗಾಡ್ ‘ ಎಂದು ಕರೆಸಿಕೊಂಡರು. ಅವರಿಗೆ ತಮಿಳುನಾಡಿನಲ್ಲಿ ಕೋಟಿ ಕೋಟಿ ಅಭಿಮಾನಿಗಳು ಸೃಷ್ಟಿಯಾದರು. ಜನರು ಅವರಿಗೆ ಇಟ್ಟ ಹೆಸರು ಪುರುಚ್ಚಿ ತಲೈವರ್ (ಕ್ರಾಂತಿಕಾರಿ ನಾಯಕ)! ಜನಪ್ರಿಯತೆಯ ಶಿಖರದಲ್ಲಿ ಇರುವಾಗಲೇ ಅವರು ರಾಜಕೀಯ ರಂಗ ಪ್ರವೇಶಿಸಿದರು. ಆಗ ತಮಿಳುನಾಡಿನ ರಾಜಕೀಯ ಪಿತಾಮಹ ಆದ ಅಣ್ಣಾದೊರೈ ಅವರ ಪ್ರಭಾವಕ್ಕೆ ಒಳಗಾಗಿ ಎಂಜಿಆರ್ ಅವರು ಅಣ್ಣಾದೊರೈ ಅವರ ದ್ರಾವಿಡ ಮುನ್ನೆತ್ರ ಕಳಗಮ್ ಪಕ್ಷದ ಯುವರಾಜ ಆದರು. ಅಣ್ಣಾದೊರೈ ಮತ್ತು ರಾಮಚಂದ್ರನ್ ಅವರ ಗುರು ಶಿಷ್ಯರ ಸಂಬಂಧ ಕೊನೆಯವರೆಗೆ ಮಧುರವಾಗಿಯೆ ಇತ್ತು. ಮುಂದೆ ಅಣ್ಣಾದೊರೈ ತೀರಿದ ಬಳಿಕ ರಾಜಕೀಯ ಪಕ್ಷದಲ್ಲಿ ಕರುಣಾನಿಧಿ ಕಾರುಬಾರು ಹೆಚ್ಚಾದ ಹಾಗೆ ಎಂಜಿಆರ್ ಅವರು ಪಕ್ಷದಿಂದ ಹೊರಗೆ ಬಂದು ಆಲ್ ಇಂಡಿಯಾ ಅಣ್ಣಾ ಡಿಎಂಕೆ ಎಂಬ ಹೊಸ ಪಕ್ಷದ ಸ್ಥಾಪನೆ ಮಾಡಿದರು. ಮುಂದೆ ಅವರೇ ಆ ಪಕ್ಷದ ಗೆಲ್ಲುವ ಕುದುರೆ ಆದರು. ಸತತವಾಗಿ ವಿಧಾನಸಭೆಗೆ ಆಯ್ಕೆ ಆದರು. ಸೋಲಿಲ್ಲದ ಸರದಾರ ಆದರು. ಜಯಲಲಿತ ಮೊದಲಾದವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದರು.

ಕರುಣಾನಿಧಿ vs ಎಂಜಿಆರ್

ಅವರಿಬ್ಬರ ವಿರಸ ಅನ್ನುವುದು ತಮಿಳುನಾಡು ರಾಜಕೀಯದ ವರ್ಣರಂಜಿತ ಅಧ್ಯಾಯ ಎಂದು ಮೊದಲೇ ಹೇಳಿದ್ದೇನೆ. ಆರಂಭದಲ್ಲಿ ಕರುಣಾನಿಧಿ ಬರೆದುಕೊಡುತ್ತಿದ್ದ ಸಂಭಾಷಣೆಗಳನ್ನು ಸಿನೆಮಾದಲ್ಲಿ ಹೇಳುತ್ತಿದ್ದ ಎಂಜಿಆರ್ ಮುಂದೆ ತಮ್ಮ ಪವರ್‌ಫುಲ್ ಭಾಷಣಗಳ ಮೂಲಕ ಕರುಣಾನಿಧಿಯವರನ್ನು ತಿವಿಯುತ್ತ ಹೋದರು. ಕರುಣಾನಿಧಿ ಏನು ಕಡಿಮೆ ತಾಕತ್ತಿನವರೇ? ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳ ಬೃಹತ್ ರ್ಯಾಲಿಗಳು ಉರಿಚೆಂಡಿನ ಭಾಷಣಗಳನ್ನು ಕೇಳಿದವು. ಮುಂದೆ ಎಂಜಿಆರ್ 1977ರಿಂದ 1987ರವರೆಗೆ ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು. ಅವರಿಬ್ಬರ ಸಂಘರ್ಷವನ್ನು ಕ್ಯಾನ್ವಾಸ್ ಮಾಡಿಕೊಂಡು ಮಣಿರತ್ನಂ ಅವರು ಮುಂದೆ ‘ಇರುವರ್‌ ‘ ಎಂಬ ಸಿನೆಮಾ ಕೂಡ ಮಾಡಿದರು.

ದಾಖಲೆಯ ಮೇಲೆ ದಾಖಲೆ

ಒಂದು ಕಡೆಯಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಆದ ಮೊದಲ ಸಿನೆಮಾ ನಟ ಎಂಬ ಕೀರ್ತಿ. ಇನ್ನೊಂದೆಡೆ ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಸಿನೆಮಾ ನಟ. ತಮಿಳುನಾಡಿನಲ್ಲಿ ಅತಿ ಹೆಚ್ಚು ದುಡ್ಡು ಮಾಡಿದ ಸಿನೆಮಾಗಳ ನಟ. ಅವರ ಉಲಗಮ್ ಸುಟ್ರು ವಾಲಿಬನ್, ಕಾವಲ್‌ಕಾರನ್, ರಿಕ್ಷಾಕಾರನ್ ಮೊದಲಾದ ಸಿನೆಮಾಗಳು ಭಾರಿ ಜನಪ್ರಿಯತೆ ಪಡೆದವು. ರಿಕ್ಷಾಕಾರನ್ ಸಿನೆಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ದೊರೆಯಿತು. ಎಂಜಿಆರ್‌ ಮತ್ತು ಜಯಲಲಿತ ಜೋಡಿ ತಮಿಳಿನಲ್ಲಿ ಸೂಪರ್‌ಹಿಟ್ ಜೋಡಿ ಆಯ್ತು. ಉದ್ದುದ್ದ ಸಂಭಾಷಣೆ ಒಪ್ಪಿಸುವ ರೀತಿ, ಫೈಟಿಂಗ್ ದೃಶ್ಯಗಳು, ಭಾವನಾತ್ಮಕ ಅಭಿನಯ… ಎಲ್ಲದರಲ್ಲೂ ಅವರು ಗೆದ್ದು ಬಂದರು. ತಮಿಳುನಾಡಿನ ಆರಾಧ್ಯ ದೇವರು ಆಗಿಬಿಟ್ಟರು. ಆ ಕಾಲದಲ್ಲಿ ತಮಿಳುನಾಡಿನ ಪ್ರತಿ ಮನೆಯಲ್ಲಿ ದೇವರ ಕೋಣೆಯಲ್ಲಿ ಎಂಜಿಆರ್ ಫೋಟೊ ಇಟ್ಟು ಜನರು ಪೂಜೆ ಮಾಡುತ್ತಿದ್ದರು. ಅದಕ್ಕೆ ಕಾರಣ ಅವರ ಅಭಿನಯ ಸಾಮರ್ಥ್ಯ, ಜನಪರ ಕಾಳಜಿ ಮತ್ತು ಸೇವಾ ಮನೋಭಾವಗಳು ಎಂದು ನನ್ನ ಅನಿಸಿಕೆ. ಹನ್ನೊಂದು ವರ್ಷಗಳ ದೀರ್ಘ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಿ ತನ್ನ ಬಜೆಟ್ಟಿನ ಶೇ.60 ದುಡ್ಡನ್ನು ಬಡವರ ಏಳಿಗೆಗೆ ಮೀಸಲು ಇಟ್ಟರು. 1987ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೆ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದರು. ಅವರು ಅಗಲಿ ಎಷ್ಟೋ ವರ್ಷಗಳ ನಂತರವೂ AIDMK ರ್ಯಾಲಿಗಳಿಗೆ ಜನರು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಅವರಿಗೆ ಮರಣೋತ್ತರವಾಗಿ ಮುಂದೆ ರಾಜೀವ್ ಗಾಂಧಿ ಸರಕಾರವು ಭಾರತ ರತ್ನ ಪ್ರಶಸ್ತಿ ನೀಡಿತು.

ಸತ್ತ ಮೇಲೂ ತಮಿಳರ ಹೃದಯದಲ್ಲಿ ಬದುಕಿದ್ದಾರೆ

ಇಂದು ತಮಿಳುನಾಡಿನ ಎಲ್ಲ ನಗರಗಳಲ್ಲಿ ಅವರ ಆಳೆತ್ತರದ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಅವರ ಹೆಸರಿನಲ್ಲಿ ನೂರಾರು ರಸ್ತೆಗಳು, ರೈಲ್ವೆ ಸ್ಟೇಷನ್‌ಗಳು, ವಿಮಾನ ನಿಲ್ದಾಣಗಳು, ಬಸ್‌ ನಿಲ್ದಾಣಗಳು ತಮಿಳುನಾಡಿನಲ್ಲಿ ಇವೆ. ಜನರು ಈಗಲೂ ಮುಗಿಬಿದ್ದು ಅವರ ಸಿನೆಮಾ ನೋಡುತ್ತಿದ್ದಾರೆ. ಅವರ ಬದುಕಿನ ಬಗ್ಗೆ 400ಕ್ಕಿಂತ ಹೆಚ್ಚು ಪುಸ್ತಕಗಳು ಬಂದಿವೆ ಮತ್ತು ಎಲ್ಲವೂ ಜನಪ್ರಿಯ ಆಗಿವೆ.
ತಮಿಳುನಾಡಿನ ಭಾವುಕ ಅಭಿಮಾನಿಗಳು ತಮಿಳುನಾಡಿನಲ್ಲಿ ಜನಿಸಿರದ, ತಮಿಳನೂ ಅಲ್ಲದ ಒಬ್ಬ ಸಿನೆಮಾ ಸ್ಟಾರನ್ನು ಲೆಜೆಂಡ್ ಮಾಡಿ ಪೂಜೆ ಮಾಡಿದ್ದು ಒಂದು ಅದ್ಭುತವೇ ಸರಿ.
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top