ಜ. 22: ದಕ್ಷಿಣ ಕನ್ನಡದಲ್ಲಿ ಸಂಘಟನೆ ಮಾಡಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಜಯಂತ್ಯೋತ್ಸವ ಸಂಸ್ಮರಣೆ

ಪುತ್ತೂರು: 1979ರಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ದಕ್ಷಿಣ ಕನ್ನಡಕ್ಕೆ ಬಂದಿದ್ದರು. ಆಗ ಒಕ್ಕಲುತನ ಮಾಡುತ್ತಿದ್ದ ಮನೆಗಳಲ್ಲಿ ನಿಂತು, ಇಲ್ಲಿನ ಕೃಷಿ ಕಾರ್ಯದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಸಂಘಟನೆಯ ಕಾರ್ಯಕ್ಕೂ ಚಾಲನೆ ನೀಡಿ, ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣಕ್ಕೆ, ಕೊಂಬೆಟ್ಟು ಐಟಿಐ ನಿರ್ಮಾಣಕ್ಕೆ ಕಾರಣಕರ್ತರಾದರು. ಅವರ ಈ ಎಲ್ಲಾ ಕೆಲಸಗಳನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಜ. 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣ ಸಮಿತಿ ದ.ಕ. ಜಿಲ್ಲೆಯ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ, ಪಾದಪೂಜೆ ಮಾಡುವ ಮೂಲಕ ಜಯಂತ್ಯೋತ್ಸವ ಸಂಸ್ಮರಣೆ ನಡೆಯಲಿದೆ. ಮಹಾಸ್ವಾಮೀಜ ಅವರು ಜೀವಂತವಿದ್ದಾಗ ಯಾವ ರೀತಿ ಜಯಂತ್ಯೋತ್ಸವ ಆಚರಿಸಲಾಗಿತ್ತೋ, ಅದೇ ರೀತಿಯ ಆಚರಣೆ ಪುತ್ತೂರಿನಲ್ಲಿ ನಡೆಯಲಿದೆ. ಬಳಿಕ ಈ ಪುತ್ಥಳಿಯನ್ನು ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನೂತನವಾಗಿ ಶಂಕುಸ್ಥಾಪನೆಗೊಳ್ಳಲಿರುವ ಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಮಾಹಿತಿ ನೀಡಿದರು.































 
 

ಪುರಪ್ರವೇಶ, ಮೆರವಣಿಗೆ, ಶಂಕುಸ್ಥಾಪನೆ, ಉದ್ಘಾಟನೆ:

ಜ. 22ರಂದು ಬೆಳಿಗ್ಗೆ 8 ಗಂಟೆಗೆ ಉಪ್ಪಿನಂಗಡಿ ಪೆರಿಯಡ್ಕದಲ್ಲಿ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಆಂಗ್ಲ ಮಾಧ್ಯಮ ಶಾಲೆಗೆ ಶಂಕುಸ್ಥಾಪನೆ ನೆರವೇರಲಿದೆ. ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ ಕ್ಷೇತ್ರಕ್ಕೆ ಮಹಾಸಂಸ್ಥಾನ ನೀಡಿರುವ ಕೊಡುಗೆಯನ್ನು ನೆನಪಿಸಿಕೊಳ್ಳಲಿರುವ ನೆಲೆಯಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದಿದೆ. ನಂತರ ದರ್ಬೆ ವೃತ್ತದ ಬಳಿ ಬರಲಿರುವ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭವ್ಯ ಮೆರವಣಿಗೆಯಲ್ಲಿ ಪುರಪ್ರವೇಶ ಮಾಡಿಸಲಾಗುವುದು.  ತೆರೆದ ವಾಹನದಲ್ಲಿ ಬೃಹತ್ ವಾಹನ ಜಾಥದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಕರೆತರಲಾಗುವುದು. ಮೆರವಣಿಗೆಯಲ್ಲಿ ರಾಜ್ಯದ ನಾನಾ ಕಲಾತಂಡಗಳು, ಜಿಲ್ಲೆಯ ಕಲಾತಂಡಗಳು, ಟ್ಯಾಬ್ಲೋಗಳು ವಿಶೇಷ ಆಕರ್ಷಣೆಯಾಗಿರಲಿದೆ. ಈ ಸಂದರ್ಭದಲ್ಲಿ ಪುತ್ತೂರು ಪೇಟೆಯನ್ನು ಶೃಂಗರಿಸುವ ಕೆಲಸವೂ ನಡೆಯಲಿದೆ ಎಂದರು.

ಜಯಂತ್ಯೋತ್ಸವ ಸಂಸ್ಮರಣೆ, ರಜತ ತುಲಾಭಾರ, ಗ್ರಂಥ ಅನಾವರಣ:

ಭವ್ಯ ಮೆರಣಿಗೆಯ ನಂತರ ಕೊಂಬೆಟ್ಟು ಐಟಿಐ ಕಾಲೇಜಿನ ನೂತನ ಸಭಾಂಗಣ, ಕಟ್ಟಡದ ಉದ್ಘಾಟನೆಯನ್ನು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ. ಬಳಿಕ ದೇವರಮಾರು ಗದ್ದೆಯಲ್ಲಿ ಹಾಕಲಾಗುವ ಬೃಹತ್ ವೇದಿಕೆಗೆ ಕರೆತಂದು, ಜಯಂತ್ಯೋತ್ಸವ ಸಂಸ್ಮರಣೆ, ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ಆಚರಣೆ ನಡೆಯಲಿದೆ. ಭಕ್ತರು ಸಮರ್ಪಿಸಲಿರುವ ಸುಮಾರು 70 ಕೆಜಿ ಬೆಳ್ಳಿಯಿಂದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ತುಲಾಭಾರವೂ ವೇದಿಕೆಯಲ್ಲೇ ನಡೆಯಲಿದೆ. ಇದೇ ಸಂದರ್ಭ ಶ್ರೀ ಡಾ. ಧರ್ಮಪಾಲನಾಥ ಮಹಾಸ್ವಾಮೀಜಿ ಅವರು ಮಂಡಿಸಿದ ಮಹಾಪ್ರಬಂಧ ಸಂಸ್ಕೃತ – ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನದ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.

ಗಣ್ಯರ ಉಪಸ್ಥಿತಿ:

ಸುಮಾರು 3 ಗಂಟೆಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಆರ್. ಅಶೋಕ್, ಗೃಹಮಂತ್ರಿ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಆರೋಗ್ಯ ಸಚಿವ ಸುಧಾಕರ್, ಗೋಪಾಲಯ್ಯ, ಅಬಕಾರಿ ಸಚಿವ ನಾರಾಯಣ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ,  ಒಕ್ಕಲಿಗ ಸಂಘ ಅಧ್ಯಕ್ಷ ಬಾಲಕೃಷ್ಣ ಸಿ.ಎನ್., ಒಕ್ಕಲಿಗ ನಿಗಮ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಮೊದಲಾದವರು ಮುಖ್ಯಅತಿಥಿಯಾಗಿರುವರು ಎಂದರು.

1 ಲಕ್ಷ ಜನ:

ಸುಮಾರು 1 ಲಕ್ಷ ಜನ ಸೇರುವೆ ನಿರೀಕ್ಷೆ ಇದ್ದು, ಇದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ರಾಜ್ಯಾದ್ಯಂತ ವಿವಿಧೆಡೆಗಳಿಂದ ಜನರು ಆಗಮಿಸಲಿದ್ದು, ಅವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಊಟೋಪಚಾರ, ವಸತಿ ವ್ಯವಸ್ಥೆ, ಚಪ್ಪರ – ಶಾಮಿಯಾನ, ಹೊರೆಕಾಣಿಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಚಾರ ದಟ್ಟಣೆಯನ್ನು ಸುವ್ಯವಸ್ಥೆಗೊಳಿಸಲು ಕ್ರಮ ವಹಿಸಲಾಗಿದೆ ಎಂದರು.

ಬೃಹತ್ ವೇದಿಕೆ:

120 ಅಡಿ ಉದ್ದ, 40 ಅಡಿ ಅಗಲದ ಬೃಹತ್ ವೇದಿಕೆಯಲ್ಲಿ ಜಯಂತ್ಯೋತ್ಸವ ಸಂಸ್ಮರಣೆ ನಡೆಯಲಿದೆ. ಇದರೊಂದಿಗೆ ರಜತ ತುಲಾಭಾರಕ್ಕಾಗಿಯೂ ಇದೇ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ದೇವರಮಾರು ಗದ್ದೆಯ ತುದಿಯಲ್ಲಿ ದೇವಳಕ್ಕೆ ಮುಖ ಮಾಡಿ ವೇದಿಕೆ ನಿರ್ಮಾಣ ಆಗಲಿದೆ ಎಂದು ಸಂಜೀವ ಮಠಂದೂರು ಮಾಹಿತಿ ನೀಡಿದರು.

21ರಂದು ಹೊರೆಕಾಣಿಕೆ:

ಬೆಳ್ಳೂರು ಕ್ರಾಸ್ನಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ವಿದ್ಯಾಸಂಸ್ಥೆಯನ್ನು ಆರಂಭಿಸುವಾಗ, ಸುತ್ತಮುತ್ತಲಿನ ಜನರಲ್ಲಿ ಮನೆಗಳಿಂದ ಒಂದೊಂದು ಮರಕ್ಕೆ ಒಂದೊಂದು ತೆಂಗಿನಕಾಯಿಯನ್ನು ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ಸಂಗ್ರಹವಾದ ಫಲಗಳನ್ನು ಬಳಸಿಕೊಂಡು, ವಿದ್ಯಾಸಂಸ್ಥೆಯನ್ನು ನಿರ್ಮಾಣ ಮಾಡಿದ್ದರು. ಇದೇ ನೆನಪಿನಲ್ಲಿ, ಪುತ್ತೂರಿನಲ್ಲಿ ನಡೆಯಲಿರುವ ಜಯಂತ್ಯೋತ್ಸವ ಸಂಸ್ಮರಣೆ ಕಾರ್ಯಕ್ರಮಕ್ಕೆ ಮೊದಲು ಜ. 21ರಂದು ಸಂಜೆ ದರ್ಬೆ ವೃತ್ತದಿಂದ ಹೊರೆಕಾಣಿಕೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಚಿದಾನಂದ ಬೈಲಾಡಿ, ಪುರುಷೋತ್ತಮ ಮುಂಗ್ಲಿಮನೆ, ಕಾರ್ಯದರ್ಶಿ ನಾಗೇಶ್ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸಮಿತಿ ಉಪಾಧ್ಯಕ್ಷ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಗೌರಿ ಬನ್ನೂರು, ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top