ಶ್ರೀಲಂಕಾಕ್ಕೆ ಹೀನಾಯ ಸೋಲು; ಸರಣಿ ಕ್ಲೀನ್‌ಸ್ವೀಪ್
ತಿರುವನಂತಪುರಂ: ಇಲ್ಲಿನ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 317 ರನ್‌ಗಳಿಂದ ಸೋಲಿಸಿದೆ. ಇದು ಏಕದಿನ ಇತಿಹಾಸದಲ್ಲೇ ಅತಿ ದೊಡ್ಡ ಗೆಲುವು. 2008ರಲ್ಲಿ ನ್ಯೂಜಿಲೆಂಡ್ ಟೀಮ್ ಐರ್ಲೆಂಡ್ ತಂಡವನ್ನು 290 ರನ್‌ಗಳಿಂದ ಸೋಲಿಸಿತ್ತು. ಇದು ಈ ವರೆಗಿನ ದಾಖಲೆಯಾಗಿತ್ತು. ಅದೇ ರೀತಿ 2007ರಲ್ಲಿ ಬರ್ಮುಡಾ ವಿರುದ್ಧ ಭಾರತ 257 ರನ್‌ಗಳ ಅಂತರದಲ್ಲಿ ಜಯ ಸಾಧಿಸಿತ್ತು.
ಭಾರತ 317 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿ ಮೊದಲ ಸ್ಥಾನದಲ್ಲಿದ್ದರೆ, 2008ರಲ್ಲಿ ನ್ಯೂಜಿಲೆಂಡ್ ತಂಡ 290ರನ್‌ಗಳ ಅಂತರದಲ್ಲಿ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. 2015ರಲ್ಲಿ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನವನ್ನು 275 ರನ್‌ಗಳಿಂದ ಗೆಲುವು ದಾಖಲಿಸಿತ್ತು. 2010ರಲ್ಲಿ ದಕ್ಷಿಣ ಆಫ್ರಿಕಾ ತಂಡ ಜಿಂಬಾಬ್ವೆ ವಿರುದ್ಧ 272 ರನ್‌ಗಳ ಗೆಲುವು ಸಾಧಿಸಿದರೆ, 2012ರಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ಎದುರು 258ರನ್‌ಗಳ ಗೆಲುವು ದಾಖಲಿಸಿತ್ತು
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 390 ರನ್ ಗಳಿಸಿತು. ಶುಭಮನ್ ಗಿಲ್ 116 ರನ್ ಮತ್ತು ವಿರಾಟ್ ಕೊಹ್ಲಿ ಅಜೇಯ 166 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ 22 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಬರೀ 73 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತದ ಪರ ಮೊಹಮ್ಮದ್ ಸಿರಾಜ್ ಗರಿಷ್ಠ ನಾಲ್ಕು ವಿಕೆಟ್ ಪಡೆದು ಒಂದು ರನೌಟ್ ಮಾಡಿದರು. ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು. ಭಾರತ 3-0 ಅಂತರದಲ್ಲಿ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಇಲ್ಲಿಯವರೆಗೂ ಶ್ರೀಲಂಕಾ ತಂಡವನ್ನು ಭಾರತ ಒಟ್ಟು ನಾಲ್ಕು ಬಾರಿ ಕ್ಲೀನ್ ಸ್ವೀಪ್ ಮಾಡಿದಂತಾಯಿತು. ಭಾರತ ಮೊದಲ ಏಕದಿನ ಪಂದ್ಯವನ್ನು 67 ರನ್‌ಗಳಿಂದ ಮತ್ತು ಎರಡನೇ ಏಕದಿನ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.